ದಾವಣಗೆರೆ ಮಹಾನಗರ ಪಾಲಿಕೆ ಗದ್ದುಗೆ ಸರ್ಕಸ್… ಬಿಜೆಪಿ ಸದಸ್ಯರೆಲ್ಲರಿಗೂ ಟೂರ್ ಭಾಗ್ಯ….

ದಾವಣಗೆರೆ.ಫೆ.14; ದಾವಣಗೆರೆ ಮಹಾನಗರ ಪಾಲಿಕೆಯ ಚುನಾವಣೆ ಫೆ.19 ರಂದು ಘೋಷಣೆಯಾಗಿದೆ.ಇದರ ಬೆನ್ನಲ್ಲೇ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಗದ್ದುಗೆ ಏರಲು ತಂತ್ರಗಾರಿಕೆ ರೂಪಿಸಿದ್ದಾರೆ. ಇದೀಗ ಬಿಜೆಪಿಯಿಂದ ಗೆದ್ದಿರುವ ಸದಸ್ಯರೆಲ್ಲರಿಗೂ ಟೂರ್ ಭಾಗ್ಯ ಲಭ್ಯವಾಗಿದೆ. 17 ಬಿಜೆಪಿ ಕಾರ್ಪೋರೇಟರ್‍ಗಳು ಮಡಿಕೇರಿಯಲ್ಲಿರುವ ರೆಸಾರ್ಟ್‍ನಲ್ಲಿದ್ದಾರೆ ಎಂಬುದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಈ ಮೂಲಕ ಆಪರೇಷನ್ ತಡೆಗೆ ಬಿಜೆಪಿ ಮುಂದಾಗಿದೆ. ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ 17 ಸ್ಥಾನಗಳನ್ನು ಪಡೆದಿದೆ ಹಾಗೂ ಕಾಂಗ್ರೆಸ್‍ನ 22 ಸದಸ್ಯರು ಗೆಲವು ಪಡೆದಿದ್ದಾರೆ. ನಂತರ ಬಂಡಾಯವೆದ್ದು ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದಿದ್ದ 4 ಸದಸ್ಯರನ್ನು ಬಿಜೆಪಿ ಸೆಳೆದಿದ್ದು ಈ ಮೂಲಕ 21 ಸ್ಥಾನಗಳಿಸಿಕೊಂಡಿತ್ತು. ಆದರೆ 22 ಸದಸ್ಯರನ್ನು ಹೊಂದಿರುವ ಕಾಂಗ್ರೆಸ್ ಪಾಲಿಕೆಯಲ್ಲಿ ಅಧಿಕಾರ ವಹಿಸಿಕೊಳ್ಳುವತ್ತ ಮುಂದಾಗಿತ್ತು. ಶತಾಯಗತಾಯ ಈ ಬಾರಿ ಪಾಲಿಕೆಯಲ್ಲಿ ಆಡಳಿತ ನಡಸಲೇಬೇಕೆಂದು ಪಣತೊಟ್ಟಿರುವ ಬಿಜೆಪಿ ಇನ್ನಿಲ್ಲದ ತಂತ್ರಗಾರಿಕೆ ರೂಪಿಸಿದೆ. ಮೇಯರ್ ಸ್ಥಾನದ ಆಕಾಂಕ್ಷಿಯಾಗಿರುವ ಪಿ.ಜೆ ಬಡಾವಣೆಯ 17 ನೇ ವಾರ್ಡ್ ಸದಸ್ಯರಾದ ಬಿ.ಜೆ ಅಜಯ್ ಕುಮಾರ್ ನೇತೃತ್ವದಲ್ಲಿ ಸದಸ್ಯರು ಇದೀಗ ರೆಸಾರ್ಟ್ ವಾಸ್ತವ್ಯದಲ್ಲಿದ್ದಾರೆ.
ಫೆ.19ರಂದು ಪಾಲಿಕೆ ಮೇಯರ್ ಚುನಾವಣೆ ನಡೆಯಲಿದ್ದು ಅಂದು ಬಿಜೆಪಿ ಸದಸ್ಯರು ಹಾಗೂ ಪಕ್ಷೇತರರು
ಪ್ರವಾಸದಿಂದ ನೇರವಾಗಿ ಪಾಲಿಕೆಗೆ ಬರುವಂತೆ ವ್ಯವಸ್ಥೆ ಮಾಡಲಾಗಿದೆ. ಎರಡೂ ಪಕ್ಷಗಳೂ ಸಹ ಪರಿಷತ್ ಸದಸ್ಯರು, ಶಾಸಕರು ಸಹ ಮತಚಲಾಯಿಸಲು ಅರ್ಹರನ್ನಾಗಿಸಿವೆ. ಈ ಹಿನ್ನೆಲೆಯಲ್ಲಿ ಮೇಯರ್ ಆಯ್ಕೆಗೆ ಬಿಜೆಪಿಯಿಂದ ಸಂಸದ ಜಿ.ಎಂ ಸಿದ್ದೇಶ್ವರ್, ಶಾಸಕ ಎಸ್.ಎ ರವೀಂದ್ರನಾಥ್, ಎಂ ಎಲ್ಸಿಗಳಾದ ಕೆ.ಪಿ ನಂಜುಂಡಿ,ಲೆಹಾರ್ ಸಿರಾಯ್,ನಾರಾಯಣ ಸ್ವಾಮಿ,ರವಿಕುಮಾರ್,ತೇಜಸ್ವಿನಿ ಗೌಡ,ಎಸ್ ರುದ್ರೇಗೌಡ, ಮಲ್ಲಿಕಾರ್ಜುನ್ ಹನುಮಂತ ನಿರಾಣಿ ಮತ ಚಲಾಯಿಸಲಿದ್ದಾರೆ. ಕಾಂಗ್ರೆಸ್ ನಿಂದ ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಪರಿಷತ್ ಸದಸ್ಯರಾದ ಯು.ಬಿ ವೆಂಕಟೇಶ್,ಮೊಹನ್ ಕೊಂಡಜ್ಜಿ,ಕೆ.ಸಿ ಕೊಂಡಯ್ಯ, ಎಚ್.ಎಂ ರೇವಣ್ಣ,ರಘು ಆಚಾರ್ ಮೇಯರ್ ಚುನಾವಣೆಗೆ ಮತಚಲಾಯಿಸಲಿದ್ದಾರೆ.
ಒಟ್ಟು 45 ಸದಸ್ಯ ಬಲದ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ 22 ಸ್ಥಾನ, ಬಿಜೆಪಿ 21 ಸ್ಥಾನ, ಪಕ್ಷೇತರ ಒಂದು, ಜೆಡಿಎಸ್ ಸ್ಥಾನದ ಬಲವಿದೆ. ಒಟ್ಟಾರೆ ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆ ತೀವ್ರ ಕುತೂಹಲ ಉಂಟುಮಾಡಿದೆ.

Leave a Comment