ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ 912.34 ಲಕ್ಷ ರೂ ಉಳಿತಾಯ ಬಜೆಟ್ ಮಂಡನೆ

ದಾವಣಗೆರೆ, ಫೆ. 6 – ಮಹಾನಗರ ಪಾಲಿಕೆಯಲ್ಲಿಂದು ನಡೆದ ಬಜೆಟ್ ಸಭೆಯಲ್ಲಿ ಮೇಯರ್ ಶೋಭಾ ಪಲ್ಲಾಗಟ್ಟೆ 2019-20ನೇ ಸಾಲಿನ 912.34 ಲಕ್ಷ ರೂಗಳ ಉಳಿತಾಯ ಬಜೆಟ್ ಮಂಡಿಸಿದರು.
ದಾವಣಗೆರೆ ಮಹಾನಗರ ಪಾಲಿಕೆ ಸಭಾಂಗಣದಲ್ಲಿಂದು ನಡೆದ ಬಜೆಟ್ ಸಭೆಯಲ್ಲಿ ಮಾತನಾಡಿದ ಅವರು, ದುರ್ಬಲ ವರ್ಗದವರ ಕಲ್ಯಾಣಕ್ಕಾಗಿ ಹಲವಾರು ಸರ್ಕಾರಿ ಯೋಜನೆಗಳನ್ನು ನಗರದ ಜನತೆಗೆ ಯಶಸ್ವಿಯಾಗಿ ತಲುಪಿಸಲಾಗಿದೆ. ಅಭಿವೃದ್ದಿ ಕಾಮಗಾರಿಗಳನ್ನು ಉತ್ತಮವಾಗಿ ಜಾರಿಗೊಳಿಸಲಾಗಿದೆ. ಸ್ಮಾರ್ಟ್ ಸಿಟಿ ಹಾಗೂ ಅಮೃತ್ ನಂತಹ ಕೇಂದ್ರದ ಯೋಜನೆಗಳನ್ನು ನಗರದಲ್ಲಿ ಸಮರ್ಪಕವಾಗಿ ಅನುಷ್ಟಾನಗೊಳಿಸಲಾಗಿದೆ. ತೋಟಗಾರಿಕೆ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಹಯೋಗದೊಂದಿಗೆ ನಿರ್ಮಾಣಗೊಂಡಿರುವ ಗಾಜಿನ ಮನೆ ವಿನ್ಯಾಸಕ್ಕೆ ಝಾಕ್ ಪ್ರಶಸ್ತಿ ದೊರತಿರುವುದು ಅತ್ಯಂತ ಹೆಮ್ಮೆಯ ವಿಷಯ ಎಂದರು.
ವಾಣಿಜ್ಯ ಮಳಿಗೆಗಳ ಬಾಡಿಗೆ, ನೀರು ಸರಬರಾಜು ಸಂಪರ್ಕ ಶುಲ್ಕ, ಉದ್ದಿಮೆ ಪರವಾನಗಿ, ಜಾಹೀರಾತು ತೆರಿಗೆ ಸೇರಿದಂತೆ ವಿವಿಧ ರೂಪದಲ್ಲಿ ಒಟ್ಟು 12691.45 ಲಕ್ಷರೂ ಸಂಗ್ರಹಿಸಲಾಗಿದೆ. ಒಟ್ಟು 9094.87 ಲಕ್ಷ ರೂ ರಾಜಸ್ವ ಪಾವತಿಯಾಗಿದೆ. 8650.00 ಲಕ್ಷ ರೂ ಬಂಡವಾಳ ಜಮೆ, 14330.00 ಲಕ್ಷರೂ ಬಂಡವಾಳ ಪಾವತಿ, 11309.00 ಅಸಾಮಾನ್ಯ ಜಮೆ ಸೇರಿದಂತೆ ಒಟ್ಟು 912.34 ಲಕ್ಷ ರೂಗಳ ಉಳಿತಾಯ ಬಜೆಟ್ ಇದಾಗಿದೆ. ಮಹಾನಗರ ಪಾಲಿಕೆಗೆ ರಾಜ್ಯ ಹಣಕಾಸು ಆಯೋಗದಡಿ 2019-20ನೇ ಸಾಲಿನಲ್ಲಿ 2400 ಲಕ್ಷ ರೂಗಳ ಅನುದಾನ ಬಿಡುಗಡೆ ನಿರೀಕ್ಷಿಸಲಾಗಿದೆ. ಈ ಅನುದಾನವನ್ನು ಸರ್ಕಾರದ ಮಾರ್ಗಸೂಚಿಯಂತೆ ಕ್ರಿಯಾ ಯೋಜನೆ ರೂಪಿಸಿ ಮೂಲ ಸೌಕರ್ಯ ಅಭಿವೃದ್ದಿಗೆ ಬಳಸಿಕೊಳ್ಳಲು ಕ್ರಮವಹಿಸಲಾಗುವುದು. 