ದಸರಾಕ್ಕೆ ನಲ್ಲಿಯಲ್ಲಿ ಹೇಮೆ: ನೀರು ಸರಬರಾಜಿಗೆ ಚಾಲನೆ

ಸಿರಾ, ಅ. ೧೨- ನಗರದ ಕುಡಿಯುವ ನೀರು ಸರಬರಾಜು ಮಾಡುವ ದೊಡ್ಡ ಕೆರೆಗೆ ಹೇಮಾವತಿ ಬಂದು ತಲುಪಿದ್ದು, ದಸರಾ ಹಬ್ಬಕ್ಕೆ ಮನೆ ಮನೆಗೆ ಬರಲಿದ್ದಾಳೆ.

ಆಗಸ್ಟ್ ಒಂದರಿಂದ ಸಿರಾದೆಡೆಗೆ ನೀರು ಹರಿಸಲಾಗಿದ್ದರೂ, ಇಲ್ಲಿನ ದೊಡ್ಡ ಕೆರೆಗೆ ಬಂದು ತಲುಪುವುದಕ್ಕೆ ತಿಂಗಳಿಗೂ ಹೆಚ್ಚಿನ ಸಮಯ ಬೇಕಾಯಿತು. ಗೌರಿ ಗಣೇಶ ಹಬ್ಬದಲ್ಲಿ ನೀರಿಗೆ ಪರದಾಡಿದ್ದ ಜನರು, ಕನಿಷ್ಟ ದಸರಕ್ಕಾದರೂ ನೀರು ಸಿಗುವುದೇ ಎನ್ನುವ ನಿರೀಕ್ಷೆಯಲ್ಲಿದ್ದರು. ಅದಕ್ಕೆ ತಕ್ಕಂತೆ ದಸರ ಹಬ್ಬ ಆರಂಭಗೊಳ್ಳುವ ಸಮಯದಲ್ಲಿ ಕೆರೆಯಿಂದ ನೀರೆತ್ತಿ, ಊರಿಗೆ ಹರಿಸುವ ಕೆಲಸಕ್ಕೆ ಶಾಸಕ ಬಿ.ಸತ್ಯನಾರಾಯಣ ಚಾಲನೆ ನೀಡಿದ್ದಾರೆ.

ಇದಕ್ಕೂ ಮುನ್ನ ಇಲ್ಲಿನ ನಗರಾಡಳಿತ ಸಂಸ್ಥೆ ಅಧಿಕಾರಿಗಳು ಮತ್ತು ನೌಕರ ವರ್ಗ, ನೀರು ಶುದ್ಧೀಕರಣ ಘಟಕವನ್ನು ಸ್ವಚ್ಚಗೊಳಿಸಿ, ಯಂತ್ರೋಪಕರಣಗಳ ಪರಿಶೀಲನೆ ನಡೆಸಿ, ಸರ್ವ ಸನ್ನದ್ಧರಾಗಿದ್ದರು.

ಈ ಸಂದರ್ಭದಲ್ಲಿ ನಗರಸಭಾಧ್ಯಕ್ಷ ಅಮಾನುಲ್ಲಾಖಾನ್, ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಜೆ. ರಾಜಣ್ಣ, ಸದಸ್ಯ ಆರ್.ಉಗ್ರೇಶ್, ಶೇಕ್ ಅಹಮದ್, ಅಂಜಿನಪ್ಪ, ಡಿ.ಮಂಜುನಾಥ್, ಶ್ರೀನಿವಾಸ ಗುಪ್ತ, ಇಸ್ಮಾಯಿಲ್ ಬೇಗ್, ಜೆಡಿಎಸ್ ಮುಖಂಡ ಆರ್.ರಾಮು, ಆರ್. ರಾಘವೇಂದ್ರ, ನಟರಾಜು, ಶ್ರೀರಂಗ ಯಾದವ್, ವಕೀಲ ವಾಜಿದ್ ಅಹಮದ್ ಮತ್ತಿತರರು ಉಪಸ್ಥಿತರಿದ್ದರು.

Leave a Comment