ದಿ.21 ಅಖಿಲ ಕರ್ನಾಟಕ ಹೆಳವ ಜಿಲ್ಲಾ ಸಮಾವೇಶ

ರಾಯಚೂರು.ಮೇ.19- ಶತಮಾನಗಳಿಂದ ವಂಶಾವಳಿ ಕಾಯಕವನ್ನೇ ವೃತ್ತಿಯನ್ನಾಗಿಸಿಕೊಂಡಿರುವ ಅಖಿಲ ಕರ್ನಾಟಕ ಹೆಳವ ಸಮಾಜ ದುಸ್ಥಿತಿ ಸರ್ಕಾರಕ್ಕೆ ಮನದಟ್ಟು ಮಾಡಿ, ರಾಜ್ಯಾದ್ಯಂತ ಸಂಘಟನೆ ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ನಗರದ ಜಂಬಲದಿನ್ನಿ ರಂಗಮಂದಿರದಲ್ಲಿ ದಿ.21 ರಂದು ಇದೇ ಪ್ರಪ್ರಥಮ ಬಾರಿಗೆ ಅಖಿಲ ಕರ್ನಾಟಕ ಹೆಳವ ಸಮಾಜ ಜಿಲ್ಲಾ ಸಮಾವೇಶ ಆಯೋಜಿಸಲಾಗಿದೆಂದು ಜಿಲ್ಲಾಧ್ಯಕ್ಷ ವೈ.ಎಸ್.ಅಶೋಕ ಹೇಳಿದರು.

ಅವರಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ರಾಜ್ಯಾದ್ಯಂತ 1.50 ಲಕ್ಷ ಜನಸಂಖ್ಯೆ ಹೊಂದಿರುವ ಹೆಳವ ಸಮಾಜಕ್ಕೆ ಕನಿಷ್ಟ ಸವಲತ್ತು ಕಲ್ಪಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿವೆ. ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿಯೂ ಈ ಸಮುದಾಯ ತುಳಿತಕ್ಕೊಳಗಾಗಿದೆ. ಶತಮಾನಗಳಿಂದ ಜನತೆ ಅಂಕಿಅಂಶ ವಂಶಾವಳಿ ಬರೆಯುವ ಹೆಳವ ಸಮುದಾಯ ನಿರ್ದಿಷ್ಟ ನೆಲೆಯಿಲ್ಲದೆ ಅಲೆಮಾರಿಗಳಂತೆ ಅಲೆಯುವಂತಾಗಿದೆ.

