ದಲಿತ ಯುವಕನ ಕೊಲೆ : ಆರೋಪಿಗಳ ಬಂಧನಕ್ಕೆ ಆಗ್ರಹ

ಕಲಬುರಗಿ,ಸೆ.4-ಜಿಲ್ಲೆಯ ಆಳಂದ ತಾಲ್ಲೂಕಿನ ಭೂಸನೂರ ಗ್ರಾಮದ ರಾಹುಲ್ ಲಕ್ಷ್ಮಣ ಬೀಳಗಿ ಎಂಬ ದಲಿತ ಯುವಕನ ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಕೊಲೆಯಾದ ಯುವಕನ ಕುಟುಂಬವರ್ಗದವರು ಮತ್ತು ವಿವಿಧ ದಲಿತಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಶವವಿಟ್ಟು ಪ್ರತಿಭಟನೆ ನಡೆಸಿದರು.

ಕೊಲೆ ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕು, ಯುವಕನ ಕುಟುಂಬದವರಿಗೆ ಸರ್ಕಾರಿ ನೌಕರಿ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ನ್ಯಾಯವಾದಿ ಹಣಮಂತ ಯಳಸಂಗಿ ಸೇರಿದಂತೆ ವಿವಿಧ ದಲಿತಪರ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಸ್ಥಳಕ್ಕೆ ಆಗಮಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ ಅವರು ಪರಿಶಿಷ್ಟಜಾತಿ ದೌರ್ಜನ್ಯ ಕಾಯ್ದೆಯಡಿ ಯುವಕನ ಕುಟುಂಬಕ್ಕೆ 4.25 ಲಕ್ಷ ರೂಪಾಯಿಯ ಪರಿಹಾರಧನದ ಚೆಕ್ ವಿತರಿಸಿ ಕೊಲೆ ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳವುದಾಗಿ ಎಂದು ಭರವಸೆ ನೀಡಿದರು.

@12bc = ಹಿನ್ನೆಲೆ

ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ತಾ.ಪಂ.ಮಾಜಿ ಉಪಾಧ್ಯಕ್ಷ ಆಳಂದ ತಾಲ್ಲೂಕಿನ ಭೂಸನೂರ ಗ್ರಾಮದ ಲಕ್ಷ್ಮಣ ಅವರ ಪುತ್ರ, ಬಿಜೆಪಿ ಯುವ ಮುಖಂಡ ರಾಹುಲ್  ಬೀಳಗಿಯನ್ನು ದುಷ್ಕರ್ಮಿಗಳು ಮಾರಕಾಸ್ತ್ರದಿಂದ ಹೊಡೆದು ಕೊಲೆ ಮಾಡಿದ್ದರು.

ರಾಹುಲ್ ಬೈಕ್ ಮೇಲೆ ಹೋಗುತ್ತಿದ್ದಾಗ ಬುಲೆರೋ ವಾಹನದಲ್ಲಿ ಬಂದ ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದರು. ಯುವಕನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಲಬುರಗಿಯ ಸರ್ಕಾರಿ ಆಸ್ಪತ್ರೆಗೆ ತರಲಾಗಿತ್ತು. ಮರಣೋತ್ತರ ಪರೀಕ್ಷೆ ನಂತರ ಯುವಕನ ಕುಟುಂಬವರ್ಗದವರು ಮತ್ತು ದಲಿತರಪರ ಸಂಘಟನೆಗಳ ಮುಖಂಡರು ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಶವವಿಟ್ಟು ಪ್ರತಿಭಟನೆ ನಡೆಸಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಸನೂರ ಗ್ರಾಮದ ಬಾಬುಗೌಡ ಪಾಟೀಲ ಸೇರಿದಂತೆ 6 ಜನರ ವಿರುದ್ಧ  ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಜಾಲ ಬೀಸಿದ್ದಾರೆ.

Leave a Comment