ದುಬಾರಿ ದಂಡಕ್ಕೂ ಬಗ್ಗದ ಜನ….

ದಾವಣಗೆರೆ.ಸೆ.23; ಅಪಘಾತ ತಡೆಗಾಗಿ ಹಾಗೂ ಸುಗಮ ಸಂಚಾರಕ್ಕಾಗಿ ಕಟ್ಟುನಿಟ್ಟಿನ ಕಾನೂನುಗಳನ್ನು ತಂದರೂ ಸಹ ಸಾರ್ವಜನಿಕರು ಸಂಚಾರ ನಿಯಮ ಪಾಲಿಸದಿರುವುದು ಮಾತ್ರ ದುರಂತವೇ ಸರಿ. ದುಬಾರಿ ದಂಎದ ಪ್ರಯೋಗ ಮಾಡಿದರೂ ಸಹ ಯಾವುದೇ ಬದಲಾವಣೆಗಳು ಕಾಣುತ್ತಿಲ್ಲ. ಕೇಂದ್ರ ಸರ್ಕಾರ ಅಪ್ರಾಪ್ತ ವಯಸ್ಸಿನ ಮಕ್ಕಳು ವಾಹನ ಚಾಲನೆ ಮಾಡದಿರಲಿ ಎಂದು 25000 ದಂಡ ಹಾಗೂ ಮೂರು ತಿಂಗಳ ಜೈಲುವಾಸ,  ವಾಹನ ನೋಂದಣಿ ರದ್ದು ಮಾಡುವಂತಹ ಕಟ್ಟುನಿಟ್ಟಿನ ಕಾನೂನು ಜಾರಿಗೊಳಿಸಿದ್ದರೂ ಸಹ ಪೋಷಕರು ತಮ್ಮ ಮಕ್ಕಳ ಕೈಯಲ್ಲಿ ವಾಹನ ನೀಡುತ್ತಿದ್ದಾರೆ. ಅಪ್ರಾಪ್ತ ಮಕ್ಕಳು ಯಾವುದೇ ಸಂಚಾರಿ ನಿಯಮ ಗೊತ್ತಿಲ್ಲದೆ ಅಡ್ಡಾದಿಡ್ಡಿಯಾಗಿ ಸಂಚರಿಸಿ ಅಪಘಾತ ಮಾಡಿಕೊಂಡು ಪ್ರಾಣ ಕಳೆದುಕೊಂಡಿರುವ ಹಲವಾರು ಉದಾಹರಣೆಗಳು ಕಣ್ಣೆದುರಿಗೆ ಇದ್ದರು ಪ್ರತಿದಿನ ಮುಂಜಾನೆ ಟ್ಯೂಷನ್ ಮತ್ತು ಸ್ಕೂಲ್ ಗಳಿಗೆ ಒಂದೇ ಗಾಡಿಯಲ್ಲಿ ಮೂರು ಜನ ಸಂಚರಿಸುತ್ತಿರುವುದು ಪ್ರತಿದಿನದ ದೃಶ್ಯವಾಗಿದೆ. ದಾವಣಗೆರೆ ನಗರದ ವಿವಿಧ ಬಡಾವಣೆಗಳಲ್ಲಿರುವ ಕಾಲೇಜುಗಳ ಮಾರ್ಗದಲ್ಲಿ ಈ ರೀತಿಯ ಸಂಚಾರ ಪ್ರತಿನಿತ್ಯ ಕಂಡುಬರುತ್ತಿದೆ. ಹೆಲ್ಮೆಟ್ ಧರಿಸುವುದಿಲ್ಲ ಜೊತೆಗೆ ತ್ರಿಬಲ್ ರೈಡಿಂಗ್ ನಡೆಸುತ್ತಾರೆ. ದಂಡಕ್ಕೂ ಬಗ್ಗದ ಜನರು ತಮ್ಮ ಮಕ್ಕಳ ಕೈಯಲ್ಲಿ ವಾಹನ ನೀಡಿ ಸುಮ್ಮನಾಗುತ್ತಾರೆ. ಆದ್ದರಿಂದ ಸಂಚಾರಿ ಪೊಲೀಸರು ಕಾಲೇಜುಗಳ ಹತ್ತಿರ ಆಯಕಟ್ಟಿನ ಜಾಗದಲ್ಲಿ ನಿಂತು ಬಿಗಿ ಮಾಡಿದರೆ ಇದೆಲ್ಲವನ್ನು ಸರಿಮಾಡಲು ಸಾಧ್ಯ ಹಾಗೂ ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿದಾಗ ಅಪ್ರಾಪ್ತ ಮಕ್ಕಳ ವಾಹನ ಚಾಲನೆ ತಡೆಗಟ್ಟ ಬಹುದಾಗಿದೆ. ಈ ಬಗ್ಗೆ ಸಂಚಾರಿ ಪೋಲಿಸರು ಕಟ್ಟುನಿಟ್ಟಿನ ಕ್ರಮ ವಹಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Leave a Comment