ದಲಿತ ಯುವಕನ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ

ಮೈಸೂರು. ಜೂ.12- ಗುಂಡ್ಲುಪೇಟೆ ತಾಲೂಕಿನ ವೀರನಪುರ ಗ್ರಾಮದ ವ್ಯಾಪ್ತಿಯಲ್ಲಿ ದಲಿತ ಯುವಕನ ಮೇಲೆ ರಕ್ತ ಬರುವಂತೆ ಹಲ್ಲೆ ನಡೆಸಿ ಬೆತ್ತಲೆ ಮೆರವಣಿಗೆ ಮಾಡಿದ ಘಟನೆ ಖಂಡಿಸಿ ದಲಿತ ಸಂಘರ್ಷ ಸಮಿತಿಯ (ಮೈಸೂರು ಶಾಖೆ) ವತಿಯಿಂದ ಪ್ರತಿಭಟನೆ ನಡೆಯಿತು.
ಜಿಲ್ಲಾಧಿಕಾರಿಗಳ ಕಛೇರಿಯ ಎದುರು ಇಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭನಾಕಾರರು ಮಾತನಾಡಿ ರಾಜ್ಯಾದ್ಯಂತ ದಲಿತರ ಮೇಲೆ ಪ್ರತಿನಿತ್ಯ ನಾನಾ ತರಹದ ದೌರ್ಜನ್ಯ ಪ್ರಕರಣಗಳು ನಡೆಯುತ್ತಲೇ ಇವೆ. ಎಷ್ಟೋ ಘಟನೆಗಳು ಹೊರಪ್ರಪಂಚದ ಅರಿವಿಗೆ ಬಾರದೇಮುಚ್ಚಿ ಹೋಗುತ್ತಿವೆ. ಅಂತಹ ಒಂದು ಘಟನೆ ಚಾಮರಾಜನಗರ ಗುಂಡ್ಲುಪೇಟೆ ತಾಲೂಕಿನ ವೀರನಕಟ್ಟೆ ಗೇಟ್ ಬಳಿ ನಡೆದಿದ್ದು, ದಲಿತ ಯುವಕನ ಮೇಲೆ ಹಲ್ಲೆ ಹಾಗೂ ಬೆತ್ತಲೆ ಮೆರವಣಿಗೆಯಂತಹ ಅಮಾನವೀಯ ಘಟನೆ ಇದನ್ನು ಖಂಡಿಸುತ್ತೇವೆ ಎಂದರು. ಈ ಪ್ರಕರಣ ನಡೆದು ವಾರ ಕಳೆದರೂ ಪೊಲೀಸರಾಗಲಿ, ಜಿಲ್ಲಾಡಳಿತವಾಗಲಿ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ನಾಗರಿಕ ಸಮಾಜ ನಾಚುವಂತಾಗಿದೆ. ಇಂತಹ ಘಟನೆಗಳು ನಡೆದಾಗ ಆರೋಪಿಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದೇ ಆಡಳಿತ ವ್ಯವಸ್ಥೆಯ ಮಾನವ ವಿರೋಧಿ, ದಲಿತ ವಿರೋಧಿ ಧೋರಣೆಯಿಂದಾಗಿ ಇಂತಹ ಹೇಯ ಘಟನೆಗಳು ಮರುಕಳಿಸುತ್ತಿವೆ. ಕಾನೂನು ಸುವ್ಯವಸ್ಥೆ ಬಗ್ಗೆ ಯಾವ ಗೌರವ, ಕಾಳಜಿ ಇಲ್ಲದ ದೌರ್ಜನ್ಯ ಕೋರರ ಅಟ್ಟಹಾಸಗಳು ಮರುಕಳಿಸುತ್ತಲೇ ಇವೆ. ಇದಕ್ಕೆ ಜ್ವಲಂತ ಸಾಕ್ಷಿಯಾಗಿ ಗುಂಡ್ಲುಪೇಟೆ ತಾಲೂಕು ಎಸ್.ಪ್ರತಾಪ್ ಎಂಬ ಯುವಕನನ್ನು ರಸ್ತೆಯಲ್ಲಿ ಕೈಗೆ ಹಗ್ಗಕಟ್ಟಿ ಬೆತ್ತಲೆ ಮೆರವಣಿಗೆ ಮಾಡಿ ಹಿಂಸಿಸಿರುತ್ತಾರೆ. ಈ ಎಲ್ಲಾ ಘಟನೆಗೆ ಹಿನ್ನೆಲೆ ಆತ ದಲಿತನಾಗಿರುವುದು. ಇಂತಹ ಹೇಯ ಕೃತ್ಯಗಳು ಯಾರ ಮೇಲೆ ನಡೆದರೂ ದ.ಸಂ.ಸ ಅದನ್ನು ಉಗ್ರವಾಗಿ ಪ್ರತಿಭಟಿಸುತ್ತಲೇ ಬಂದಿದೆ. ಹಾಗೆಯೇ ಎಸ್.ಪ್ರತಾಪ್ ನ ಪ್ರಕರಣವನ್ನು ದ.ಸಂ.ಸ ಖಂಡಿಸುತ್ತದೆ ಎಂದರು.
ಈ ಘಟನೆಯಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಭಾಗಿಯಾದ ಎಲ್ಲರನ್ನೂ ಬಂಧಿಸಬೇಕು. ಕಟ್ಟುನಿಟ್ಟಿನ ಕಾನೂನು ಕ್ರಮಕ್ಕೆ ಒತ್ತಾಯಿಸಿದರು. ಸಮಾಜದಲ್ಲಿ ಜಾತಿ, ಧರ್ಮ, ಲಿಂಗ ತಾರತಮ್ಯಗಳಿಂದ ನಡೆಯುವ ಇಂತಹ ಅಮಾನುಷ ಕೃತ್ಯಗಳಿಗೆ ತಡೆ ಒಡ್ಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ, ಶಂಭುಲಿಂಗಸ್ವಾಮಿ, ರತ್ನಪುರಿ ಪುಟ್ಟಸ್ವಾಮಿ, ಹೆಗ್ಗನೂರು ನಿಂಗರಾಜು, ಜಗದೀಶ್ ಕೆ.ಕೆ, ಬಿ.ಡಿ.ಶಿವಬುದ್ಧಿ, ಯಡಕೊಳ ಮಹದೇವಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು

Leave a Comment