ದಾಂಡಲಿ: ಹಿರಿಯ ವಕೀಲರ ಹತ್ಯೆ ಖಂಡಿಸಿ

ಕೋರ್ಟ್ ಕಲಾಪ ಬಹಿಷ್ಕರಿಸಿ ಪ್ರತಿಭಟನೆ
ರಾಯಚೂರು.ಆ.01- ದಾಂಡಲಿ ತಾಲೂಕಿನ ಹಿರಿಯ ವಕೀಲರ ಹತ್ಯೆ ಖಂಡಿಸಿ, ಜಿಲ್ಲಾ ನ್ಯಾಯವಾದಿಗಳ ಸಂಘ ಕೋರ್ಟ್ ಕಲಾಪ ಬಹಿಷ್ಕರಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಈ ಸಂಬಂಧ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ, ಹಿರಿಯ ವಕೀಲರಾದ ಅಜೀತ್ ನಾಯಕ ಅವರನ್ನು ಅಪರಿಚಿತ ವ್ಯಕ್ತಿಗಳು ಮಾರಕಾಸ್ತ್ರದಿಂದ ಹಲ್ಲೆ ಮಾಡಿ ಹತ್ಯೆಗೈದಿರುವುದು ಖಂಡನೀಯ. ಶೀಘ್ರ ಆರೋಪಿಗಳನ್ನು ಬಂಧಿಸಿ, ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ, ವಕೀಲರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಆಗ್ರಹಿಸಿದರು. ಮುಂಬರುವ ದಿನಗಳಲ್ಲಿ ಇಂತಹ ಘಟನೆ ಮರುಕಳಿಸದಂತೆ ಸಂಬಂಧ ಪಟ್ಟ ಅಧಿಕಾರಿಗಳು ವಕೀಲರಿಗೆ ಸೂಕ್ತ ರಕ್ಷಣೆ ನೀಡಬೇಕು ಮತ್ತು ತಮ್ಮ ಕರ್ತವ್ಯ ಕಾನೂನು ಬದ್ಧವಾಗಿ ನಿರ್ವಹಿಸಲು ಸಹಕರಿಸಬೇಕೆಂದು ಒತ್ತಾಯಿಸಿದರು.
ಇತ್ತೀಚಿನ ದಿನಗಳಲ್ಲಿ ವಕೀಲರ ಮೇಲೆ ಮಾರಣಾಂತಿಕ ಹಲ್ಲೆ, ಕೊಲೆ, ಪ್ರಕರಣಗಳು ಹೆಚ್ಚುತ್ತಿದ್ದು, ತಕ್ಷಣವೇ ಸರಕಾರ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ನ್ಯಾಯವಾದಿಗಳಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ಆಗ್ರಹಿಸಿದರು.
ಅಧ್ಯಕ್ಷ ಬಾನುರಾಜ ವಕೀಲರು, ಶ್ರೀಧರ ಎಲಿ, ಪಾಂಡುರಂಗ ವಕೀಲರು, ಕರುಣಕರ ಕಟ್ಟಿಮನಿ, ಬಸನಗೌಡ, ವೀರೇಶ ಸಜ್ಜನ್, ರಾಕೇಶ, ಸಂಗಪ್ಪ, ಪಿ.ಬಸವರಾಜ್, ನಜೀರ್ ಅಹ್ಮದ್, ರಾಮು, ಶಿವಶಂಕರ ವಕೀಲರು ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.

Leave a Comment