ದಿ.28 ರಿಂದ 24 ಗಂಟೆ ಜಿಲ್ಲಾ ಬಂದ್ ಚಳುವಳಿ

* ಬೇಡಿಕೆ ಲಿಖಿತ ಟಿಪ್ಪಣಿ ಆದೇಶಕ್ಕೆ 7 ದಿನ ಗಡುವು
ರಾಯಚೂರು.ಏ.21- ತುಂಗಭದ್ರಾ ನೀರಾವರಿ ವಲಯ ಹಂಗಾಮಿ ಕಾರ್ಮಿಕರ (ಟಿಯುಸಿಐ ಸಂಚಾಲಿತ) ಕನಿಷ್ಟ ವೇತನ ಖಾತ್ರಿ, ಇತರೆ ನ್ಯಾಯಯುತ ಬೇಡಿಕೆ ಈಡೇರಿಕೆಗೆ ಲಿಖಿತ ಟಿಪ್ಪಣಿ ಆದೇಶ ನೀಡಲು ರಾಜ್ಯ ಸರಕಾರಕ್ಕೆ 7 ದಿನ ಗಡುವು ನೀಡಲಾಗುವುದೆಂದ ಟಿಯುಸಿಐ ರಾಜ್ಯಾಧ್ಯಕ್ಷ ಆರ್. ಮಾನಸಯ್ಯ, ಸಮಾನ ಕೆಲಸಕ್ಕೆ ಸಮಾನ ವೇತನ ವಿತರಣೆಗೆ ಅಗತ್ಯ ಕ್ರಮ ವಹಿಸದಿದ್ದಲ್ಲಿ ದಿ.28 ರಿಂದ ಬೆಳಿಗ್ಗೆ 6 ಗಂಟೆಯಿಂದ 24 ಗಂಟೆಗಳ ಕಾಲ `ರಾಯಚೂರು ಜಿಲ್ಲೆ ಬಂದ್ ಉಗ್ರ ಸ್ವರೂಪದ ಚಳುವಳಿ` ಗೆ ಕರೆ ನೀಡಲಾಗುವುದೆಂದರು.

ಅವರಿಂದು ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿ, ಸುಪ್ರೀಂ ಕೋರ್ಟ್ ಆದೇಶದನ್ವಯ ಕನಿಷ್ಟ ವೇತನಕ್ಕೆ ದುಡಿಯುತ್ತಿರುವ ತುಂಗಭದ್ರ ನೀರಾವರಿ ವಲಯ ಹಂಗಾಮಿ ಕಾರ್ಮಿಕರ ವೇತನ ಖಾತ್ರಿ ಸೇರಿದಂತೆ ಇತರೆ ನ್ಯಾಯಯುತ ಹಕ್ಕಿಗಾಗಿ ಜಾಥಾ ನಿರತ ಕಾರ್ಮಿಕರನ್ನು ಪೊಲೀಸರ ದರ್ಪದೊಂದಿಗೆ ಬಂಧಿಸಿ, ಈ ಕುರಿತು ಪ್ರಶ್ನಿಸುವ ಸಂಚಾಲಕರ ವಿರುದ್ಧವೇ 4 ಬೋಗಸ್ ಪ್ರಕರಣ ದಾಖಲಿಸಿ, 1 ವರ್ಷದ ವರೆಗೆ ಯಾವುದೇ ಹೋರಾಟದಲ್ಲಿ ಭಾಗವಹಿಸದಂತೆ ಷರತ್ತು ವಿಧಿಸಿರುವ ನಯಾ ವಂಚಕ ಸರಕಾರದ ನಡೆ ಖಂಡನೀಯ.

ಕನಿಷ್ಟ ಜೀವನಕ್ಕಾಗಿ ನಡೆಸಿದ ಗರಿಷ್ಟ ಹೋರಾಟ ದಮನ ಮಾಡುವ ಹುನ್ನಾರದೊಂದಿಗೆ 30 ಕ್ಕೂ ಅಧಿಕ ಕಾರ್ಮಿಕರ ಮೇಲೆ ಪ್ರತ್ಯೇಕ ಸುಳ್ಳು ಪ್ರಕರಣ ಹೂಡಿ, ಹೋರಾಟ ಹತ್ತಿಕ್ಕುವ ಹುನ್ನಾರಕ್ಕೆ ಗೃಹ ಸಚಿವಾಲಯ, ರಾಜ್ಯ ಸರಕಾರ ಕಾರಣವಾಗಿವೆ. ಸರಕಾರದ ಜನ ವಿರೋಧ ಝಡತ್ವ ತೊಡೆದು ಹಾಕಲು ಜಿಲ್ಲೆಯಾದ್ಯಂತ ಅಂಗಡಿ ಮುಂಗಟ್ಟು, ಪೆಟ್ರೋಲ್ ಬಂಕ್, ಸಾರಿಗೆ ಸಂಚಾರ ಬಂದ್ ಮುಷ್ಕರದ ತೀವ್ರ ಸ್ವರೂಪದ ಹೋರಾಟಕ್ಕೆ ಮುಂದಾಗಲಾಗಿದೆ. ರಾಜ್ಯದ 1.35 ಕೋಟಿ ಕಾರ್ಮಿಕರ ಕನಿಷ್ಟ ವೇತನ ಖಾತ್ರಿಗಾಗಿ ನಡೆಸುವ ಜಿಲ್ಲಾ ಬಂದ್ ಚಳುವಳಿಯಲ್ಲಿ ಜಿಲ್ಲೆಯ ವಿವಿಧ ಕಾರ್ಮಿಕ ಸಂಘಟನೆ, ಗುತ್ತಿಗೆ, ಬಿಸಿಯೂಟ, ಅಂಗನವಾಡಿ ಕಾರ್ಮಿಕರು ಸೇರಿದಂತೆ ರಾಜಕೀಯ ಪಕ್ಷ, ರೈತ, ದಲಿತ ಸಂಘಟನೆ ಮತ್ತು ಕನ್ನಡಪರ ಸಂಘಟನೆ ಒಕ್ಕೂಟ, ವಿದ್ಯಾರ್ಥಿ, ಯುವ ಜನತೆ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೆ ಭಾಜನರಾಗುವಂತೆ ಕೋರಿದರು.  ಟಿಯುಸಿಐ ತಾಲೂಕಾಧ್ಯಕ್ಷ ಜಿ. ಅಮರೇಶ, ಪ್ರಧಾನ ಕಾರ್ಯದರ್ಶಿ ಜಿ. ಅಡವಿರಾವ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Comment