ದಾಸಪ್ಪ ಹೆರಿಗೆ ಆಸ್ಪತ್ರೆಗೆ ಕಾಯಕಲ್ಪ

(ನಮ್ಮ ಪ್ರತಿನಿಧಿಯಿಂದ)
ಬೆಂಗಳೂರು, ಆ. ೩೧- ನಗರದ ಪುರಭವನ ಬಳಿ ಇರುವ ದಾಸಪ್ಪ ಹೆರಿಗೆ ಆಸ್ಪತ್ರೆಯನ್ನು 4 ಅಂತಸ್ತಿನ ಕಟ್ಟಡ ನಿರ್ಮಿಸುವ ಮೂಲಕ ಮೇಲ್ದರ್ಜಗೇರಿಸುವುದಾಗಿ ಸಂಪತ್‌ರಾಜ್ ಅವರು ತಿಳಿಸಿದ್ದಾರೆ.
ಇಂದು ಬೆಳಿಗ್ಗೆ ದಾಸಪ್ಪ ಹೆರಿಗೆ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಸ್ಪತ್ರೆಯ 50 ಹಾಸಿಗೆ ಸಾಮರ್ಥ್ಯವನ್ನು 250 ಹಾಸಿಗೆಗೆ ಎಚ್ಚಳ ಮಾಡುವುದಾಗಿ ತಿಳಿಸಿದರು.
ಆಸ್ಪತ್ರೆಯಲ್ಲಿ ವಿವಿಧ ರೋಗಗಳ ಪರೀಕ್ಷೆಗಾಗಿ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗುವುದು ಎಂದು ಈ ಸಂಬಂಧ ಉಪಮುಖ್ಯಮಂತ್ರಿ ‌ಡಾ. ಜಿ. ಪರಮೇಶ್ವರ್, ಪಾಲಿಕೆ ಆಯುಕ್ತ ಮಂಜುನಾಥ ಪ್ರಸಾದ್ ಅವರೊಂದಿಗೆ ಚರ್ಚೆ ನಡೆಸಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲಾಗುವುದು ಎಂದು ಅವರು ತಿಳಿಸಿದರು.
ದಾಸಪ್ಪ ಹೆರಿಗೆ ಆಸ್ಪತ್ರೆಯಿಂದ ಜನಸಾಮಾನ್ಯರಿಗೆ ಹೆಚ್ಚು ಅನುಕೂಲವಾಗಿದೆ. ಆದರೆ, ಆಸ್ಪತ್ರೆಯಲ್ಲಿ ನಿರೀಕ್ಷಿತ ಸೌಲಭ್ಯಗಳು ಇಲ್ಲದೆ ತೊಂದರೆಯೂ ಉಂಟಾಗಿದೆ. ಹಾಗಾಗಿ, ಈ ಆಸ್ಪತ್ರೆಗೆ ಇನ್ನಷ್ಟು ಮೂಲಭೂತ ಸೌಲಭ್ಯವನ್ನು ಕಲ್ಪಿಸಲು ಬಿಬಿಎಂಪಿ ಬಜೆಟ್‌ನಲ್ಲಿ ಹಣ ತೆಗೆದಿರಿಸಲಾಗುವುದು ಎಂದು ಅವರು ಹೇಳಿದರು.
ವೈದ್ಯರನ್ನು ತರಾಟೆಗೆ ತೆಗೆದುಕೊಂಡ ಮೇಯರ್, ಇದಕ್ಕೂ ಮುನ್ನ ಆಸ್ಪತ್ರೆಯ ಕುಂದು ಕೊರತೆಗಳನ್ನು ಖುದ್ದು ತಪಾಸಣೆ ಮಾಡಿದ ಮೇಯರ್ ಅವರು, ಆಸ್ಪತ್ರೆಯ ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಆಸ್ಪತ್ರೆ ಆವರಣದಲ್ಲಿ ವೈದ್ಯರು, ಸಿಬ್ಬಂದಿಗಳು, ರೋಗಿಗಳ ವಾಹನಗಳಿಗಷ್ಟೇ ಪಾರ್ಕಿಂಗ್ ಮಾಡಬಹುದು. ಆದರೆ, ಕೆಲ ಖಾಸಗಿ ವಾಹನಗಳಿಗೂ ಪಾರ್ಕಿಂಗ್ ಮಾಡಲು ಅವಕಾಶ ನೀಡಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಮೇಯರ್ ಅವರು ನೀವು ಏನು ಮಾಡುತ್ತಿದ್ದೀರಿ ಎಂದು ವೈದ್ಯರನ್ನು ತರಾಟೆಗೆ ತೆಗೆದುಕೊಂಡರು.
ಆಸ್ಪತ್ರೆಯ ವಾಟರ್ ಟ್ಯಾಂಕ್‌ನ್ನು ಸ್ವಚ್ಛಗೊಳಿಸದಿರುವ ಬಗ್ಗೆ ಗಮನಿಸಿದ ಮೇಯರ್ ಅವರು ಕೂಡಲೇ ಟ್ಯಾಂಕ್‌ನ್ನು ಸ್ವಚ್ಛಗೊಳಿಸುವ ಶುದ್ಧ ಕುಡಿಯುವ ನೀರನ್ನೇ ರೋಗಿಗಳಿಗೆ ಪೂರೈಸುವಂತೆ ಸೂಚಿಸಿದರು.
ಆಸ್ಪತ್ರೆ ಆವರಣದಲ್ಲಿ ಕೆಲವು ಪ್ಲಾಸ್ಟಿಕ್ ಬ್ಯಾನರ್‌ಗಳನ್ನು ಕಂಡು ಸಿಟ್ಟಿಗೆದ್ದ ಮೇಯರ್ ಅವರು ಕೂಡಲೇ ತೆಗೆದುಹಾಕುವಂತೆ ಆದೇಶಿಸಿದರು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯೆ ಪ್ರತಿಭಾ ಧನರಾಜ್ ಹಾಗೂ ಹಿರಿಯ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.

Leave a Comment