ದುಬೈನಲ್ಲಿ ವಂಚಕ ಮನ್ಸೂರ್

ಬೆಂಗಳೂರು, ಜೂ. ೧೮- ಅಧಿಕ ಬಡ್ಡಿಯ ಆಸೆ ತೋರಿಸಿ ಬಹುಕೋಟಿ ವಂಚನೆ ನ‌ಡೆಸಿ ಪರಾರಿಯಾಗಿರುವ ಐಎಂಎ ಕಂಪನಿ ಮಾಲೀಕ ಮನ್ಸೂರ್‌ಖಾನ್ ದುಬೈನಲ್ಲಿ ಪತ್ತೆಯಾಗಿದ್ದಾನೆ.
ದುಬೈನಿಂದ 122 ಕಿ,ಮೀ ದೂರದಲ್ಲಿರುವ ಬೀಚ್ ಸಿಟಿಯ ರಾಸ್‌-ಆಲ್-ಕೈಯಂ ಬಳಿ ಐಎಂಎ ವಂಚಕ ಮೊಹ್ಮದ್ ಮನ್ಸೂರ್ ಪತ್ತೆಯಾಗಿದ್ದಾನೆ. ಆದರೆ, ಇದನ್ನು ಐಎಂಎ ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ ಅಧಿಕಾರಿಗಳು ನಿರಾಕರಿಸಿದ್ದಾರೆ.
ರಾಜ್ಯದಿಂದ ಕಳೆದ ಜೂ. 8 ರಂದು ಪರಾರಿಯಾಗಿದ್ದ ಮನ್ಸೂರ್‌ಖಾನ್, ದುಬೈಗೆ ಹೋಗಿರುವುದು ಆತನ ಪಾಸ್‌ಪೋರ್ಟ್ ಪರಿಶೀಲನೆಯಲ್ಲಿ ಪತ್ತೆಯಾಗಿತ್ತು. ಅದರ ಆಧಾರದ ಮೇಲೆ ಕಣ್ಣಿಟ್ಟಿದ್ದ ಪೊಲೀಸರಿಗೆ ದುಬೈನಲ್ಲಿ ಆತ ಪತ್ತೆಯಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಮೌಲ್ವಿ ಒಬ್ಬರಿಂದ ಮನ್ಸೂರ್‌ನ ಸುಳಿವು ಸಿಕ್ಕಿದೆ. ಇಂಟರ್‌ನೆಟ್ ಕಾಲ್‌ನಲ್ಲಿ ಮನ್ಸೂರ್ ಮೌಲ್ವಿ ಶೋಯಬ್‌ನನ್ನು ನಿರಂತರವಾಗಿ ಸಂಪರ್ಕಿಸುತ್ತಿದ್ದ ಮನ್ಸೂರ್, ಗಂಟೆಗೊಮ್ಮೆ ಫೇಸ್‌ಬುಕ್ ಆನ್‌ಲೈನ್‌ನಲ್ಲಿ ಮಾಹಿತಿ ವಿನಿಮಯ ಮಾಡುತ್ತಿದ್ದ.
ಶೋಯಬ್‌ನ ಇಂಟರ್‌ನೆಟ್ ಕಾಲ್ ಮೇಲೆ ಕಣ್ಣಿಟ್ಟಿದ್ದ ಪೊಲೀಸರು ಮನ್ಸೂರ್ ಮೆಸೆಂಜರ್ ಮೂಲಕ ಮೌಲ್ವಿಗೆ ಕರೆ ಮಾಡುತ್ತಿದ್ದನ್ನು ಪತ್ತೆ ಹಚ್ಚಿದ್ದಾರೆ.
ಹೆಣ್ಣೂರು ರಸ್ತೆಯಲ್ಲಿ ಮದರಸ ನಡೆಸುತ್ತಿದ್ದ ಶೋಯಬ್ ಜತೆ ಮನ್ಸೂರ್‌ಗೆ ನಿಕಟ ಸಂಪರ್ಕವಿತ್ತು. ನಗರದಲ್ಲಿದ್ದಾಗ ಶೋಯಬ್‌ಗೆ ಮದರಸಗಳನ್ನು ನಿರ್ಮಾಣ ಮಾಡಲು ಹಣಕಾಸಿನ ನೆರವು ನೀಡಿದ್ದ ಎಂದು ಮೂಲಗಳು ತಿಳಿಸಿವೆ.
ಜೂ. 8 ರಂದು ಪರಾರಿ
ಈ ನಡುವೆ ಮನ್ಸೂರ್ ಕಳೆದ ಜೂ. 8 ರಂದು ದುಬೈಗೆ ಹೋಗಿರುವುದು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಯಾಣಿಕರ ಮಾಹಿತಿಯಿಂದ ಪತ್ತೆಯಾಗಿದೆ. ಆದರೆ, ದುಬೈನ ಯಾವ ಭಾಗದಲ್ಲಿ ಇದ್ದಾನೆ ಎಂಬುದು ಪತ್ತೆಯಾಗಿಲ್ಲ.
ದುಬೈನಲ್ಲಿ ಮನ್ಸೂರ್‌ಖಾನೆ ಪತ್ತೆಯಾಗಿರುವ ಬಗ್ಗೆ ಯಾವುದೇ ಮಾಹಿತಿ ನೀಡಲು ವಿಶೇಷ ತನಿಖಾ ತಂಡ (ಎಸ್‌ಐಟಿ) ಅಧಿಕಾರಿಗಳು ನಿರಾಕರಿಸಿದ್ದಾರೆ. ಮನ್ಸೂರ್ ದುಬೈಗೆ ಪರಾರಿಯಾಗಿರುವುದು ಗೊತ್ತಿದೆ. ಆತ ಎಲ್ಲಿ ಅಡಗಿದ್ದಾನೆ ಎಂಬುದರ ಬಗ್ಗೆ ನಿಖರವಾದ ಮಾಹಿತಿ ಇಲ್ಲ ಎಂದು ಎಸ್‌ಐಟಿಯಲ್ಲಿರುವ ಡಿಸಿಪಿ ಗಿರೀಶ್ ಅವರು ತಿಳಿಸಿದ್ದಾರೆ.

* ಐಎಂಎ ಮಾಲೀಕ ಮೊಹ್ಮದ್ ಮನ್ಸೂರ್‌ಖಾನ್ ದುಬೈನಲ್ಲಿ ಪತ್ತೆ
* ದುಬೈನ ಬೀಚ್‌ಸಿಟಿ ಬಳಿ ಮನ್ಸೂರ್ ಅಡಗಿರುವ ಮಾಹಿತಿ.
* ಇಂಟರ್‌ನೆಟ್ ಕಾಲ್‌ನಿಂದ ಮನ್ಸೂರ್ ಮಾಹಿತಿ ಪತ್ತೆ.
* ಜೂ. 8 ರಂದೇ ಪರಾರಿಯಾಗಿದ್ದ ಮನ್ಸೂರ್.
* ಮನ್ಸೂರ್ ಪತ್ತೆ ಬಗ್ಗೆ ಮಾಹಿತಿ ನೀಡಲು ಎಸ್‌ಐಟಿ ನಿರಾಕರಣೆ.

Leave a Comment