ದಾನ-ಧರ್ಮದಿಂದ ಸಿಗುವ ತೃಪ್ತಿ ಬೇರಾವುದರಿಂದಲೂ ಸಿಗುವುದಿಲ್ಲ

ಕೆ.ಆರ್.ಪೇಟೆ,ಆ.10- ನಾವೆಲ್ಲರು ಸಮಾಜದಿಂದ ಗಳಿಸಿದ ಆದಾಯದಲ್ಲಿ ಸ್ವಲ್ಪ ಭಾಗವನ್ನು ಸಮಾಜದ ಅಭಿವೃದ್ಧಿಗೆ ಕೊಡುಗೆಯಾಗಿ ನೀಡುವ ಉದಾರ ಗುಣವನ್ನು ನಾವೆಲ್ಲರೂ ಬೆಳೆಸಿಕೊಳ್ಳುವ ಮೂಲಕ ಉತ್ತಮ ಸಮಾಜ ನಿರ್ಮಿಸಲು ಕೈಜೋಡಿಸಬೇಕು ಎಂದು ಪಟ್ಟಣದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಸಿ.ರಮೇಶ್ ಹೇಳಿದರು.
ಅವರು ಪಟ್ಟಣದ ಹೇಮಾವತಿ ಬಡಾವಣೆಯ ಗಣಪತಿ ಪಾರ್ಕ್‍ನಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿರ್ವಹಣಾ ಶಾಸ್ತ್ರ ವಿಭಾಗದ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮದ ಅಡಿಯಲ್ಲಿ ಶಾಲೆಯ ಎಲ್ಲಾ ಮಕ್ಕಳಿಗೂ ಉಚಿತ ಲೇಖನ ಸಾಮಗ್ರಿಗಳನ್ನು ವಿತರಣೆ ಮಾಡಿ ಮಾತನಾಡಿದರು.
ನಾವು ಏನೇ ಗಳಿಸಿದರೂ ಈ ಸಮಾಜದಿಂದಲೇ ಗಳಿಸಿರುತ್ತೇವೆ. ಹಾಗಾಗಿ ನಮ್ಮ ಅಭಿವೃದ್ಧಿಯ ಜೊತೆ ಜೊತೆಗೆ ಸಮಾಜದ ಅಭಿವೃದ್ಧಿಯನ್ನು ನಾವು ಬಯಸಬೇಕು ಇದಕ್ಕಾಗಿ ನಾವು ಸಂಪಾದನೆ ಮಾಡಿದ ಆದಾಯದಲ್ಲಿ ಸ್ವಲ್ಪ ಭಾಗವನ್ನು ದಾನದ ರೂಪದಲ್ಲಿ ಬಡವರಿಗೆ ದಾನವಾಗಿ ನೀಡುವ ಉದಾರ ಗುಣವನ್ನು ಬೆಳೆಸಿಕೊಳ್ಳಬೇಕು. ದಾನ-ಧರ್ಮದಿಂದ ಸಿಗುವ ತೃಪ್ತಿ ಬೇರೆ ಯಾವುದೇ ಕೆಲಸದಿಂದ ಸಿಗುವುದಿಲ್ಲ ಎಂದು ಕೋಟಿ ಕೋಟಿ ಜೀವರಾಶಿಗಳಲ್ಲಿ ಮನುಷ್ಯರಾದ ನಾವು ಅತ್ಯಂತ ಶ್ರೇಷ್ಠ ಜೀವಿಯಾಗಿದ್ದೇವೆ ಹಾಗಾಗಿ ಇಂತಹ ಅಪರೂಪದ ಜೀವಿಯಾಗಿರುವ ನಾವು ನಮ್ಮ ಜೀವನವನ್ನು ಈ ಸಮಾಜದ ಏಳಿಗೆಗಾಗಿ ಅರ್ಪಿಸಿಕೊಳ್ಳಬೇಕಾದ ಅಗತ್ಯವಿದೆ. ಇದಕ್ಕಾಗಿ ನಾವು