ದುರಂತಲ್ಲೂ ಮೂಡುವ ಬಣ್ಣಬಣ್ಣದ ಚಿತ್ತಾರ

ಚಿತ್ರ : ಉರ್ವಿ
ನಿರ್ಮಾಪಕ : ಬಿ.ಆರ್.ಪಿ. ಭಟ್
ನಿರ್ದೇಶಕ : ಪ್ರದೀಪ್ ವರ್ಮ
ತಾರಾಗಣ : ಅಚ್ಯುತ್ ಕುಮಾರ್, ಭವಾನಿ ಪ್ರಸಾದ್. ಶ್ರುತಿ ಹರಿಹರನ್, ಶ್ರದ್ಧಾ, ಶ್ವೇತ ಪಂಡಿತ್, ಮಧುಕರ್ ಮುಂತಾದವರು
ರೇಟಿಂಗ್ : ***

ಹೆಣ್ಣು ತನ್ನನ್ನು ತಾನು ರಕ್ಷಿಸಿಕೊಳ್ಳಬಲ್ಲಳು ಮತ್ತು ರಕ್ಷಿಸಿಕೊಳ್ಳುತ್ತಾಳೆ ಎನ್ನುವುದನ್ನು ಹೇಳಲು ವೇಶ್ಯಾವಾಟಿಕೆಯ ಕಥಾವಸ್ತುವನ್ನು ಆಯ್ಕೆ ಮಾಡಿಕೊಂಡಿರುವ ಚಿತ್ರ ಉರ್ವಿ. ಮೋಸದ ಜಾಲ ಹೆಣೆದು ವೇಶ್ಯಾವಾಟಿಕೆಯ ಕೂಪಕ್ಕೆ ತಳ್ಳಲ್ಪಟ್ಟ ರೋಜಿ, ಡೇಸಿ ಮತ್ತು ಆಶಾ ಸಿಡಿದೆದ್ದು ತಮ್ಮ ಮೇಲೆ ದೌರ್ಜನ್ಯ ನಡೆಸಿದವರನ್ನು ಗುಂಡಿಟ್ಟು ಕೊಲ್ಲುತ್ತಾರೆ.
ಕೋಟೆಯಂಥ ಮನೆಯಲ್ಲಿ ವೇಶ್ಯಾವಾಟಿಕೆ ನಡೆಸುವ ಬಾಬಿ ತನ್ನ ನಂತರದ ಅಲ್ಲಿಯ ನಾಯಕಿ ಎಂದು ಬೆಳೆಸಿದ್ದ ಡೇಸಿಯೇ ಅವಳನ್ನು ಕೊಲ್ಲುತ್ತಾಳೆ. ಅದಕ್ಕೆ ಕಾರಣವಾಗುವುದು ಡೇಸಿ ಅಲ್ಲಿಯೇ ಬೆಳೆಸುತ್ತಿದ್ದ ಅವಳ ತಂಗಿ ರಶ್ಮಿಯ ಸಾವು, ಅಕ್ಕನ ಮೇಲೆ ಅತ್ಯಾಚಾರ ನಡೆಸಿ ತಂದೆಯನ್ನು ಕೊಂದಿರುವ ದೇವರುಗುಡ್ಡನ ಕ್ರೂರ ಮುಖವನ್ನು ಬಯಲು ಮಾಡಿ ಅವನ ಮಗಳೆ ತಿರುಗಿಬೀಳುವಂತೆ ಮಾಡುತ್ತಾಳೆ ರೋಜಿ, ಅದೇ ದೇವರುಗುಡ್ಡನೇ ಅಮಾಯಕ ಹೆಣ್ಣುಮಕ್ಕಳನ್ನು ಮೋಸದಿಂದ ವೇಶ್ಯಾವಾಟಿಕೆಗೆ ತಂದುಬಿಡುವವನಾಗಿರುತ್ತಾನೆ. ಅವನ ಜಾಲಕ್ಕೆ ಆಶಾ ಬೀಳಲು ಅವಳ ಗೆಳೆಯನೇ ಕಾರಣನಾಗಿರುತ್ತಾನೆ ಆ ಗೆಳೆಯನನ್ನೇ ಕೊಲ್ಲುತ್ತಾಳೆ ಆಶಾ.
