ದಾವಣಗೆರೆಯಲ್ಲಿ ವಿಶಿಷ್ಟ ವಿನ್ಯಾಸದಲ್ಲಿ ನಿರ್ಮಾಣಗೊಂಡಿದೆ ಗಾಜಿನ ಮನೆ

ದಾವಣಗೆರೆ, ಮಾ. 13 – ಮಧ್ಯ ಕರ್ನಾಟಕದ ಕೇಂದ್ರ ಬಿಂದುವಾದ ದಾವಣಗೆರೆಯಲ್ಲಿ ಕಣ್ಮನ ಸೆಳೆಯುವ ಹಾಗೂ ವಿಭಿನ್ನ ವಿಶಿಷ್ಟ ವಿನ್ಯಾಸದಲ್ಲಿ ಗಾಜಿನ ಮನೆ ರೂಪುಗೊಂಡಿದೆ. ದೇಶದಲ್ಲಿಯೇ ಪ್ರಥಮ ಬಾರಿಗೆ ಇಂತಹ ಗ್ಲಾಸ್ ಹೌಸ್ ನಿರ್ಮಾಣಗೊಂಡಿರುವುದು ವಿಶೇಷ. ಬೆಂಗಳೂರಿನ ಲಾಲ್ ಬಾಗ್ ಗ್ಲಾಸ್ ಹೌಸ್ ಸಹ ಮೀರಿಸುವಂತಿದೆ ಈ ಗಾಜಿನ ಮನೆ. ಹೌದು.ದಾವಣಗೆರೆಯ ಹೆಸರನ್ನು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡುವ ನಿಟ್ಟಿನಲ್ಲಿ ಈ ಗಾಜಿನ ಮನೆ ಪ್ರಮುಖ ಪಾತ್ರ ವಹಿಸಲಿದೆ. ದಾವಣಗೆರೆಯ ಹೊರಭಾಗದಲ್ಲಿರುವ ಕುಂದುವಾಡ ಕೆರೆ ಪಕ್ಕದಲ್ಲಿ ಈ ಗ್ಲಾಸ್ ಹೌಸ್ ನಿರ್ಮಾಣಗೊಂಡಿದೆ. ಸರ್ಕಾರಿ ಸೌಮ್ಯದ ಕೆಐಆರ್ ಡಿ ಎಲ್ ಸಂಸ್ಥೆಯ ತಂತ್ರಜ್ಞರೇ ಇದನ್ನು ತಯಾರಿಸಿದ್ದು, ಸುರಕ್ಷತೆಯ ದೃಷ್ಟಿಯಿಂದ ದಪ್ಪವಾದ ಗ್ಲಾಸ್ ಗಳನ್ನು ಅಳವಡಿಕೆ ಮಾಡಲಾಗಿದೆ. ವಿಶೇಷವೆಂದರೆ ಲಾಲ್ ಬಾಗ್ ನಲ್ಲಿರುವ ಗ್ಲಾಸ್ ಹೌಸ್ ಕ್ಕಿಂತ 5 ಪಟ್ಟು ದೊಡ್ಡದಾಗಿದ್ದು, ದೇಶದಲ್ಲಿ ಬೃಹತ್ ಗಾತ್ರದ ಗಾಜಿನ ಮನೆ ಎಂದು ಹೇಳಲಾಗುತ್ತಿದೆ. ಈ ಗಾಜಿನ ಮನೆಯನ್ನು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆಗೊಳಿಸಲಿದ್ದಾರೆ. ತೋಟಗಾರಿಕೆ ಇಲಾಖೆಯಿಂದ ಒಟ್ಟು 20 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಗಾಜಿನಮನೆ ಸುಮಾರು 108 ಮೀಟರ್ ಉದ್ದವಿದೆ. 68 ಮೀಟರ್ ಅಗಲ, 18 ಮೀ ಎತ್ತರ ಹೊಂದಿದೆ. ಇದನ್ನು ಸೇಂಟ್ ಗೋಬೇನ್ ಗ್ಲಾಸ್ ಗಳನ್ನು ಬಳಕೆ ಮಾಡಿ ವಿನೂತನ ವಿನ್ಯಾಸದಲ್ಲಿ ನಿರ್ಮಿಸಲಾಗಿದೆ. ಒಳಭಾಗದಲ್ಲಿ ಗ್ರಾನೈಟ್ ನೆಲಹಾಸು ಹಾಕಲಾಗಿದ್ದು, ಈ ಗ್ಲಾಸ್ ಗಳು ಸೂರ್ಯನ ಶಾಖಾ ನಿಯಂತ್ರಿಸುತ್ತವೆ ಹಾಗೂ ತಂಪಾದ ಅನುಭವ ನೀಡುವಂತಿದೆ. ಒಟ್ಟು 12 ಎಕರೆ ಪ್ರದೇಶದಲ್ಲಿ 3 ಎಕರೆಯ ಜಾಗದಲ್ಲಿ ಈ ಗ್ಲಾಸ್ ಹೌಸ್ ನಿರ್ಮಾಣಗೊಂಡಿದೆ. ಗಾಜಿನ ಮನೆಯ ಸುತ್ತಮುತ್ತಲೂ ಖಾಲಿ ಇರುವ ಜಾಗದಲ್ಲಿ ಮುಂದಿನ ದಿನಗಳಲ್ಲಿ ವಿದೇಶಿ ಮರಗಳನ್ನು ನೆಟ್ಟು ಅವುಗಳ ಮಧ್ಯೆ ಸಂಗೀತ ಕಾರಂಜಿ ಮಾಡುವ ಯೋಜನೆಯನ್ನು ತೋಟಗಾರಿಕೆ ಇಲಾಖೆ ಹೊಂದಿದೆ. ಇದರ ಪಕ್ಕದಲ್ಲಿಯೇ ತೋಟಗಾರಿಕೆ ಕೇಂದ್ರ ಆರಂಭಿಸಲಾಗುತ್ತಿದ್ದು, ನೂತನ ಹೂವು, ಹಣ್ಣು, ತರಕಾರಿ ತಳಿಗಳ ಸಂಸ್ಕರಣೆ ಹಾಗೂ ಕೃಷಿಗೆ ಸಂಬಂಧಿಸಿದ ಬೆಳೆಗಳನ್ನು ಬೆಳೆಸಲು ಗ್ಲಾಸ್ ಹೌಸ್ ಉಪಯೋಗವಾಗಲಿದೆ. ಒಟ್ಟಾರೆ ದಾವಣಗೆರೆಯ ಖ್ಯಾತಿಯನ್ನು ರಾಷ್ಟ್ರಮಟ್ಟದಲ್ಲಿಯೇ ಗುರುತಿಸುವಂತಾಗುತ್ತಿರುವುದು ಹೆಮ್ಮೆಯ ಸಂಗತಿ.

Leave a Comment