ದಿ.4-5 ಸುವರ್ಣ ಮಹೋತ್ಸವ, ಕಾರ್ಯಕಾರಿ ಸಭೆ

ರಾಯಚೂರು.ಮಾ.2- ಕೃಷಿ ವಿಶ್ವ ವಿದ್ಯಾಲಯ ಶಿಕ್ಷಕೇತರ ನೌಕರರ ಸಂಘ, ಅಖಿಲ ಭಾರತ ವಿಶ್ವ ವಿದ್ಯಾಲಯದ ಶಿಕ್ಷಕೇತರ ನೌಕರರ ಕಾನ್‌ಫಿಡರೇಷನ್‌ನ ಸುವರ್ಣ ಮಹೋತ್ಸವ ಹಾಗೂ ರಾಷ್ಟ್ರೀಯ ಕಾರ್ಯಕಾರಿ ಸಭೆಯನ್ನು ದಿ 4 ರಿಂದ 2 ದಿನಗಳ ಕಾಲ ಸ್ಥಳೀಯ ಕೃಷಿ ವಿಶ್ವ ವಿದ್ಯಾಲಯ ಪ್ರೇಕ್ಷಾ ಗೃಹದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಶಂಕರ್ ಹೇಳಿದರು.

ಅವರಿಂದು ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿ, ಅಖಿಲ ಭಾರತ ವಿಶ್ವ ವಿದ್ಯಾಲಯದ ಶಿಕ್ಷಕೇತರ ನೌಕರರ ಫೆಡರೇಷನ್ ಪ್ರಾರಂಭಗೊಂಡು 50 ವರ್ಷ ತುಂಬಿದ ಪ್ರಯುಕ್ತ ಸ್ಥಳೀಯ ಕೃಷಿ ವಿಶ್ವ ವಿದ್ಯಾಲಯದಲ್ಲಿ ದಿನಾಂಕ 4 ರಿಂದ 5ರವರೆಗೆ ಸುವರ್ಣ ಮಹೋತ್ಸವ ಮತ್ತು ಕಾರ್ಯಕಾರಿ ಸಮಿತಿ ಸಭೆ ಹಮ್ಮಿಕೊಳ್ಳಲಾಗಿದೆ.

ಕೃಷಿ ಸಚಿವ ಕೃಷ್ಣ ಭೈರೇಗೌಡ, ಕಾರ್ಯಕ್ರಮ ಉದ್ಘಾಟಿಸಲಿದ್ದು, ಕಾನ್‌ಫಿಡರೇಷನ್‌ನ ನೌಕರರು ದೇಶಾದ್ಯಂತ ಕಳೆದ 50 ವರ್ಷಗಳಿಂದ ನಡೆಸಿದ ಹೋರಾಟದ ಛಾಯಾಚಿತ್ರ ಪ್ರದರ್ಶನಕ್ಕೆ ಸಂಸದ ಬಿ.ವಿ. ನಾಯಕ ಚಾಲನೆ ನೀಡಲಿದ್ದಾರೆ. ಶಾಸಕ ಡಾ.ಶಿವರಾಜ ಪಾಟೀಲ್, ವಿಧಾನ ಪರಿಷತ್ ಸದಸ್ಯ ಎನ್.ಎಸ್. ಬೋಸರಾಜು, ಕಾನ್‌ಫಿಡರೇಷನ್‌ನ ಅಧ್ಯಕ್ಷ ಬಿ.ಎಸ್.ಹೋತಾ, ಮಹಾ ಕಾರ್ಯದರ್ಶಿ ಎಂ.ಬಿ. ಸಜ್ಜನ್,ಕಾರ್ಯಾಧ್ಯಕ್ಷ ಸುರೇಶ ಚಂದ್ರ ಮಿಶ್ರ, ಮುಖ್ಯಅತಿಥಿಗಳಾಗಿ ಉಪಸ್ಥಿತರಿರಲಿದ್ದು, ವಿಶ್ವ ವಿದ್ಯಾಲಯ ಕುಲಪತಿ ಡಾ.ಪಿ.ಎಂ. ಸಾಲಿಮಠ ಅಧ್ಯಕ್ಷತೆ ವಹಿಸಲಿದ್ದಾರೆ.

2 ದಿನಗಳ ಕಾಲ ನಡೆಯುವ ಉತ್ಸವದಲ್ಲಿ ರಾಷ್ಟ್ರದ ವಿವಿಧ ವಿವಿಗಳಿಂದ 400ಕ್ಕೂ ಅಧಿಕ ಜನಪ್ರತಿನಿಧಿ ಆಗಮಿಸುವ ನಿರೀಕ್ಷೆಯಿದೆ. ದಿ. 5 ರಂದು ನಡೆಯುವ ಕಾರ್ಯಕಾರಿ ಸಭೆಯಲ್ಲಿ ವಿಶ್ವವಿದ್ಯಾಲಯದ ಶಿಕ್ಷಕೇತರ ನೌಕರರು ಎದುರಿಸುತ್ತಿರುವ ಸಮಸ್ಯೆ, ಉನ್ನತ ಶಿಕ್ಷಣದಡಿ ನಡೆಯುತ್ತಿರುವ ವ್ಯಾಪಾರಿಕರಣ, ಉದಾರೀಕರಣ ಹಾಗೂ ಜಾಗತೀಕರಣದಿಂದಾಗುವ ದುಷ್ಪರಿಣಾಮ ಕುರಿತು ಸಮಗ್ರವಾಗಿ ಚರ್ಚಿಸಲಾಗುವುದು.  ಸದರಿ ಉತ್ಸವದಲ್ಲಿ ಸ್ಥಳೀಯರು ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೆ ಭಾಜನರಾಗುವಂತೆ ಕೋರಿದರು. ಸಂಘದ ಉಪಾಧ್ಯಕ್ಷ ವಿದ್ಯಾಸಾಗರ, ಖಜಾಂಚಿ ರವಿ ಕುಮಾರ, ಮಂಜುಳ, ಮಹಾದೇವ ನುಚ್ಚಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Leave a Comment