ದಾಖಲೆಗೆ ಸಹಿಷ್ಣು

ಸಂಪೂರ್ಣ ಚಿತ್ರವನ್ನು ಐ-ಫೋನ್‌ನಲ್ಲಿ ಸೆರೆಹಿಡಿದಿರುವ ಸಹಿಷ್ಣು ಪೂರ್ಣಗೊಂಡಿದೆ ಎರಡು ಘಂಟೆ, ಒಂದು ನಿಮಿಷ, ಹದಿನೆಂಟು ಸೆಕೆಂಡ್‌ಗಳಲ್ಲಿ ಒಂದೇ ಶಾಟ್ ನಲ್ಲಿ ಸಿದ್ದಗೊಂಡಿರುವ ಈ ಚಿತ್ರವು  ವಿಶ್ವ ದಾಖಲೆಯಾಗಲಿದೆ ಎನ್ನುತ್ತಾರೆ ನಿರ್ದೇಶಕ  ಸಂಪತ್.

ವಿಚಾರವಾದಿಯೊಬ್ಬನ ಹತ್ಯೆಗೆ ಸುಪಾರಿ ನೀಡುವ  ಹಂತಕನನ್ನು ಅಪಹರಿಸಿ ಆತನಿಗೆ ಮಾನವ ಜನ್ಮ ದೊಡ್ಡದು ಪ್ರತಿಯೊಬ್ಬರು ಪ್ರೀತಿಸಬೇಕು, ಜಾತಿ ಧರ್ಮದ ಹಂಗು ತೊರೆದು ಪರಸ್ಪರ  ಗೌರವಿಸಬೇಕು ದೀನದಲಿತರು ಬಡವರತ್ತ ಕರುಣೆ ಹೊಂದಬೇಕು. ಮನುಜಪಥ ವಿಶ್ವಪಥದ ಘೋಷಣೆಯೊಂದಿಗೆ ವಿಶ್ವಮಾನವನಾಗಬೇಕು ಎಂದ ಕುವೆಂಪು ಸಂದೇಶ  ಹೇಳುತ್ತಾ  ಮನಪರಿವರ್ತಿಸುವುದೇ ಸಹಿಷ್ಣು ಸಾರಾಂಶವಾಗಿದೆ ಎನ್ನುವ ವಿವರ ನೀಡಿದರು.

ಮೂಲತ: ಬರಹಗಾರನಾಗಿ, ಹಲವು ನಿರ್ದೇಶಕರಿಗೆ ಸಹಾಯಕರಾಗಿ ಕೆಲಸ ಮಾಡಿರುವ ಸಂಪತ್ ಸಹಿಷ್ಣುಗೆ ನಿರ್ದೇಶನದ ಜೊತೆಗೆ ಕತೆ,ಚಿತ್ರಕತೆ, ಸಂಭಾಷಣೆ ಬರೆದಿರುವುದಲ್ಲದೇ ನಿರ್ಮಾಣ ಕೂಡ ಮಾಡಿ ನಾಯಕನಾಗಿ ನಟಿಸಿದ್ದಾರೆ. ಮೂರು ಪಾತ್ರಗಳ ಸುತ್ತ ಕತೆಯು ಸಾಗಲಿದೆ. ಮಡಕೇರಿ ಬಳಿ ಇರುವ ದೇವಸ್ರೂರ ಸುತ್ತಮುತ್ತಲ ಸುಂದರ ಪರಿಸರದಲ್ಲಿ ಚಿತ್ರೀಕರಣ ನಡೆಸಲಾಗಿದೆ ಎಂದರು ಸಂಪತ್.

ಚಿತ್ರದ ಉಳಿದ ಎರಡು ಪಾತ್ರಗಳಲ್ಲಿ ಹಿರಿಯ ನಟ ವಿಶ್ವನಾಥ್, ಅಶೋಕ್ ನಟಿಸಿದ್ದಾರೆ. ಛಾಯಗ್ರಹಣ ಅನಂತಕುಮಾರ್ ಅವರದಾಗಿದೆ. ಸದ್ಯ ಚಿತ್ರೀಕರಣೋತ್ತರ ಕೆಲಸದಲ್ಲಿ  ತೊಡಗಿಕೊಂಡಿದ್ದು, ಸದ್ಯದಲ್ಲೆ ಜನರಿಗೆ ತೋರಿಸಲು ಯೋಜನೆ ಹಾಕಲಾಗಿದೆ.

Leave a Comment