ದುಬಾರಿ ಶುಕ್ಲ ವಿಧಿಸುತ್ತಿರುವ ಖಾಸಗೀ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಡಿಸಿಗೆ ಮನವಿ

ಬಳ್ಳಾರಿ, ಮೇ 10: ಜಿಲ್ಲೆಯ ಖಾಸಗೀ ಶಿಕ್ಷಣ ಸಂಸ್ಥೆಗಳು ಪಡೆಯುತ್ತಿರುವ ಡೋನೇಷನ್ ಮತ್ತು ಹೆಚ್ಚಿನ ಶುಲ್ಕ ವಿಧಿಸುತ್ತಿರುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಂಬೇಡ್ಕರ್ ಸೇನೆ ಜಿಲ್ಲಾ ಘಟಕದ ಪದಾಧಿಕಾರಿಗಳು ನಿನ್ನೆ ಜಿಲ್ಲಾಧಿಕಾರಿ ಡಾ. ರಾಮ್ ಪ್ರಸಾತ್ ಮನೋಹರ್ ಅವರಿಗೆ ಮನವಿ ಸಲ್ಲಿಸಿದರು.

ಜಿಲ್ಲೆಯಲ್ಲಿ ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಣ ಕ್ಷೇತ್ರವನ್ನು ವಾಣಿಜ್ಯ ಕ್ಷೇತ್ರವನ್ನಾಗಿ ಪರಿವರ್ತಿಸಿಕೊಂಡಿದ್ದು, ಖಾಸಗೀ ಶಿಕ್ಷಣ ಸಂಸ್ಥೆಗಳು ಸರಕಾರದ ಯಾವುದೇ ನೀತಿ ನಿಯಮಗಳನ್ನು ಪಾಲಿಸದೇ ಮನಸೋ ಇಚ್ಛೆ ದುಭಾರಿ ಶುಲ್ಕವನ್ನು ವಸೂಲಿ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಸರಕಾರದ ಆದೇಶದ ಪ್ರಕಾರ ಕನಿಷ್ಠ 1500 ರು. ದಿಂದ 10 ಸಾವಿರ ರು. ವರೆಗೆ ಅಭಿವೃದ್ಧಿ ಶುಲ್ಕ ಪಡೆಯಲು ಖಾಸಗೀ ಶಿಕ್ಷಣ ಸಂಸ್ಥೆಗಳಿಗೆ ಅವಕಾಶವಿದೆ. ಆದರೆ, ಖಾಸಗೀ ಶಿಕ್ಷಣ ಸಂಸ್ಥೆಗಳು ಶಿಕ್ಷಣ ಕ್ಷೇತ್ರವನ್ನು ವ್ಯಾಪಾರಿಕರಣ ಕೇಂದ್ರಗಳನ್ನಾಗಿ ಪರಿವರ್ತಿಸಿಕೊಂಡಿವೆ ಎಂದು ದೂರಿದರು.

ಮಕ್ಕಳಿಗೆ ಪಠ್ಯ ಪುಸ್ತಕಗಳು ಮತ್ತು ಶಾಲೆ ಸಮವಸ್ತ್ರಗಳನ್ನು ಶಾಲೆಯಲ್ಲೇ ತೆಗೆದುಕೊಳ್ಳಬೇಕು ಎಂದು ಪೋಷಕರ ಮೇಲೆ ಒತ್ತಡ ಹೇರುತ್ತಾರೆ. ಇದರಿಂದ ಪೋಷಕರಿಗೆ ತೊಂದರೆಯಾಗುತ್ತಿದೆ. ಅಲ್ಲದೆ, ಒಬ್ಬ ವಿದ್ಯಾರ್ಥಿಗೆ ಕನಿಷ್ಠ 70 ಸಾವಿರದಿಂದ ಒಂದು ಲಕ್ಷ ರು. ವರೆಗೆ ಶುಲ್ಕವನ್ನು ವಸೂಲಿ ಮಾಡುತ್ತಿದ್ದಾರೆ. ಕೂಡಲೇ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ ಅವರು ಸೂಕ್ತ ಕ್ರಮಕೈಗೊಳ್ಳದಿದ್ದಲ್ಲಿ ಖಾಸಗೀ ಶಿಕ್ಷಣ ಸಂಸ್ಥೆಗಳ ವಿರುದ್ಧ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಸೇನೆ ಜಿಲ್ಲಾಧ್ಯಕ್ಷ ಡಿ. ವಿಜಯಕುಮಾರ, ಜಿಲ್ಲಾ ಕಾರ್ಯಾಧ್ಯಕ್ಷ ಎಸ್. ಮೇಘನಾಥ್ ಸೇರಿದಂತೆ ಮತ್ತಿತರರು ಹಾಜರಿದ್ದರು.

Leave a Comment