ದಸರಾ ಗಜಪಡೆಗೆ ರಾಜಾತಿಥ್ಯ

ನಿತ್ಯ ಮಜ್ಜನ; ಭರ್ಜರಿ ಭೋಜನ
ಮೈಸೂರು, ಸೆ. 11. ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಕಾಡಿನಿಂದ ನಾಡಿಗೆ ಬಂದು ಅರಮನೆಯ ಆವರಣದಲ್ಲಿ ಬೀಡುಬಿಟ್ಟಿರುವ ಅರ್ಜುನ ನೇತೃತ್ವದ ಗಜಪಡೆಗೆ ವಿಶೇಷ ಭೋಜನ ಸೇರಿದಂತೆ ರಾಜಾತಿಥ್ಯ ನೀಡಲಾಗುತ್ತಿದೆ. ಈ ಮೂಲಕ ಜಂಬೂಸವಾರಿಗೆ ದಸರಾ ಗಜಪಡೆಯನ್ನು ಭರ್ಜರಿಯಾಗಿ ಸಿದ್ಧಗೊಳಿಸುವ ಕಾರ್ಯ ಭರದಿಂದ ಆರಂಭ ಕಂಡಿದೆ.
ಅರಮನೆ ಆವರಣದಿಂದ ಬನ್ನಿಮಂಟಪದವರೆಗೆ 6 ಕಿ.ಮೀ. ಕ್ರಮಿಸಿ ಜಂಬೂಸವಾರಿ ನಡೆಸಿಕೊಡುವ ಗಜಪಡೆ ಆ ದಿನದಂದು ಕನಿಷ್ಠ ನಾಲ್ಕರಿಂದ ಐದು ಗಂಟೆಗಳ ಕಾಲ ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಿದೆ. ಆನೆಗಳಿಗೆ ಈ ಶಕ್ತಿ ಸಾಮರ್ಥ್ಯ ತಂದುಕೊಡುವ ಉದ್ದೇಶದಿಂದ ವಿಶೇಷ ಭೋಜನ ಹಾಗೂ ಆತಿಥ್ಯ ನೀಡಲಾಗುತ್ತದೆ. ಅಂಬಾರಿ ಆನೆ ಅರ್ಜುನ ನೇತೃತ್ವದ 6 ಆನೆಗಳಿಗೆ ಪ್ರತಿ ದಿನ 2 ಬಾರಿ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಮುಂಜಾನೆ 5.30ಕ್ಕೆ ಹಾಗೂ ಸಂಜೆ 5ಕ್ಕೆ ಶಕ್ತಿ ವೃದ್ಧಿಸುವ ಆಹಾರ ನೀಡಲಾಗುತ್ತಿದೆ. ಉದ್ದಿನ ಕಾಳು, ಹೆಸರು ಕಾಳು, ಗೋಧಿ, ಕುಸುಬಲು ಅಕ್ಕಿ, ಬೇಯಿಸಿದ ಈರುಳ್ಳಿ ಮಿಶ್ರಣ, ಬೀಟ್ರೂಟ್, ಕ್ಯಾರೆಟ್, ಮೂಲಂಗಿ, ಗೆಡ್ಡೆಕೋಸು, ಸೌತೆಕಾಯಿ ತುಂಡುಗಳೊಂದಿಗೆ ಮಿಶ್ರಣ ಮಾಡಿದ ಆಹಾರ ನೀಡಲಾಗುತ್ತಿದೆ.
ಧಾನ್ಯಗಳ ಆಹಾರ:
ಪಶುವೈದ್ಯರ ಸಹಾಯಕ ರಂಗರಾಜು ಆನೆಗಳಿಗೆ ಆಹಾರ ತಯಾರಿಸುತ್ತಾರೆ. ಅರಮನೆಯ ಆವರಣದಲ್ಲಿರುವ ಕೋಡಿ ಸೋಮೇಶ್ವರ ದೇವಾಲಯದ ಆವರಣದಲ್ಲಿ ಆಹಾರ ತಯಾರಿಕೆಗಾಗಿಯೇ ಪ್ರತ್ಯೇಕ ಶೆಡ್ ನಿರ್ಮಿಸಲಾಗಿದೆ. ದೊಡ್ಡ ಪಾತ್ರೆಯೊಂದರಲ್ಲಿ ಮೊದಲಿಗೆ ಉದ್ದಿನ ಕಾಳು, ಗೋಧಿಯನ್ನು ಬೇಯಿಸಲಾಗುತ್ತದೆ. ಬಳಿಕ ಆ ಪಾತ್ರೆಗೆ ಹೆಸರು ಕಾಳು, ಕುಸುಬಲು ಅಕ್ಕಿ ಹಾಗೂ ಈರುಳ್ಳಿಯನ್ನು ಬೆರೆಸಿ ಬೇಯಿಸಲಾಗುತ್ತದೆ. ಹೀಗೆ ಮತ್ತೆ ಎರಡು ಗಂಟೆ ಬೇಯಿಸಿದ ನಂತರ ಒಂದು ಹದಕ್ಕೆ ಬರುತ್ತದೆ. ಹೀಗೆ ಬೇಯಿಸಿದ ಧಾನ್ಯಗಳನ್ನು ದೊಡ್ಡ ತಟ್ಟೆಗೆ ಹಾಕಿ ಮುದ್ದೆಯಂತೆ ಉಂಡೆ ಕಟ್ಟಿ ಸಂಜೆ ವೇಳೆ ಆನೆಗಳಿಗೆ ನೀಡಲಾಗುತ್ತದೆ. ಇದೇ ರೀತಿ ಆಹಾರವನ್ನು ತಯಾರಿಸಿ ದಾಸ್ತಾನು ಕೊಠಡಿಯಲ್ಲಿ ಇರಿಸಲಾಗುತ್ತದೆ. ಇದನ್ನು ಮುಂಜಾನೆ 6.30ರ ವೇಳೆಗೆ ನೀಡಲಾಗುತ್ತದೆ.
