ಮೈಸೂರು ದಸರಾ ಅರಮನೆಗೆ ನೀಡುವ ಗೌರವ ಧನ ರದ್ದತಿಗೆ ಆಗ್ರಹ

ಮೈಸೂರು: ಸೆ.೮- ದಸರಾ ಹಿನ್ನೆಲೆಯಲ್ಲಿ ಮೈಸೂರಿನ ರಾಜಮನೆತನಕ್ಕೆ ಸರ್ಕಾರ ನೀಡುತ್ತಾ ಬಂದಿರುವ ಗೌರವಧನದ ಕುರಿತ ವಿಚಾರ ಈ ವರ್ಷವು ವಿವಾದಕ್ಕೀಡಾಗಿದೆ. ಪ್ರತಿ ಬಾರಿ ಗೌರವಧನ ನೀಡುವ ಬಗ್ಗೆ ಗೊಂದಲ ಉಂಟಾಗುತ್ತಿದ್ದು, ಈ ಬಾರಿ ಕೊಡಗಿನ ಸಂತ್ರಸ್ತರು ಈ ಹಣದ ಉಪಯೋಗ ಪಡೆಯಲಿ ಅನ್ನೋ ಕೂಗು ಕೇಳಿಬಂದಿದೆ.

ಇತಿಹಾಸ ತಜ್ಞ ಪೊರ. ನಂಜರಾಜೇ ಅರಸ್ ಈ ಬಗ್ಗೆ ಆಕ್ಷೇಪ ಎತ್ತಿದ್ದು, ಯದುವಂಶದ ರಾಜಮಾತೆ ಪ್ರಮೋದೇವಿ ಅವರಿಗೆ ಸರ್ಕಾರ ನೀಡುವ 36 ಲಕ್ಷ ರೂ. ಹಣವನ್ನು ಈ ವರ್ಷವಾದರೂ ರದ್ದುಪಡಿಸಿ, ಅದನ್ನು ಕೊಡಗಿಗೆ ನೀಡುವಂತೆ ಮನವಿ ಮಾಡಿದ್ದಾರೆ.

ಇತಿಹಾಸ ತಜ್ಞ ನಂಜರಾಜ ಅರಸ್ ಹಲವು ವರ್ಷಗಳಿಂದ ಮೈಸೂರು ರಾಜಮನೆತನಕ್ಕೆ ಸರ್ಕಾರ ದಸರಾ ಸಂದರ್ಭದಲ್ಲಿ ನೀಡುವ ಗೌರವಧನ ರದ್ದುಗೊಳಿಸಬೇಕೆಂದು ಆಗ್ರಹಿಸುತ್ತಲೇ ಬರುತ್ತಿದ್ದಾರೆ. ಈ ಬಾರಿಯೂ ಗೌರವ ಧನ ನೀಡಬೇಡಿ ಎಂದು ಒತ್ತಾಯಿಸಿರುವ ನಂಜರಾಜ ಅರಸ್, ಯಾಕಾಗಿ ರಾಜಮನೆತನಕ್ಕೆ ಸರ್ಕಾರ ತಲೆ ಬಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ.

ಅಷ್ಟೇ ಅಲ್ಲದೇ ಮಾಹಿತಿ ಹಕ್ಕು ಕಾಯ್ದೆಯಡಿ ಜಿಲ್ಲಾಡಳಿತವನ್ನು 2012 ರಿಂದ 2016-17ರವರೆಗೆ ಎಷ್ಟು ಹಣವನ್ನು ಗೌರವಧನ ರೂಪದಲ್ಲಿ ನೀಡಿದ್ದೀರಿ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರ ನೀಡಿರುವ ಜಿಲ್ಲಾಡಳಿತ 1 ಕೋಟಿ 36 ಲಕ್ಷ ರೂಪಾಯಿ ನೀಡಿದ್ದೇವೆ ಎಂದು ಹೇಳಿದೆ.

ಸರ್ಕಾರ ನೀಡುವ ಹಣ ಹಾಗೂ ರಾಜಮನೆತನದವರು ತೆಗೆದುಕೊಳ್ಳುವ ಹಣ ಸಾರ್ವಜನಿಕ ಹಣವಾಗಿದೆ. ಆದ್ದರಿಂದ ಈ ಬಾರಿಯಾದರೂ ಸರ್ಕಾರ ಆ ಹಣವನ್ನು ಕೊಡಗಿಗೆ ನೀಡಬೇಕು. ಇಲ್ಲವಾದಲ್ಲಿ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರಾದರೂ ಸ್ವಇಚ್ಛೆಯಿಂದ ಹಣ ಬೇಡವೆಂದೋ ಅಥವಾ ಅವರೇ ವೈಯಕ್ತಿಕವಾಗಿ ಗೌರವಧನವನ್ನು ಕೊಡಗಿಗೆ ನೀಡಬೇಕು ಎಂದು ಕನ್ನಡ ವೇದಿಕೆ ಅಧ್ಯಕ್ಷ ಬಾಲಕೃಷ್ಣ ಒತ್ತಾಯಿಸಿದ್ದಾರೆ.

Leave a Comment