ಸಮಾಜದ ಕರಾಳ ಮುಖಕ್ಕೆ ಕನ್ನಡಿ ಹಿಡಿದು ಪರಿಹಾರ ಸೂಚಿಸುವ ಕೆಲಸವನ್ನು ಉರ್ವಿ ಚಿತ್ರ ಮಾಡಿದೆ. ಆದರೆ ಕಥಾವಸ್ತು ಎಲ್ಲಾ ವರ್ಗವನ್ನು ತಲುಪುವಂಥಹದಲ್ಲ. ದೇವರಗುಡ್ಡನ ಮಗಳು ತನ್ನ ವಯಸ್ಸಿನ ಹೆಣ್ಣುಮಕ್ಕಳನ್ನು ಹಾಸಿಗೆಯಾಗಿಸಿಕೊಳ್ಳುವ ತಂದೆಗೆ ಕತ್ತಲಿನಲ್ಲಿ ಬೇರೆ ಹೆಣ್ಣಾ, ಮಗಳಾ ಎನ್ನುವುದು ಗೊತ್ತಾಗುವುದಿಲ್ಲವೆಂದು ಸುಖಿಸುವಂಥೆ ಆಹ್ವಾನಿಸುವ ಮಾತನಾಡುವುದು ಪ್ರೇಕ್ಷಕರು ಅರಗಿಸಿಕೊಳ್ಳುವುದು ಕಷ್ಟವಾದದ್ದು. ಇಂಥ ಅಂಶಗಳು ಹೆಚ್ಚಾಗಿರುವುದರಿಂದ ಉರ್ವಿ ಎಲ್ಲಾ ವರ್ಗದವರೂ ನೋಡಬಹುದಾದ ಚಿತ್ರ ಎನಿಸುವುದಿಲ್ಲ.
ನಿರ್ದೇಶಕ ಪ್ರದೀಪ್ ವರ್ಮ ಮೂಲತಃ ಕುಂಚ ಕಲಾವಿದರಾಗಿರುವುದರಿಂದ ಚಿತ್ರದ ಪ್ರಣಯ, ಕೊಲೆ ಪ್ರತಿ ದೃಶ್ಯನ್ನು ಚಿತ್ತಾರವಾಗಿಸಿ ಹೆಣೆದಿದ್ದಾರೆ. ದೃಶ್ಯದಲ್ಲಿನ ಬಣ್ಣಗಳನ್ನು ಆಕರ್ಷಕವಾಗಿ ಕಟ್ಟಿಕೊಟ್ಟಿದ್ದಾರೆ. ಆದರೆ ತುಂಬಾ ದುರಂತ ವಿಚಾರಗಳನ್ನು ಮತ್ತು ಪ್ರೀತಿಯನ್ನು ಆಧ್ಯಾತ್ಮಿಕವಾಗಿಯೂ ಹೇಳಲು ಪ್ರಯತ್ನಿಸಿರುವುದರಿಂದ ಚಿತ್ರ ಪ್ರೇಕ್ಷಕರನ್ನು ಸರಳವಾಗಿ ತಲುಪುವುದಿಲ್ಲ. ಶ್ರುತಿ ಹರಿಹರನ್, ಭವಾನಿ ಪ್ರಕಾಶ್, ಶ್ವೇತ ಪಂಡಿತ್, ಶ್ರದ್ಧಾ ಶ್ರೀನಾಥ್ ಮತ್ತು ಅಚ್ಯುತ್ ಕುಮಾರ್ ಪಾತ್ರಗಳು ಸಿನಿಮೀಯವಾಗಷ್ಟೇ ಇರುವುದರಿಂದ ಪ್ರೇಕ್ಷಕರು ಪಾತ್ರಗಳು ನಮ್ಮ ನಡುವೆ ಇರುವಂಥವು ಅಥವಾ ಎಲ್ಲೋ ನೋಡಿದ್ದೇವೆ ಎಂದು ಭಾವಿಸಲು ಆಗುವುದಿಲ್ಲ. ಅವರೆಲ್ಲರೂ ಪಾತ್ರಗಳನ್ನು ಮುಕ್ತವಾಗಿ ಆಳಕ್ಕಿಳಿದು ಅಭಿನಯಿಸಿದ್ದಾರೆ. ಛಾಯಾಗ್ರಾಹಕ ಆನಂದ್ ಸುಂದರೇಶ್ ಅವರ ನೆರಳು-ಬೆಳಕಿನ ಸಂಯೋಜನೆ ವಿಶೇಷವಾಗಿ ಗಮನ ಸೆಳೆಯುತ್ತದೆ.
-ಕೆ.ಬಿ. ಪಂಕಜ
_________________________________________________________________________________________

Leave a Comment