ದಸರಾ ಮಹೋತ್ಸವ ಸಿದ್ಧತೆಗೆ ಸಚಿವರ ಸೂಚನೆ

ತಿ.ನರಸೀಪುರ. ಸೆ.11: ತಾಲ್ಲೂಕು ಮಟ್ಟದಲ್ಲಿ ಆಚರಿಸಲು ಉದ್ದೇಶಿಸಿರುವ ಪಾರಂಪರಿಕ ನಾಡ ದಸರಾ ಮಹೋತ್ಸವವನ್ನು ಅದ್ದೂರಿಯಾಗಿ ನಡೆಸಲು ಶಾಸಕರ ಅಧ್ಯಕ್ಷತೆಯಲ್ಲಿ ಅಧಿಕಾರಿಗಳು ಸಭೆ ಮಾಡಿ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಸೂಚಿಸಿದರು.
ತಿರಮಕೂಡಲಿನ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಗ್ರಾಮೀಣ ದಸರಾ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಾಡ ಹಬ್ಬ ದಸರಾ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲು ಸರ್ಕಾರ ನಿರ್ಧರಿಸಿದ್ದು, ಜಿ¯ಲ್ಲೆಯ ಗ್ರಾಮೀಣ ಭಾಗಗಳಲ್ಲಿ ದಸರಾ ಮಹೋತ್ಸವದ ರಂಗು ತರಲು ಪ್ರತಿ ತಾಲ್ಲೂಕಿಗೆ 50 ಲಕ್ಷ ಅನುದಾನ, ಪುರಸಭೆ, ನಗರಸಭೆಗಳಿಗೆ ತಲಾ 1 ಲಕ್ಷ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಈ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಅಧಿಕಾರಿಗಳು ಯಾವುದೇ ಲೋಪ ಬಾರದಂತೆ ಕಾರ್ಯಕ್ರಮ ಯಶಸ್ವಿಗೆ ಪೂರ್ವ ತಯಾರಿ ಮಾಡಿಕೊಳ್ಳುವಂತೆ ತಿಳಿಸಿದರು. ಗ್ರಾಮೀಣ ಕ್ರೀಡಾ ಕೂಟಕ್ಕೆ ಜಿಲ್ಲೆಗೆ 6 ಕೋಟಿ ಬಿಡುಗಡೆ ಮಾಡಲಾಗಿದೆ. ಆಯಾಯಾ ತಾಲ್ಲೂಕಿನ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮ ವಹಿಸುವಂತೆ ಹೇಳಿದರು.
ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ವಸತಿ ಯೋಜನೆಯಡಿ 3600 ಮನೆಗಳನ್ನು ಮಂಜೂರು ಮಾಡಲಾಗಿದೆ. ದಸರಾ ಮುಗಿದ ನಂತರ ಮೈಸೂರು ಜಿಲ್ಲೆ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸುವುದಾಗಿ ತಿಳಿಸಿದ ಅವರು, ಅಧಿಕಾರಿಗಳು ಆಡಳಿತ ನಡೆಸುವಾಗ ಆಗುತ್ತಿರುವ ತಪ್ಪುಗಳನ್ನು ಸರಿಪಡಿಸಿಕೊಂಡು ಕೆಲಸ ಮಾಡಬೇಕು. ಸರ್ಕಾರದ ಅನುದಾನ ಸರಿಯಾಗಿ ಬಳಕೆ ಮಾಡುವಲ್ಲಿ ಅಧಿಕಾರಿಗಳು ವಿಫಲರಾಗುತ್ತಿದ್ದಾರೆ. ಯಾವ್ಯಾವ ಅನುದಾನ ಹೇಗೆ ಬಳಸಬೇಕು ಎಂಬುದನ್ನು ಒಂದು ವರ್ಷದ ಆಡಳಿತದ ಅವಧಿಯಲ್ಲಿ ನಿಮಗೆ ತಿಳಿಸಿಕೊಡುವುದಾಗಿ ಹೇಳಿದರಲ್ಲದೇ, ದೂರುಗಳು ಬಂದಲ್ಲಿ ಶಿಸ್ತು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಗೊಂದಲ : ಪೂರ್ವಭಾವಿ ಸಭೆಯಲ್ಲಿ ತಮಗೆ ಮಾತನಾಡಲು ಅವಕಾಶ ನೀಡುವಂತೆ ತಾ. ಪಂ ಸದಸ್ಯ ರಮೇಶ್ ಅವರು ಮಾಡಿದ ಮನವಿಯನ್ನು ತಿರಸ್ಕರಿಸಿದ ಜಿಲ್ಲಾ ಉಸ್ತುವಾರಿ ಸಚಿವರ ವರ್ತನೆಯನ್ನು ಖಂಡಿಸಿ ತಾ.ಪಂ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ ವೇಳೆ, ತಾ.ಪಂ ಸದಸ್ಯರು ಹಾಗೂ ಸಚಿವರ ನಡುವೆ, ಶಾಸಕರು ಹಾಗೂ ತಾ.ಪಂ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಸಭೆಯಲ್ಲಿ ಕೆಲ ಕಾಲ ಗೊಂದಲ ಉಂಟಾಯಿತು. ಘಟನೆಯಿಂದ ಬೇಸತ್ತು ಸದಸ್ಯ ರಮೇಶ್ ಸಭೆಯಿಂದ ಹೊರ ನಡೆದರೆ, ಈ ವೇಳೆ ಶಾಸಕ ಅಶ್ವಿನ್ ಕುಮಾರ್, ತಾ. ಪಂ ಸದಸ್ಯ ರಾಮಲಿಂಗಯ್ಯ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ಶಾಸಕ ಅಶ್ವಿನ್ ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಕೋಟೆ ಶಿವಣ್ಣ, ಮಾಜಿ ಶಾಸಕರಾದ ಡಾ. ಭಾರತೀಶಂಕರ್, ಜಿ.ಪಂ ಅಧ್ಯಕ್ಷೆ ಪರಿಮಳಾ ಶ್ಯಾಮ್, ಸದಸ್ಯರಾದ ಜಯಪಾಲ್ ಭರಣಿ, ಕೈಯಂಬಳ್ಳಿ ನಟರಾಜು, ಉಪವಿಭಾಗಾಧಿಕಾರಿ ವೆಂಕಟರಾಜು, ತಹಶೀಲ್ದಾರ್ ನಾಗಪ್ರಶಾಂತ್, ಇಓ ಜೆರಾಲ್ಡ್ ರಾಜೇಶ್, ಬಿಇಓ ಸ್ವಾಮಿ, ಸಿಡಿಪಿಓ ಬಸವರಾಜು, ಎಇಇಗಳಾದ ಲಕ್ಷ್ಮಣ್‍ರಾವ್, ವಾಜಿದ್ ಖಾನ್, ಕೃಷ್ಣ, ತಾ.ಪಂ ಸದಸ್ಯ ಗಣೇಶ್, ಬಿಜೆಪಿ ಕ್ಷೇತ್ರಾಧ್ಯಕ್ಷ ಪರಶಿವಮೂರ್ತಿ, ಪುರಸಭಾಧಿಕಾರಿ ಅಶೋಕ್, ಲೋಕೇಶ್ ತಾಲ್ಲೂಕು ಪಂಚಾಯಿತಿ, ಪುರಸಭೆಯ ಸದಸ್ಯರು ಹಾಗೂ ಅಧಿಕಾರಿಗಳು ಹಾಜರಿದ್ದರು.

Leave a Comment