ದಲಿತ ವಿದ್ಯಾರ್ಥಿ ಮೇಲೆ ಹಲ್ಲೆ; ಡಿಎಸ್ ಎಸ್ ಪ್ರತಿಭಟನೆ

ದಾವಣಗೆರೆ.ಜೂ.12; ಗುಂಡ್ಲುಪೇಟೆಯಲ್ಲಿ ದಲಿತ ವಿದ್ಯಾರ್ಥಿ ಮೇಲೆ ನಡೆದಿರುವ ಹಲ್ಲೆ ಮತ್ತು ಬೆತ್ತಲೆ ಮೆರವಣಿಗೆ ಖಂಡಿಸಿ ಕರ್ನಾಟಕ ದಲಿತ ಸಂಘಟನೆಯ ಪದಾಧಿಕಾರಿಗಳು ನಗರದ ಅಂಬೇಡ್ಕರ್ ವೃತ್ತದಲ್ಲಿ ಇಂದು ಪ್ರತಿಭಟನೆ ನಡೆಸಿದರು. ನಂತರ ಉಪ ವಿಭಾಗಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಕಳೆದ ಜೂನ್ 3 ರಂದು ಗುಂಡ್ಲುಪೇಟೆಯ ದಲಿತ ವಿದ್ಯಾರ್ಥಿ ಪ್ರತಾಪ್ ಮೇಲೆ ಹಲ್ಲೆ ನಡೆಸಿ ಬೆತ್ತಲೆ ಮೆರವಣಿಗೆ ಮಾಡಿದ್ದಾರೆ. ಈ ಸಂಬಂಧದ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಸಂಬಂಧ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ ಕೇವಲ ಎರಡು ಜನ ಬಂಧಿಸಲಾಗಿದೆ. ಮೇಲ್ನೋಟಕ್ಕೆ ಆರೋಪಿಗಳನ್ನು ರಕ್ಷಿಸುವ ಹುನ್ನಾರ ಎದ್ದು ಕಾಣುತ್ತಿದೆ ಹಾಗೂ ಪ್ರತಾಪ್ ಎಂಬ ವಿದ್ಯಾರ್ಥಿ ಅವರ ತಂದೆಗೆ ಹೆದರಿಸಿ ಜೀವ ಬೆದರಿಕೆ ಹಾಕಿ ಬಲವಂತವಾಗಿ ಪ್ರತಾಪ್ ಮಾನಸಿಕ ಅಸ್ವಸ್ಥ ಎಂದು ವೈದ್ಯಕೀಯ ಪ್ರಮಾಣ ಪತ್ರವನ್ನು ಮಾಡಿಸಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗೆ ಸಲ್ಲಿಸಿರುವುದು ಅನುಮಾನಕ್ಕೆ ಆಸ್ಪದ ನೀಡುತ್ತದೆ. ಮತ್ತು ಕಬ್ಬೆಕಟ್ಟೆ ಶನೇಶ್ಚರ ದೇವಸ್ಥಾನ ಮಂಡಳಿಯವರು ಪ್ರತಾಪ ಎಂಬ ವಿದ್ಯಾರ್ಥಿ ದೇವಸ್ಥಾನಕ್ಕೆ ಬಂದಾಗಲೇ ಇವನ ಮೇಲೆ ಬಟ್ಟೆ ಇರಲಿಲ್ಲ ಎಂದು ಪ್ರಕರಣವನ್ನು ತಿರುಚುವ ಪ್ರಯತ್ನ ಮಾಡುತ್ತಿದ್ದಾರೆ. ಈ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಕುಂದುವಾಡ ಮಂಜುನಾಥ್, ಶ್ರೀಮತಿ ವಿಜಯಮ್ಮ, ಕೊಗಲೂರು ಕುಮಾರ್, ಜಿಗಳ ಹಾಲೇಶ್, ನಾಗರಾಜ್ ನಿಟುವಳ್ಳಿ, ಪರಮೇಶ್ ಪುರದಾಳ್ ಮತ್ತಿತರರಿದ್ದರು.

Leave a Comment