ದಶಮಂಟಪಗಳ ಶೋಭಾಯಾತ್ರೆಯ ಸಂಭ್ರಮದಲ್ಲಿ ಮಿಂದೆದ್ದ ಮಡಿಕೇರಿ

ಮಡಿಕೇರಿ. ಅ.9 ; ಒಂದೆಡೆ ಝಗಮಗಿಸುವ ನಗರ…ಮತ್ತೊಂದೆಡೆ ವೇದಿಕೆ ಮೇಲೆ ಸಂಗೀತ ಸುಧೆ.. ಇನ್ನೊಂದೆಡೆ ತಮ್ಮ ಕಥಾಹಂದರವನ್ನು ಪ್ರಸ್ತುತಪಡಿಸಲು ವಿದ್ಯುದೀಪಾಲಂಕಾರಗೊಂಡ ದಶಮಂಟಪಗಳು…ಮಡಿಕೇರಿ ಐತಿಹಾಸಿಕ ದಸರಾ ಜನೋತ್ಸವದಲ್ಲಿ ಝಗಮಗಿಸಿದ ದಶಮಂಟಪಗಳನ್ನು ಕಣ್ತುಂಬಿಕೊಳ್ಳಲು ಜನಸಾಗರವೇ ನೆರೆದಿತ್ತು.
ಸ್ಪರ್ಧೆಗಿಳಿದಿದ್ದ ದಶಮಂಟಪಗಳಲ್ಲಿ  ‘ನರಸಿಂಹನಿಂದ ಹಿರಣ್ಯ ಕಶಿಪು ವಧೆ’ ಕಥಾ ಹಂದರವನ್ನು ಹೊಂದಿದ್ದ  ಶ್ರೀ ದಂಡಿನ ಮಾರಿಯಮ್ಮ ದೇವಾಲಯದ ಮಂಟಪವು ಪ್ರಥಮ ಬಹುಮಾನವನ್ನು ತನ್ನದಾಗಿಸಿಕೊಂಡಿತ್ತು.
ಮಳೆ ಬರಬಹುದೆಂಬ ಆತಂಕಕ್ಕೀಡಾದರೂ ಅದೃಷ್ಟವಶಾತ್ ಮಂಗಳವಾರ ಹಗಲು ಮತ್ತು ರಾತ್ರಿ ವರುಣನ ಕೃಪೆ ಇಲ್ಲದಿರುವದು ದಶ ಮಂಟಪಗಳವರಿಗೆ ನೆಮ್ಮದಿಯ ಉಸಿರು ಬಿಡುವಂತಾಯಿತು. ಹತ್ತು ಮಂಟಪಗಳು  ಒಂದಕ್ಕೊಂದು ಮೀರಿಸುವಂತೆ ಪೈಪೋಟಿ ನೀಡಿದ್ದವು. ಬುಧವಾರ ಮುಂಜಾನೆ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ವಿಜೇತ ಮಂಟಪಗಳಿಗೆ ಚಿನ್ನದ ನಾಣ್ಯಗಳನ್ನು ಬಹುಮಾನವಾಗಿ ವಿತರಣೆ ಮಾಡಲಾಯಿತು.
ನಗರದ ರಾಜಾಸೀಟ್ ಬಳಿಯ ಚೌಟಿ ಶ್ರೀ ಕುಂದೂರು ಮೊಟ್ಟೆ ಮಾರಿಯಮ್ಮ
ದೇವಾಲಯದ ‘ತಾರಕಾಸುರನ ವಧೆ’ ಎಂಬ ಕತೆಯುಳ್ಳ ಕಲಾಕೃತಿಯನ್ನು ಹೊಂದಿದ ಮಂಟಪವು ದ್ವಿತೀಯ ಬಹುಮಾನವನ್ನು ಮತ್ತು ಶೀ ಮಯೂರೇಶ್ವರನಿಂದ ಶಿಖಂಡಿ ಪಕ್ಷಿ ಮಯೂರನಾದ ಕಥೆಯನ್ನು ಹೊಂದಿದ ಕೋಟೆಯೊಳಗಿನ ಶ್ರೀ ಕೋಟೆ ಮಹಾ ಗಣಪತಿ ದೇವಾಲಯದ ಮೂರವೇ ಬಹು ಮಂಟಪ ದ್ವಿತೀಯ ಬಹುಮಾನವನ್ನು ಹೊಂದಿಕೊಂಡವು.
ಸಮಾಧಾನಕರ ಬಹುಮಾನ
‘ಉಗ್ರ ನರಸಿಂಹನಿಂದ ಹಿರಣ್ಯ ಕಶಿಪು ಸಂಹಾರ’ ಎಂಬ ಕಥಾ ಹಂದರವನ್ನು ಹೊಂದಿದ ಗೌಳಿಬೀದಿಯ ಶ್ರೀ ಕಂಚಿಕಾಮಾಕ್ಷಿ ದೇವಾಲಯ
ಕಲಾಕೃತಿ, ಕಾಲೇಜು ರಸ್ತೆಯ ಪೇಟೆ ಶ್ರೀ ರಾಮ ಮಂದಿರ ದೇವಾಲಯದ ‘ಅರ್ಧನಾರೀಶ್ವರ ದರ್ಶನ’, ಕರವಲೆ ಬಾಡಗದ ಶ್ರೀ ಕರವಲೆ ಭಗವತಿ ಮಹಿಷ ಮರ್ದಿನಿ ದೇವಾಲಯದ ‘ಭ್ರಮರಾಂಬಿಕೆಯಿಂದ ಅರುಣಾಸುರ ವಧೆ’, ಮಹದೇವಪೇಟೆಯ ಶ್ರೀ ಚೌಡೇಶ್ವರಿ ದೇವಾಲಯದ ‘ಮಹಿಷಾಸುರ ಮರ್ದಿನಿ’, ಪೆನ್ಷನ್ ಲೇನ್‍ನ ಶ್ರೀ ಕೋಟೆ ಮಾರಿಯಮ್ಮ ದೇವಾಲಯದ ‘ಹಯಗೀವನಿಂದ ಹಯಗ್ರೀವ ದಾನವನ ಸಂಹಾರ’, ರಾಣಿಪೇಟೆಯ ಶ್ರೀ ಕೋದಂಡರಾಮ ದೇವಾಲಯದ ‘ಶಿವನಿಂದ ತ್ರಿಪುರಾಸುರರ ಸಂಹಾರ’, ದೇಚೂರು ಶ್ರೀ ರಾಮ ಮಂದಿರ ದೇವಾಲಯದ ‘ಪಂಚಮುಖಿ ಆಂಜನೇಯನ ಮಹಿಮೆ’ ಕಲಾಕೃತಿಗಳು ಸಮಾಧಾನಕರ ಬಹುಮಾನಗಳನ್ನು ಪಡೆದುಕೊಂಡವು.

Leave a Comment