ದಾಸರ ಗೀತೆಗಳು ಇಂದಿಗೂ ಪ್ರಸ್ತುತ

ಮೈಸೂರು:ಫೆ.17- ನಾಡು ಕಂಡ ದಾಸರುಗಳಲ್ಲಿ ತ್ಯಾಗರಾಜರು, ಪುರಂದರ ದಾಸರು ಹೆಚ್ಚು ಖ್ಯಾತಿಗಳಿಸಿದ್ದಾರೆ ಎಂದು ಡಾ.ಜಿ.ಎನ್ ನಾಗರತ್ನ ಹೇಳಿದರು.
ಅವರು ಇಂದು ಬೆಳಿಗ್ಗೆ ಜೆಎಲ್ ಬಿ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಕಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿ ವತಿಯಿಂದ ಯೋಜಿಸಿದ್ದ ತ್ಯಾಗರಾಜರ ಮತ್ತು ಪುರಂದರದಾಸರ ಆರಾಧನ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಈ ಇಬ್ಬರು ದಾಸರುಗಳು ರಚಿಸಿರುವ ಗೀತೆಗಳು, ಗಾಯನಗಳು ಇಂದಿಗೂ ಜನಪ್ರಿಯವಾಗಿದೆ. ಅವುಗಳನ್ನು ಕೇಳುವುದರಿಂದ ಮನಸ್ಸಿಗೆ ಮುದ ಸಿಗಲಿದೆ ಎಂದರು. ಇವರಿಬ್ಬರು ತಮ್ಮ ಜೀವಿತಾವದಿಯಲ್ಲಿ ರಚಿಸಿದ ಕೀರ್ತನೆಗಳನ್ನು ಹಿಂದಿನ ತಲೆಮಾರಿನವರು ನಮಗೆ ಉಳಿಸಿದ್ದಾರೆ. ನಾವೂ ಸಹ ಅವರಂತೆಯೇ ಅವುಗಳನ್ನು ನಮ್ಮ ಮುಂದಿನ ಪೀಳಿಗೆಯವರೆಗೂ ಉಳಿಸುವ ಸಲುವಾಗಿ ಇಂದು ಆಯೋಜಿಸುವ ಕಾರ್ಯಕ್ರಮವು ಅತ್ಯಂತ ಶ್ಲಾಘನೀಯ ಎಂದ ಅವರು, ಇಂತಹ ಕಾರ್ಯಕ್ರಮಗಳನ್ನು ಹೆಚ್ಚುಹೆಚ್ಚಾಗಿ ಆಯೋಜಿಸುವಂತೆ ವಿವಿಯ ಸಂಯೋಜಕರಲ್ಲಿ ಮನವಿ ಮಾಡಿದರು.
ಸಮಾರಂಭದ ಅಂಗವಾಗಿ ಬೆಂಗಳೂರಿನ ಯಕ್ಷಸಿರಿ ತಂಡದ ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಸಮಾರಂಭದಲ್ಲಿ ವಿದ್ವಾನ್ ಡಾ. ರಾ.ಸ.ನಂದಕುಮಾರ್, ಗಂಗೂಬಾಯಿ ಹಾನಗಲ್ ವಿವಿಯ ಕುಲಪತಿ ಡಾ.ಸರ್ವಮಂಗಳ ಸೇರಿದಂತೆ ಇನ್ನಿತರೆ ಗಣ್ಯರು ಹಾಜರಿದ್ದರು.

Leave a Comment