ದೀಪಾವಳಿಗೆ ಟೀಂ ಇಂಡಿಯಾದಿಂದ ಗೆಲುವಿನ ಉಡುಗೊರೆ

ಲಕ್ನೋ, ನ ೭- ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟಿ-೨೦ ಪಂದ್ಯದಲ್ಲಿ ಟೀಂ ಇಂಡಿಯಾ ೭೧ ರನ್‌ಗಳ ಭರ್ಜರಿ ಗೆಲುವು ದಾಖಲಿಸುವ ಮೂಲಕ ಕ್ರಿಕೆಟ್ ಅಭಿಮಾನಿಗಳಿಗೆ ದೀಪಾವಳಿಗೆ ಬಂಪರ್ ಉಡುಗೊರೆ ನೀಡಿದೆ.

ಇಲ್ಲಿನ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಇಕಾನಾ ಕ್ರೀಡಾಂಗಣದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟಿ-೨೦ ಪಂದ್ಯದಲ್ಲೂ ಟೀಂ ಇಂಡಿಯಾ ಗೆಲುವು ಸಾಧಿಸುವ ಮೂಲಕ  ೩ ಪಂದ್ಯಗಳ ಟಿ-೨೦ ಸರಣಿಯಲ್ಲಿ ಭಾರತ ೨-೦ ಮುನ್ನಡೆ ಸಾಧಿಸಿದ್ದು, ಸರಣಿ ಕೈವಶ ಮಾಡಿಕೊಂಡಿದೆ. ಅಲ್ಲದೆ ಭಾರತ ತಂಡ ಸತತ ೭ನೇ ಟಿ-೨೦ ಸರಣಿ ಗೆದ್ದ ಸಾಧನೆಗೆ ಪಾತ್ರವಾಗಿದೆ.

cricket3

ರೋಹಿತ್ ಪಡೆ ನೀಡಿದ್ದ ೧೯೬ ರನ್‌ಗಳ ಬೃಹತ್ ಮೊತ್ತ ಬೆನ್ನಟ್ಟಿದ ಕೆರಿಬಿಯನ್ನರು ಮತ್ತದೆ ಕಳಪೆ ಬ್ಯಾಟಿಂಗ್ ಮುಂದುವರಿಸಿದರು. ಟೀಂ ಇಂಡಿಯಾ ಬೌಲರ್‌ಗಳ ಬಿರುಗಾಳಿಗೆ ತರಗೆಲೆಯಂತೆ ಉರುಳಿದ ವಿಂಡೀಸ್ ಆಟಗಾರರು ಬಂದಷ್ಟೇ ವೇಗದಲ್ಲಿ ಪೆವಿಲಿಯನ್‌ಗೆ ಮರಳಿದರು. ತಂಡದ ಪರ ಡ್ಯಾರೆನ್ ಬ್ರಾವೋ ೨೩ ಹಾಗೂ ಕೀಮೊ ಪಾಲ್ ೨೦ ರನ್ ಬಾರಿಸಿದ್ದೆ ಹೆಚ್ಚು. ಉಳಿದ ಬ್ಯಾಟ್ಸ್‌ಮ್ಯಾನ್‌ಗಳ ಸ್ಕೋರ್ ೧೫ರ ಗಡಿ ದಾಟಲಿಲ್ಲ. ಪರಿಣಾಮ ೨೦ ಓವರ್‌ಗೆ  ೯ ವಿಕೆಟ್ ಕಳೆದುಕೊಂಡು ೧೨೪ ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಭಾರತ ಪರ ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್, ಜಸ್ಪ್ರೀತ್ ಬುಮ್ರಾ ಹಾಗೂ ಕುಲ್ದೀಪ್ ತಲಾ ೨ ವಿಕೆಟ್ ಕಿತ್ತು ಮಿಂಚಿದರು.

cricket

ಸಿಕ್ಸ್‌ರ್‌ಗಳ ಸುರಿಮಳೆ

ವಿಂಡೀಸ್ ಬೌಲರ್‌ಗಳ ಬೆವರಿಳಿಸಿದ ರೋಹಿತ್ ಅವರು ಬೌಂಡರಿ-ಸಿಕ್ಸ್‌ರ್‌ಗಳ ಸುರಿಮಳೆ ಗೈದರು.  ಅಲ್ಲದೇ ಚುಟುಕು ಕ್ರಿಕೆಟ್‌ನಲ್ಲಿ ೪ನೇ ಶತಕ ಬಾರಿಸಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗರಿಷ್ಠ ಸೆಂಚುರಿ ಸಿಡಿಸಿದ ಏಕೈಕ ಆಟಗಾರ ಎಂಬ ಹೆಗ್ಗಳಿಕೆ ರೋಹಿತ್ ಶರ್ಮಾ ಪಾತ್ರರಾದರು.