ಸಮುದಾಯವನ್ನು ಗುರುತಿಸಿ ಮುಖ್ಯವಾಹಿನಿಗೆ ತರುವಲ್ಲಿ ಸರ್ಕಾರ ಮುತುವರ್ಜಿವಹಿಸದಿರುವುದು ಖೇದಕರ. ಸಮಾಜಕ್ಕೆ ಒದಗಿರುವ ದುಸ್ಥಿತಿ ಸರ್ಕಾರಕ್ಕೆ ಮನವರಿಕೆ ಮಾಡಲು ರಾಜ್ಯಾಧ್ಯಕ್ಷ ಎಂ.ನಾಗರಾಜ ಗುರುಜೀ ರವರ ನೇತೃತ್ವದಲ್ಲಿ ರಾಜ್ಯಾದ್ಯಂತ ಹೋರಾಟ ರೂಪಿಸಿ ಸಂಘಟನೆ ಬಲವರ್ಧನೆಗೆ ಶ್ರಮಿಸಲಾಗುತ್ತಿದೆ. ಅಂದು ಬೆಳಿಗ್ಗೆ 9 ಗಂಟೆಗೆ ಶ್ರೀಬಸವೇಶ್ವರ ವೃತ್ತದಲ್ಲಿರುವ ಬಸವೇಶ್ವರ ಪುತ್ಥಳಿಗೆ ರಾಜ್ಯಾಧ್ಯಕ್ಷರು ಮಾಲಾರ್ಪಣೆ ಮಾಡಿ ಕುಲದೇವರರಾದ ಶ್ರೀ ಮುಕ್ತಿನಾಥಯ್ಯ ಸ್ವಾಮಿ ಭಾವಚಿತ್ರಕ್ಕೆ ಕುಲಗುರು ಶ್ರೀಬಸವ ಬೃಂಗೇಶ್ವರ ಮಹಾಸ್ವಾಮಿಗಳು ವಿಶೇಷ ಪೂಜೆ ಸಲ್ಲಿಸಿ, ರಥದ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.
ಬೆಳಿಗ್ಗೆ 11 ಗಂಟೆಗೆ ನಡೆಯುವ ಜಿಲ್ಲಾ ಹೆಳವ ಸಮಾವೇಶ ಕಾರ್ಯಕ್ರಮವನ್ನು ಸಮಾಜ ಕಲ್ಯಾಣ ಸಚಿವ ಹೆಚ್.ಆಂಜನೇಯ ಉದ್ಘಾಟಿಸಲಿದ್ದು, ಸಂಸದ ಬಿ.ವಿ.ನಾಯಕ, ವಿಧಾನ ಪರಿಷತ್ ಸದಸ್ಯ ಎನ್.ಎಸ್.ಬೋಸರಾಜು, ಶಾಸಕ ಡಾ.ಶಿವರಾಜ ಪಾಟೀಲ್ ಜ್ಯೋತಿ ಬೆಳಗಿಸಲಿದ್ದಾರೆ. ಕಾರ್ಯಕ್ರಮ ಅಧ್ಯಕ್ಷತೆಯನ್ನು ಸಮಾಜದ ರಾಜ್ಯಾಧ್ಯಕ್ಷ ಎಂ.ನಾಗರಾಜಗುರುಜೀ ವಹಿಸಲಿದ್ದಾರೆ.

ಜಿ.ಪಂ.ಅಧ್ಯಕ್ಷೆ ಆದಿಮನಿ ವೀರಲಕ್ಷ್ಮಿ, ನಗರಸಭೆ ಅಧ್ಯಕ್ಷೆ ಹೇಮಲತಾ ಪಿ.ಬೂದೆಪ್ಪ, ಉಪಾಧ್ಯಕ್ಷ ಜಯಣ್ಣ, ಆರ್‌ಡಿಎ ಅಧ್ಯಕ್ಷ ಜಿಂದಪ್ಪ ಮುಖ್ಯಾತಿಥಿಗಳಾಗಿ ಆಗಮಿಸಲಿದ್ದು, ಅಂದು ನಡೆಯುವ ಸಮಾವೇಶದಲ್ಲಿ ಹೆಳವ ಸಮಾಜದ ಕುಲಬಾಂಧವರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೆ ಭಾಜನರಾಗುವಂತೆ ಕೋರಿದರು.

ಹೆಳವ ಸಮಾಜದ ಬೆಂಗಳೂರು ನಗರ ಘಟಕ ಅಧ್ಯಕ್ಷ ಸಚಿನ್ ಕುಮಾರ, ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ನವೀನ್ ಕುಮಾರ, ರಾಜ್ಯ ನಿರ್ದೇಶಕರಾದ ಕೆ.ಹೆಚ್.ಶ್ರೀನಿವಾಸ, ಜಿಲ್ಲಾ ಉಪಾಧ್ಯಕ್ಷ ವಿಜಯಕುಮಾರ, ಜಿಲ್ಲಾ ಕಾರ್ಯದರ್ಶಿ ಮಹೇಶ ಮನ್ಸಲಾಪೂರ, ತಾಲೂಕಾಧ್ಯಕ್ಷರಾದ ಹೊನ್ನಪ್ಪ ಯಾದವ್, ತಾಲೂಕು ಕಾರ್ಯದರ್ಶಿ ನರಸಿಂಹ ಹೆಳವರು, ಮುಖಂಡರಾದ ದೊಡ್ಡಪ್ಪ ಏಗನೂರು, ವೈ.ಎಸ್.ಶ್ರೀನಿವಾಸ, ನರಸಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Leave a Comment