ದಾಖಲೆ ತನ್ನಿ ವಿಧಾನ ಸಭೆಯಲ್ಲಿ ಚರ್ಚಿಸೋಣ : ಮುಖ್ಯಮಂತ್ರಿಗೆ ಯಡಿಯೂರಪ್ಪ ಸವಾಲು

ಬೆಂಗಳೂರು,ಜೂ 18-ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತು ಎಚ್ ಡಿ ಕುಮಾರಸ್ವಾಮಿ ಹಗುರವಾಗಿ ಮಾತನಾಡುವುದನ್ನು ಇನ್ನಾದರೂ ಬಿಡಬೇಕು. ತಮ್ಮ ಹುಳುಕುಗಳನ್ನು ಮುಚ್ಚಿಕೊಳ್ಳಲು ನಮ್ಮ ಮೇಲೆ ಆರೋಪಿಸುವುದು ಹತಾಶೆಯ ಲಕ್ಷಣ.ಜಿಂದಾಲ್ ವಿಷಯ ಎತ್ತಿದಾಗ ಉಪ ಸಮಿತಿ ರಚಿಸಿ ದೊಂಬರಾಟ ಮಾಡುತ್ತಿದ್ದೀರಿ ಎಂದು ವಿಪಕ್ಷ ನಾಯಕ ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದಾರೆ.

ನಗರದ ಕೇಶವ ಕೃಪಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 20 ಕೋಟಿ ಚೆಕ್ ಹಣ ಪಡೆದ ಪ್ರಕರಣವನ್ನು ಸಿಬಿಐ ನ್ಯಾಯಾಲಯ ಖುಲಾಸೆ ಮಾಡಿ ಏಳೆಂಟು ವರ್ಷಗಳು ಕಳೆದಿವೆ.ನಾವು ಜಿಂದಾಲ್ ವಿಚಾರ ಎತ್ತಿದಾಗ ಸಚಿವ ಸಂಪುಟ ಉಪ ಸಮಿತಿ ಮಾಡಿಕೊಂಡು ದೊಂಬರಾಟ ಮಾಡುತ್ತಿದ್ದಾರೆ. ಜನರನ್ನು ತಪ್ಪು ದಾರಿಗೆ ಏಳೆಯಲು ಸುಳ್ಳು ಆರೋಪ ಮಾಡುವುದು ಬೇಡ.ವಿಧಾನ ಸಭೆಗೆ ಬನ್ನಿ ನಾನೂ ದಾಖಲೆ ತರುತ್ತೇನೆ,ನೀವು ದಾಖಲೆ ತನ್ನಿ ಚರ್ಚೆಗೆ ನಾನು ಸಿದ್ದನಿದ್ದೇನೆ.

ಯಡಿಯೂರಪ್ಪ ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ಅವರಿಗೆ ಶೋಭೆ ತರುವುದಿಲ್ಲ ಎಂದು ಮುಖ್ಯಮಂತ್ರಿ ವಿರುದ್ಧ ಯಡಿಯೂರಪ್ಪ ಗುಡುಗಿದ್ದಾರೆ.

ಜಿಂದಾಲ್ ಭೂಮಿ ಪರಭಾರೆ ಕೈಬಿಡಬೇಕೆಂದು ಬಳ್ಳಾರಿಗೆ ಪಾದಯಾತ್ರೆ ಮಾಡುವುದಿಲ್ಲ.ಆದರೆ ರಾಜ್ಯಾದ್ಯಂತ ನಾವು ಹೋರಾಟ ಮಾಡುತ್ತೇವೆ. ಈ ಬಗ್ಗೆ ಪಕ್ಷದ ನಾಯಕರು,ಮುಖಂಡರು ಸಭೆ ಸೇರಿ ಚರ್ಚೆ ಮಾಡುತ್ತೇವೆ. ವಿಧಾನ ಸಭೆ ಅಧಿವೇಶನದಲ್ಲಿ ರೈತರ ಸಾಲ‌ಮನ್ನಾ,ಜಿಂದಾಲ್‌ಗೆ ಭೂಮಿ ಮಾರಾಟ ಪ್ರಕರಣ, ಐಎಂಎ ವಂಚನೆ ಪ್ರಕರಣಗಳನ್ನು ಸದನದಲ್ಲಿ ಪ್ರಸ್ತಾಪಿಸಿ ಅಲ್ಲಿ ಹೋರಾಟ ಮಾಡುತ್ತೇವೆ. ಇಂದು ಜನರು ಹೋದಲ್ಲಿ ಬಂದಲ್ಲಿ ಸರ್ಕಾರದ ವಿರುದ್ಧ ಮಾತಾನಾಡುತ್ತಿದ್ದಾರೆ ಎಂದರು.

ಮಾನ್ಯತಾ ಟೆಕ್ ಪಾರ್ಕ್ ನಿಂದ 20 ಕೋಟಿ ರೂ ಪಡೆದು ಜಮೀನು ಮಾರಾಟದ ವ್ಯವಹಾರ ನಡೆದಿದ್ದು ಈಗ ಮುಗಿದ ಅಧ್ಯಾಯ.ಈಗ ಆ ಪ್ರಕರಣದ ಪ್ರಸ್ತಾಪ ಏಕೆ. ಜಿಂದಾಲ್ ಸಂಸ್ಥೆಗೆ ಭೂಮಿ‌ಪರಭಾರೆ ನಿರ್ಣಯಕ್ಕೆ ನಮ್ಮ ವಿರೋಧವಿದೆ.ರಾಜ್ಯದಲ್ಲಿ ತೀವ್ರ ಬರಗಾಲವಿದೆ.ಜನ ನೀರಿಗಾಗಿ ಹಾಹಾಕಾರ ಪಡುತ್ತಿದ್ದಾರೆ.ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿ ಅವರು ಗ್ರಾಮವಾಸ್ತವ್ಯ ಮಾಡಬೇಕಾ..? ನಾನು ಮತ್ತೆ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತೇನೆ ಎಂದು ವಿಪಕ್ಷ ನಾಯಕ ಯಡಿಯೂರಪ್ಪ ಹೇಳಿದರು.

Leave a Comment