ದಸರಾಗೆ ಕಾಂಗ್ರೆಸ್ಸಿಗರ ಗೈರು

ಕೊನೆಯ ದಿನ ಉತ್ತರಿಸುವೆ
ಮೈಸೂರು, ಅ.11- ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಮೈಸೂರು ಭಾಗದ ಕಾಂಗ್ರೆಸ್ ನಾಯಕರು ಗೈರು ಹಾಜರಾಗಿರುವುದು ವಿವಾದಕ್ಕೆ ಎಡೆಮಾಡಿದೆ.

ಉದ್ಘಾಟನಾ ಸಮಾರಂಭದಲ್ಲಿ ಪ್ರಮುಖ ನಾಯಕರ ಗೈರು, ಹಲವು ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.

ದಸರಾ ಕಾರ್ಯಕ್ರಮಗಳಿಗೆ ಕಾಂಗ್ರೆಸ್ ಮುಖಂಡರು ಗೈರುಹಾಜರಾಗುತ್ತಿರುವ ಬಗ್ಗೆ ಗರಂ ಆಗಿರುವ ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಕೊನೆಯ ದಿನ ಎಲ್ಲದಕ್ಕೂ ಉತ್ತರ ನೀಡುವುದಾಗಿ ಹೇಳಿದ್ದಾರೆ.

ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಗರದ ಪುರಭವನದ ಎದುರು ಏರ್ಪಡಿಸಿದ್ದ ಪಾರಂಪರಿಕ ನಡಿಗೆಗೆ ಚಾಲನೆ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಸರಾ ನಿನ್ನೆಯಷ್ಟೇ ಆರಂಭವಾಗಿದೆ. ಕೊನೆಯ ದಿನದ ವರೆಗೆ ಕಾಯಿರಿ. ಎಲ್ಲಕ್ಕೂ ಉತ್ತರ ನೀಡುವೆ ಎಂದರು.

ಕಾಂಗ್ರೆಸ್ ನಾಯಕರು ಚುನಾವಣೆ ಕೆಲಸ, ಮಂಡ್ಯ ಹಾಗೂ ಚಾಮರಾಜ ನಗರದಲ್ಲಿ ನಡೆಯುತ್ತಿರುವ ವಿವಿಧ ದಸರಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ನಿರ್ವಹಿಸುತ್ತಿದ್ದೇವೆ. ಸಚಿವ ಪುಟ್ಟರಂಗಶೆಟ್ಟಿ ಅವರ ಬೇಡಿಕೆಯನ್ನೂ ಈಡೇರಿಸಿದ್ದೇವೆ ಎಂದು ಸ್ಪಷ್ಟನೆ ನೀಡಿದರು.

 ಪಾರಂಪರಿಕ ನಡಿಗೆಗೆ ಚಾಲನೆ:
ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಪ್ರಯುಕ್ತ ನಗರದಲ್ಲಿ ಇಂದು ಪಾರಂಪರಿಕ ಉಡುಗೆಯೊಂದಿಗೆ ಪಾರಂಪರಿಕ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ಕೊಡಲಾಯ್ತು. ಪಾರಂಪರಿಕ ಉಡುಗೆ ತೊಟ್ಟ ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಪಾರಂಪರಿಕ ನಡಿಗೆಗೆ ಚಾಲನೆ ಕೊಟ್ಟರು.

ಬಾಲಕರಿಂದ ವೃದ್ಧರವರೆಗೆ ಪಾರಂಪರಿಕ ಉಡುಗೆ-ತೊಡುಗೆಯ ಮೂಲಕ ನಡಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದರು.
ಮೈಸೂರಿನ ನಾಗರಿಕರು ಮೈಸೂರು ಪೇಟ, ಸಿಲ್ಕ್ ಪಂಚೆ, ಸೀರೆ ತೊಟ್ಟು ನಡಿಗೆಯಲ್ಲಿ ಪಾಲ್ಗೊಂಡರು.

ಮೈಸೂರಿನ ಪುರಭವನದಿಂದ ನಡಿಗೆ ಪ್ರಾರಂಭವಾಗಿ, ಮೈಸೂರಿನ ಪ್ರಮುಖ ರಸ್ತೆಗಳಲ್ಲಿ ಸಂಚಾರಿಸಿತು. ಕೆ.ಆರ್. ವೃತ್ತ, ಕೆ.ಆರ್. ಆಸ್ಪತ್ರೆ ಸೇರಿದಂತೆ ಪ್ರಮುಖ ಪಾರಂಪರಿಕ ಕಟ್ಟಡಗಳ ಮಾರ್ಗದಿಂದ ಪ್ರವಾಸಿಗರಿಗೆ ಮೈಸೂರಿನ ಪರಂಪರೆಯ ಬಗ್ಗೆ ಮಾಹಿತಿ ನೀಡಲಾಯಿತು.

Leave a Comment