ಸಂಪಾದಿಸಿದ ಆದಾಯದಲ್ಲಿ ಸ್ವಲ್ಪ ಭಾಗವನ್ನು ಬಡವರಿಗೆ ನಿರ್ಗತಿಕರಿಗೆ, ಸರ್ಕಾರಿ ಶಾಲೆಯ ಮಕ್ಕಳಿಗೆ ದಾನವಾಗಿ ನೀಡಿದರೆ ಅಲ್ಲಿ ಕಲಿಯುವ ಬಡ ಮತ್ತು ಮಧ್ಯಮ ವರ್ಗದ ಮಕ್ಕಳಿಗೆ ಹೆಚ್ಚು ಉಪಯುಕ್ತವಾಗುತ್ತದೆ ಹಾಗೂ ಸರಕಾರಿ ಶಾಲೆಗಳು ಅಭಿವೃದ್ಧಿ ಹೊಂದಲು ಸಾಧ್ಯವಾಗಿದೆ. ವೃದ್ದಾಶ್ರಮಗಳಿಗೆ ದಾನ ನೀಡಿದರೆ ಆಶ್ರಯವಿಲ್ಲದವರಿಗೆ ಹೆಚ್ಚು ಸಹಕಾರಿಯಾಗುತ್ತದೆ. ಅಂಗವಿಕಲ ಸೇವಾ ಸಂಸ್ಥೆಗಳಿಗೆ ದಾನ ನೀಡಿದರೆ ದುಡಿಯಲು ಅಶಕ್ತರಾಗಿರುವ ಅಂಗವಿಕಲರು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತದೆ ಇದರಿಂದ ಇಂತಹ ನಿಟ್ಟಿನಲ್ಲಿ ನಮ್ಮ ಕಾಲೇಜಿನ ನಿರ್ವಹಣಾ ಶಾಸ್ತ್ರ ವಿಭಾಗವು ಸರ್ಕಾರಿ ಶಾಲೆಯ ಎಲ್ಲಾ 30 ಮಕ್ಕಳಿಗೆ ಲೇಖನ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸುವ ಮೂಲಕ ಉತ್ತಮ ಕೆಲಸ ಮಾಡಿದೆ ಮುಂದೆ. ಇದೇ ಎಲ್ಲರೂ ತಮ್ಮ ವ್ಯಾಪ್ತಿಯಲ್ಲಿ ಸಾಧ್ಯವಾದಷ್ಟು ಸೇವೆ ಮಾಡುವ ಉದಾರ ಗುಣಗಳನ್ನು ರೂಢಿಸಿಕೊಳ್ಳಬೇಕು ಈ ಮೂಲಕ ಜೀವನ ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಡಾ.ರಮೇಶ್ ಹೇಳಿದರು.
ಕಾಲೇಜಿನ ಅಧೀಕ್ಷಕ ಶಿವಕುಮಾರ್, ಪಾರ್ಕ್ ಶಾಲೆಯ ಹಿರಿಯ ಶಿಕ್ಷಕ ಎಸ್.ಎಸ್.ಶಿವಕುಮಾರ್, ಉಪನ್ಯಾಸಕರುಗಳಾದ ರೀನಾ, ಕಿರಣ್, ಅಪೂರ್ವ, ಶೃತಿ, ರೂಪಾ, ಮಂಜುನಾಥ್, ಉಮೇಶ್, ತಾಲೂಕು ಪ್ರೆಸ್ ಕ್ಲಬ್ ಅಧ್ಯಕ್ಷ ಶ್ರೀನಿವಾಸ್.ಆರ್.ಸಜ್ಜನ್, ಶಿಕ್ಷಕ ಕೆ.ಪಿ.ಮಂಜುನಾಥ್ ಮತ್ತಿತರರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

Leave a Comment