ಕುಸುರೆ, ತರಕಾರಿ:
ನಿತ್ಯವೂ 70 ಕೆ.ಜಿ. ಹೆಸರು ಕಾಳು, 70 ಕೆಜಿ ಉದ್ದಿನಕಾಳು, 70 ಕೆಜಿ ಕುಸುಬಲು ಅಕ್ಕಿ, 70 ಕೆಜಿ ಗೋಧಿಯನ್ನು ಆಹಾರ ತಯಾರಿಸಲು ಬಳಸಲಾಗುತ್ತದೆ. ಅಲ್ಲದೆ 70 ಕೆಜಿ ಕ್ಯಾರೆಟ್, 70 ಕೆಜಿ ಬೀಟ್‍ರೂಟ್, 70 ಕೆಜಿ ಮೂಲಂಗಿ, 70 ಕೆಜಿ ಗೆಡ್ಡೆಕೋಸು, 70 ಕೆಜಿ ಸೌತೇಕಾಯಿ ಬೇಕಾಗುತ್ತದೆ. ಪ್ರತಿ ಆನೆಗಳಿಗೆ ಒಂದು ಬಾರಿಗೆ 15 ರಿಂದ 25 ಕೆಜಿ ಪೌಷ್ಟಿಕ ಆಹಾರ ನೀಡಲಾಗುತ್ತದೆ. ಆದರೆ ಅಂಬಾರಿ ಹೊರುವ ಅರ್ಜುನನಿಗೆ 25ರಿಂದ 30 ಕೆಜಿ ನೀಡಲಾಗುತ್ತದೆ. ಇದಲ್ಲದೆ ಗಂಡಾನೆಗಳಿಗೆ ನಿತ್ಯವೂ ಒಂದು ಕೆಜಿ, ಅರ್ಜುನನಿಗೆ ಒಂದೂವರೆ ಕೆಜಿ ಬೆಣ್ಣೆ ನೀಡಲಾಗುತ್ತಿದೆ. ಇದಲ್ಲದೆ ನಿತ್ಯವೂ ಒಂದು ಆನೆಗೆ 450ರಿಂದ 600 ಕೆಜಿ ಸೊಪ್ಪು, 250 ಕೆಜಿ ಹಸಿ ಹುಲ್ಲು, 50 ಕೆಜಿ ಭತ್ತದ ಹುಲ್ಲು ನೀಡಲಾಗುತ್ತದೆ. ಭತ್ತ, ಬೆಲ್ಲ, ತೆಂಗಿನಕಾಯಿ, ಕಡಲೆಕಾಯಿ ಹಿಂಡಿ, ಉಪ್ಪನ್ನು ಮಿಶ್ರಣ ಮಾಡಿ ಭತ್ತದ ಹುಲ್ಲಿನಲ್ಲಿ ಗಂಟು ಕಟ್ಟಿ(ಕುಸುರೆ) ಮಧ್ಯಾಹ್ನದ ವೇಳೆ ಆನೆಗಳಿಗೆ ಸುಮಾರು 35 ಕೆಜಿ ಕುಸುರೆ ನೀಡಲಾಗುತ್ತಿದೆ.
ಕೋಟ್
ಪಶುವೈದ್ಯರ ಸಲಹೆಯಂತೆ ದಿನದಿಂದ ದಿನಕ್ಕೆ ಎಲ್ಲಾ ಆನೆಗಳಿಗೂ ಪೌಷ್ಟಿಕ ಆಹಾರ ನೀಡುವ ಪ್ರಮಾಣವನ್ನು ಹೆಚ್ಚಿಸಲಾಗುತ್ತದೆ. ಅದರಲ್ಲಿಯೂ ಅಂಬಾರಿ ಹೊರುವ ಅರ್ಜುನನಿಗೆ ಎಲ್ಲಾ ಆನೆಗಳಿಗಿಂತ ಹೆಚ್ಚು ಆಹಾರ ನೀಡಲಾಗುವುದು. ಮೊದಲ ಹಂತದಲ್ಲಿ ಆಗಮಿಸಿರುವ ಆನೆಗಳಿಗೆ ಎಂದಿನಂತೆ ಪೌಷ್ಟಿಕ ಆಹಾರ ನೀಡುತ್ತಿದ್ದೇವೆ. ಸದ್ಯದಲ್ಲಿಯೇ ಎರಡನೆ ತಂಡ ಆಗಮಿಸಲಿದ್ದು, ಅವುಗಳಿಗೂ ಪೌಷ್ಟಿಕ ಆಹಾರ ನೀಡಲು ಸಿದ್ಧ್ದತೆ ಮಾಡಿಕೊಳ್ಳುತ್ತಿದ್ದೇವೆ.
-ಡಾ. ನಾಗರಾಜು, ಅರಣ್ಯ ಇಲಾಖೆ ಪಶುವೈದ್ಯ

Leave a Comment