ಆದರೆ ಧವನ್ ೪೩ ರನ್ ಗಳಿಸಿರುವಾಗ ಇನ್ನಿಂಗ್ಸ್ ಮುಗಿಸಿದರು. ಇದರೊಂದಿಗೆ ರೋಹಿತ್-ಧವನ್ ೧೨೩ ರನ್‌ಗಳ ಅಮೋಘ ಜೊತೆಯಾಟ ಅಂತ್ಯವಾಯಿತು. ರಿಷಭ್ ಪಂತ್ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲದೆ ಕೇವಲ ೫ ರನ್‌ಗೆ ಔಟಾದರು. ಬಳಿಕ ಕೆ. ಎಲ್ ರಾಹುಲ್ ಜೊತೆಯಾದ ರೋಹಿತ್ ಸ್ಪೋಟಕ ಬ್ಯಾಟಿಂಗ್ ನಡೆಸಿ ಶತಕ ಸಿಡಿಸಿ ದಾಖಲೆ ಬರೆದರು.

ಈ ದಾಖಲೆಯೊಂದಿಗೆ ಭಾರತ ನಿಗದಿತ ೨೦ ಓವರ್‌ನಲ್ಲಿ ೨ ವಿಕೆಟ್ ನಷ್ಟಕ್ಕೆ ಬೃಹತ್ ೧೯೫ ರನ್ ಕಲೆಹಾಕಿತು. ರೋಹಿತ್ ಶರ್ಮಾ ಕೇವಲ ೬೧ ಎಸೆತಗಳಲ್ಲಿ ೮ ಬೌಂಡರಿ ಹಾಗೂ ೭ ಸಿಕ್ಸರ್‌ಗಳೊಂದಿಗೆ ೧೧೧ ರನ್ ಸಿಡಿಸಿ ಅಜೇಯರಾಗಿ ಉಳಿದರು. ಇತ್ತ ರಾಹುಲ್ ಕೂಡ ೧೪ ಎಸೆತಗಳಲ್ಲಿ ೨೬ ರನ್ ಬಾರಿಸಿ ಕೊನೆ ಕ್ಷಣದಲ್ಲಿ ಉತ್ತಮ ಸಾಥ್ ನೀಡಿದರು. ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ರೋಹಿತ್ ಶರ್ಮಾ ಪಂದ್ರ ಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿದರು. ಮುಂದಿನ ಕೊನೆಯ  ಪಂದ್ಯ ನ. ೧೧ ರಂದು ಚೆನ್ನೈನ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ.

ಕೊಹ್ಲಿ ದಾಖಲೆ ಹಿಂದಿಕ್ಕಿದ ಹಿಟ್ ಮ್ಯಾನ್

ವಿಂಡೀಸ್ ವಿರುದ್ಧ ನಿನ್ನೆ ನಡೆದ ಟಿ೨೦ ಪಂದ್ಯದಲ್ಲಿ ರೋಹಿತ್ ಶರ್ಮಾ ಅಜೇಯ ೧೧೧ ರನ್ ಗಳಿಸುವ ಮೂಲಕ ಟಿ೨೦ ಅಂತರಾಷ್ಟ್ರೀಯ ಪಂದ್ಯದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರ ಎಂಬ ದಾಖಲೆಯನ್ನು ಮಾಡಿದ್ದಾರೆ. ವಿರಾಟ್ ಕೊಹ್ಲಿ ೬೨ ಟಿ೨೦ ಪಂದ್ಯಗಳಿಂದ ೨೧೦೨ ರನ್ ಗಳಿಸಿದ್ದರು. ರೊಹಿತ್ ಶರ್ಮಾ ೮೬ ಟಿ೨೦ ಪಂದ್ಯಗಳಿಂದ ೨೨೦೩ ರನ್ ಗಳಿಸುವ ಮೂಲಕ ಕೊಹ್ಲಿ ದಾಖಲೆಯನ್ನು ಮುರಿದಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ೭೧ ಪಂದ್ಯಗಳಿಂದ ೨೧೪೦ ರನ್ ಗಳಿಸಿದ್ದ ನ್ಯೂಜಿಲೆಂಡ್ ನ ಬ್ರೆಂಡಮ್ ಮೆಕಲಮ್ ಹಾಗೂ ೧೦೮ ಪಂದ್ಯಗಳಿಂದ ೨೧೯೦ ರನ್ ಗಳಿಸಿದ್ದ ಪಾಕಿಸ್ತಾನದ ಶೊಯೆಬ್ ಮಲ್ಲಿಕ್ ದಾಖಲೆಯನ್ನು ಹಿಂದೆ ಹಾಕಿ ಎರಡನೇ ಸ್ಥಾನಕ್ಕೆ ಜಿಗಿದಿದ್ದಾರೆ. ಸದ್ಯ ಪಟ್ಟಿಯಲ್ಲಿ ನ್ಯೂಜಿಲೆಂಡ್ ನ ಮಾರ್ಟಿನ್ ಗುಪ್ಟಿಲ್ ೭೫ ಪಂದ್ಯಗಳಿಂದ ೨೨೭೧ ರನ್ ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ.

Leave a Comment