14ನೇ ಕೇಂದ್ರ ಹಣಕಾಸು ಆಯೋಗದ ಅನುದಾನ, ಸ್ವಚ್ಚ ಭಾರತ ಅಭಿಯಾನದ ಅನುದಾನ, ಅಮೃತ್ ಯೋಜನೆಯಡಿ ಅನುದಾನ, ಸ್ಥಳೀಯ ಶಾಸಕರ ಹಾಗೂ ಸಂಸದರ ಅನುದಾನ ಸೇರಿದಂತೆ ವಿವಿಧ ಯೋಜನೆಯಡಿ ಬಿಡುಗಡೆಯಾಗುವ ಹಣವನ್ನು ಸಮರ್ಪವಾಗಿ ವಿನಿಯೋಗಿಸಲಾಗುವುದು. ಇನ್ನು ಪಾಲಿಕೆಯ ಸ್ವಂತ ಮೂಲಗಳ ಆದಾಯ ಹೆಚ್ಚಳಕ್ಕೆ ಕ್ರಮವಹಿಸಲಾಗಿದೆ. ಸ್ಮಾರ್ಟ್ ಸಿಟಿಯಾಗಿರುವ ದಾವಣಗೆರೆಯಲ್ಲಿ ವಾಹನ ಸಂಚಾರ ಹೆಚ್ಚಳವಾಗಿದ್ದು, ಪಾದಚಾರಿಗಳ ಅನುಕೂಲಕ್ಕಾಗಿ ಸ್ಕೈವಾಕ್ ನಿರ್ಮಿಸಲು 150.00 ಲಕ್ಷ ರೂನಿಗದಿಗೊಳಿಸಲಾಗಿದೆ. ನೀರು ಶುದ್ದೀಕರಣ ಘಟಕಗಳ ನವೀಕರಣ, ಪಾಲಿಕೆ ಪೌರಕಾರ್ಮಿಕರ ವಸತಿ ಸಮುಚ್ಚಯ, ಮಲ್ಟಿ ಪ್ಲೆಕ್ಸ್ ನಿರ್ಮಾಣ ಸೇರಿದಂತೆ ವಿವಿಧ ಕಾರ್ಯಗಳಿಗೆ ಅನುದಾನ ಕಾಯ್ದಿರಿಸಲಾಗಿದೆ. ಪರಿಸರ ಸಂರಕ್ಷಣೆಗಾಗಿ 30 ಲಕ್ಷ ರೂ ಅನುದಾನ ಒದಗಿಸಲಾಗಿದೆ. ಪಾಲಿಕೆಯ ಆವರಣದಲ್ಲಿರುವ ಪುಟ್ಟಣ್ಣ ಕಣಗಾಲ್ ವಾದ್ಯಮಂಟಪದ ಉನ್ನತೀಕರಣಕ್ಕಾಗಿ ಕ್ರಮಕೈಗೊಳ್ಳಲಾಗಿದೆ. ಜಿಲ್ಲಾಸ್ಪತ್ರೆ ಆವರಣದಲ್ಲಿ ರಾತ್ರಿ ತಂಗುದಾಣಕ್ಕಾಗಿ 50 ಲಕ್ಷ ರೂ ಅನುದಾನ, ಡಿಜಿಟಲ್ ಗ್ರಂಥಾಲಯ ನಿರ್ಮಾಣಕ್ಕಾಗಿ 50 ಲಕ್ಷ ರೂ ನಿಗದಿಗೊಳಿಸಲಾಗಿದೆ. ಅಂಧ ಮಕ್ಕಳಿಗೆ ಜಿಮ್ ಹಾಗೂ ಆಟದ ಸ್ಥಳ ನಿರ್ಮಾಣ, ಈಜುಕೊಳ ಉದ್ಯಾನವನಗಳಲ್ಲಿ ಮಕ್ಕಳ ಆಟಿಕೆ ಸಾಮಗ್ರಿ ಅಳವಡಿಸಲು ಅನುದಾನ ಮೀಸಲಿರಿಸಲಾಗಿದೆ. ಕ್ರೀಡೆಗಳಲ್ಲಿ ಭಾಗವಹಿಸುವ ಪಾಲಿಕೆ ನೌಕರರಿಗೆ ದಿನಭತ್ಯೆ ಹಾಗೂ ಪ್ರವಾಸ ಭತ್ಯೆ ಕ್ರೀಡಾಂಗಣದಲ್ಲಿ ಮಹಿಳಾ ವ್ಯಾಯಾಮ ಶಾಲೆ ಸ್ಥಾಪನೆ, ಮೊಬೈಲ್ ಪೊಲೀಸ್ ಚೌಕಿಗಳ ಸ್ಥಾಪನೆ, ಕ್ರೀಡಾಪಟುಗಳಿಗೆ ಪ್ರೋತ್ಸಾಹ, ಗರಡಿ ಮನೆಗಳಿಗೆ ಪ್ರೋತ್ಸಾಹ, ಪೌರಸನ್ಮಾನ ಸೇರಿದಂತೆ ವಿವಿಧ ಯೋಜನೆಗಳಿಗೆ ಅನುದಾನ ನಿಗದಿ, ಅಂಧ ಮಕ್ಕಳಿಗೆ ಕಂಪ್ಯೂಟರ್, ಲ್ಯಾಬ್ ಟಾಪ್ ಖರೀದಿಸಲು 3 ಲಕ್ಷ ರೂ, ಶಿಕ್ಷಣ ಇಲಾಖೆಗೆ 4 ಲಕ್ಷ ರೂ ವೆಚ್ಚದಲ್ಲಿ ಸಾಧನ ಸಲಕರಣೆಗಳ ಖರೀದಿ ಸೇರಿದಂತೆ ಪಾಲಿಕೆ ಅನುದಾನದಲ್ಲಿ ಹಣ ಮೀಸಲಿರಿಸಲಾಗಿದೆ. ಒಟ್ಟಾರೆ ವಿವಿಧ ಬಂಡಾವಳ ಪಾವತಿಗಳಿಗೆ ಸಂಬಂಧಿಸಿದಂತೆ 14330.00 ಲಕ್ಷ ರೂ ವೆಚ್ಚವನ್ನು ಆಯವ್ಯಯದಲ್ಲಿ ಅಂದಾಜಿಸಲಾಗಿದೆ ಎಂದು ತಿಳಿಸಿದರು. ಬಜೆಟ್ ಗೂ ಮುನ್ನ ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರಸ್ವಾಮೀಜಿ ಮತ್ತು ಹಿರಿಯ ರಾಜಕಾರಣಿ ಜಾರ್ಜ್ ಫರ್ನಾಂಡೀಸ್ ಅವರಿಗೆ ಒಂದು ನಿಮಿಷ ಕಾಲ ಮೌನಾಚರಣೆ ಮೂಲಕ ಶ್ರದ್ದಾಂಜಲಿ ಸಲ್ಲಿಸಲಾಯಿತು. ಬಜೆಟ್ ಸಭೆಯಲ್ಲಿ ಉಪಮೇಯರ್ ಕೆ.ಚಮನ್ ಸಾಬ್, ಸ್ಥಾಯಿ ಸಮಿತಿಯ ಅಧ್ಯಕ್ಷರುಗಳಾದ ತಿಪ್ಪಣ್ಣ, ಮೆಹಬೂಬ್ ಸಾಬ್, ಅನ್ನಪೂರ್ಣ ಪೂಜಾರ್, ಬಸವರಾಜ್, ಆಯುಕ್ತ ಮಂಜುನಾಥ್ ಬಳ್ಳಾರಿ ಮತ್ತಿತರರಿದ್ದರು.
 ದಿನೇಶ್ ಶೆಟ್ಟಿ ಆಕ್ಷೇಪ
ರಾಜ್ಯ ಬಜೆಟ್ ಅಧಿವೇಶನದ ದಿನದಂದೆ ಪಾಲಿಕೆಯ ಈ ಸಾಲಿನ ಆಯ-ವ್ಯಯ ಮಂಡನೆಯ ದಿನಾಂಕ ನಿಗದಿ ಪಡಿಸಿರುವುದಕ್ಕೆ ಪಾಲಿಕೆ ಸದಸ್ಯ ದಿನೇಶ್ ಕೆ.ಶೆಟ್ಟಿ ಆಕ್ಷೇಪ ವ್ಯಕ್ತಪಡಿಸಿದರು.ಸಭೆ ಆರಂಭವಾಗುತ್ತಿದ್ದಂತೆ ವಿಷಯ ಪ್ರಸ್ತಾಪಿಸಿ, ಪಾಲಿಕೆಯ ಬಜೆಟ್ ಮಂಡನೆ ಸಂದರ್ಭದಲ್ಲಿ ಶಾಸಕರು, ಎಂ.ಎಲ್.ಸಿ.ಗಳು ಭಾಗವಹಿಸುತ್ತಾರೆ. ಆದರೆ ಇಂದು ರಾಜ್ಯ ಬಜೆಟ್ ಮಂಡನೆ ಆಗುತ್ತಿದೆ. ಇಲ್ಲಿಯ ಶಾಸಕರು ಅಲ್ಲಿಗೆ ಹೋಗಿದ್ದಾರೆ. ಈ ದಿನ ಬಿಟ್ಟು ಬೇರೆ ದಿನ ನಿಗದಿ ಮಾಡಿದ್ದರೆ, ಅವರೂ ಭಾಗವಹಿಸುತ್ತಿದ್ದರು. ಈ ದಿನವನ್ನು ನಿಗದಿ ಮಾಡಿದ್ದು ಯಾರೂ ಎಂದು ಪ್ರಶ್ನಿಸಿದರುಮುಂದಿನ ಬಜೆಟ್ ಸಭೆ ದಿನ ನಿಗದಿ ಮಾಡುವುದಕ್ಕಿಂತಲೂ ಮೊದಲು, ಶಾಸಕರ ಭಾಗವಹಿಸಲು ಅನುಕೂಲವಾಗುವಂತೆ ನೋಡಿಕೊಂಡು, ದಿನ ನಿಗದಿ ಮಾಡಬೇಕೆಂದು ಸಲಹೆ ನೀಡಿದರು.

Leave a Comment