ದಿ.12 ರಂದು ಶ್ರೀವೀರಭದ್ರಸ್ವಾಮಿಯ ಗುಗ್ಗಳ ಮಹೋತ್ಸವ

ಧಾರವಾಡ, ನ.10 : ಇಲ್ಲಿಗೆ ಸಮೀಪದ ತಾಲೂಕಿನ ಅಮ್ಮಿನಬಾವಿ ಗ್ರಾಮದ ಪಂಚಗೃಹ ಹಿರೇಮಠದ ಆವರಣದಲ್ಲಿರುವ ಕ್ಷೇತ್ರನಾಥ ಶ್ರೀವೀರಭದ್ರಸ್ವಾಮಿ ದೇವಾಲಯದ 6ನೆಯ ವಾರ್ಷಿಕೋತ್ಸವದ ಅಂಗವಾಗಿ ನವ್ಹೆಂಬರ್ 12 ರಂದು ಗೌರಿಹುಣ್ಣಿಮೆಯ ದಿನ ಸಾಮೂಹಿಕ ಗುಗ್ಗಳ ಕಾರ್ಯಕ್ರಮ ಜರುಗಲಿದೆ.
ಅಮ್ಮಿನಬಾವಿ ಪಂಚಗೃಹ ಹಿರೇಮಠದ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಮತ್ತು ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಗುಗ್ಗಳ ಉತ್ಸವವನ್ನು ಉದ್ಘಾಟಿಸಲಿದ್ದು, ನಂತರ ಗುಗ್ಗಳವು ಗ್ರಾಮದ ಪ್ರಮುಖ ಬೀದಿಗಳಲ್ಲಿ ನಂದಿಕೋಲು, ಪಲ್ಲಕ್ಕಿ, ಸಂಬಾಳ ವಾದ್ಯವೂ ಸೇರಿದಂತೆ ವಿವಿಧ ಜನಪದ ವಾದ್ಯಮೇಳಗಳೊಂದಿಗೆ ಸಂಚರಿಸಲಿದೆ. ಹಿರಿಯ ಪುರವಂತ ಕಲಾವಿದರಾದ ಮರೇವಾಡದ ಬಸವಂತಪ್ಪ ಕಮ್ಮಾರ, ಕರಡಿಗುಡ್ಡದ ಮಡಿವಾಳಪ್ಪ ಕರವಿನಕೊಪ್ಪ ಹಾಗೂ ಅಮ್ಮಿನಬಾವಿ ಗ್ರಾಮದ ಪುರವಂತರ ತಂಡವು ಈ ಗುಗ್ಗಳ ಮಹೋತ್ಸವದಲ್ಲಿ ಒಡಪುಗಳ ಸೇವೆಯನ್ನು ಸಲ್ಲಿಸಲಿದೆ.
ರುದ್ರಾಭಿಷೇಕ-ದೀಪೋತ್ಸವ : ಗೌರಿಹುಣ್ಣಿಮೆಯಂದು ಪ್ರಾತಃಕಾಲದಲ್ಲಿ ಶ್ರೀವೀರಭದ್ರಸ್ವಾಮಿಗೆ ಏಕಾದಶ ಮಹಾರುದ್ರಾಭಿಷೇಕ, ಶಿವಾಷ್ಟೋತ್ತರ, ವೀರಭದ್ರಾಷ್ಟೋತ್ತರ, ನೂರೊಂದು ಬಿಲ್ವಾರ್ಚನೆ, ಅಲಂಕಾರ ಮಹಾಪೂಜೆ ಹಾಗೂ ಮಹಾಮಂಗಳಾರತಿ ನೆರವೇರಿಸಲಾಗುವುದು. ಭಕ್ತ ಸಮೂಹ ನಡೆಸಿಕೊಡುವ ದಾಸೋಹ ಸೇವೆಯಲ್ಲಿ ಸಾಮೂಹಿಕ ಅನ್ನಸಂತರ್ಪಣೆ ಜರುಗಲಿದೆ. ಕಾರ್ತೀಕ ಮಾಸದ ರಾಜಯೋಗ ಪರ್ವಕಾಲದ ಅಂತಿಮ ದಿನವಾದ ಗೌರಿಹುಣ್ಣಿಮೆಯಂದು ಸಂಜೆ ದೇವಾಲಯದಲ್ಲಿ ಶ್ರೀವೀರಭದ್ರಸ್ವಾಮಿಯ ಸನ್ನಿಧಿಯಲ್ಲಿ ವಿಶೇಷ ದೀಪೋತ್ಸವವೂ ಜರುಗಲಿದೆ.
ವಿವಾಹದ ಸಂದರ್ಭದಲ್ಲಿ ವೈಯಕ್ತಿಕವಾಗಿ ಗುಗ್ಗಳಕಾರ್ಯ ಮಾಡುವುದು ವೆಚ್ಚದಾಯಕವಾಗಿದ್ದು, ವಿಶೇಷವಾಗಿ ಬಡವರಿಗೆ ಖರ್ಚು ಭರಿಸಲು ತೊಂದರೆಯಾಗುತ್ತದೆ. ಹಾಗಾಗಿ ಈ ಸಾಮೂಹಿಕ ಗುಗ್ಗಳ ಕಾರ್ಯದಲ್ಲಿ ಪಾಲ್ಗೊಂಡು ಗಂಡು ಮಕ್ಕಳ ವಿವಾಹದ ಸಂಕಲ್ಪ ಮಾಡಿ ಹರಕೆ ತೀರಿಸಲು ಇಲ್ಲಿ ಅವಕಾಶ ಕಲ್ಪಿಸಲಾಗಿದೆ. ಗುಗ್ಗಳ ಹರಕೆ ತೀರಿಸಲು ಇಚ್ಛಿಸುವವರು ವೀರಯ್ಯ ಹಿರೇಮಠ (ಮೊ.9611184200), ಶಿವಾನಂದಸ್ವಾಮಿ ಹಿರೇಮಠ (789035025) ಹಾಗೂ ಸೋಮಲಿಂಗಶಾಸ್ತ್ರೀ ಗುಡ್ಡದಮಠ (ಮೊ.9945959431) ಸಂಪರ್ಕಿಸಬಹುದು.

Leave a Comment