ದೀಪಿಕಾಳ ಲುಕ್‌ಗೆ ಆಸಿಡ್ ದಾಳಿ ಸಂತ್ರಸ್ಥೆ ಮೆಚ್ಚುಗೆ

ಮುಂಬೈ, ಡಿ ೨೩- ಆಸಿಡ್ ಸಂತ್ರಸ್ಥೆ ಪಾತ್ರ ನಿರ್ವಹಿಸಿದ ಬಾಲಿವುಡ್ ನಟಿ ಹಾಗೂ ಕನ್ನಡತಿ ದೀಪಿಕಾ ಪಡುಕೋಣೆಯನ್ನು ಸ್ವತಃ ಸಂತ್ರಸ್ಥೆ ಲಕ್ಷ್ಮೀ ಅಗರ್ವಾಲ್ ಹಾಡಿ ಹೊಗಳಿದ್ದಾರೆ.

ಬಾಲಿವುಡ್ ಸದ್ಯ ಸದ್ದು ಮಾಡುತ್ತಿರುವ ಛಪಾಕ್ ಚಿತ್ರದಲ್ಲಿ ದೀಪಿಕಾ ಆಸಿಡ್ ಸಂತ್ರಸ್ಥೆ ಪಾತ್ರ ನಿರ್ವಹಸುತ್ತಿದ್ದಾರೆ. ಆ ಪಾತ್ರದಲ್ಲಿ ಕಂಡು ಸ್ವತಃ ದೀಪಿಕಾ ನನ್ನನೇ ಹೋಲುತ್ತಾರೆ. ಆಕೆಯ ಶ್ರಮ ನಿಜಕ್ಕೂ ಗಮನಾರ್ಹ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಜನರಿಗೆ ನನ್ನ ಮುಖವನ್ನು ನೋಡಲು ಇಷ್ಟವಿಲ್ಲದ ಸಮಯವೊಂದಿತ್ತು, ಕೆಲವರಿಗೆ ಹೆದರಿಕೆಯಾಗುತ್ತಿತ್ತು. ಈಗ ಅವರು ಸಿನೆಮಾದ ಬಿಡುಗಡೆ ದಿನಾಂಕಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ನಾನು ಬಹಳ ಉತ್ಸುಕಳಾಗಿದ್ದೇನೆ. ದೀಪಿಕಾರ ಮೇಕಪ್ ಬಹಳ ಚೆನ್ನಾಗಿದೆ. ನನ್ನ ಕೆಲ ಸ್ನೇಹಿತರಿಗೆ ನಮ್ಮಿಬ್ಬರ ಲುಕ್ಸ್ ಒಂದೇ ರೀತಿ ಕಾಣುತ್ತಿದೆ. ಕೆಲವರಂತೂ, ’ಇದು ನೀವೇ?’ ಎಂದು ಕೇಳುತ್ತಿದ್ದಾರೆ. ನನ್ನ ಪಾತ್ರವನ್ನು ನಾನೇ ಮಾಡುತ್ತಿದ್ದೇನೆ ಎಂದೇ ಅನೇಕರು ಭಾವಿಸಿದ್ದಾರೆ ಎಂದು ತಿಳಿಸಿದ್ದಾರೆ.

ಇದಲ್ಲದೇ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದ ದೀಪಿಕಾ ಪಡುಕೋಣೆ ನಟನೆ ಹಾಗೂ ನಿರ್ಮಾಣದ ಛಪಾಕ್ ಸಿನೆಮಾ ಕಥೆಯು ತಮ್ಮ ಜೀವನವನ್ನು ಆಧರಿಸಿದ ಕಾರಣಕ್ಕಾಗಿ ತಮಗೆ ನೀಡಿದ ಸಂಭಾವನೆ ಕುರಿತಂತೆ ಆಸಿಡ್ ದಾಳಿ ಸಂತ್ರಸ್ಥೆ ಲಕ್ಷ್ಮೀ ಅಗರ್ವಾಲ್ ಅಸಮಾಧಾನಗೊಂಡಿದ್ದಾರೆ ಎಂಬ ವದಂತಿಗಳಿಗೆ ಖುದ್ದು ಅವರೇ ತೆರೆ ಎಳೆದಿದ್ದಾರೆ. ಈ ವರದಿಗಳಿಗೆ ಪ್ರತಿಕ್ರಿಯಿಸಿದ ಲಕ್ಷ್ಮೀ, ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಸ್ಕ್ರೀನ್ ಶಾಟ್‌ಗಳನ್ನು ಹಾಕಿ, ಇದು ಪಕ್ಕಾ ಸುಳ್ಳು ಸುದ್ದಿ ಎಂದಿದ್ದಾರೆ.

Leave a Comment