‘ದಲಿತ’ ಪದ ಬಳಕೆ ನಿಷೇಧ ವಿರುದ್ಧ ಸುಪ್ರೀಂಗೆ ಮೊರೆ

ಬೆಂಗಳೂರು, ಸೆ.೧೨- ಮಧ್ಯಪ್ರದೇಶ ಮತ್ತು ಬಾಂಬೆ ಹೈಕೋರ್ಟ್ ‘ದಲಿತ’ ಪದ ತೆಗೆದು ಹಾಕುವಂತೆ ಸೂಚಿಸಿದ್ದು, ಈ ಸಂಬಂಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಲಾಗುವುದು ಎಂದು ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ಇಂದಿಲ್ಲಿ ಹೇಳಿದ್ದಾರೆ.

ನಗರದಲ್ಲಿಂದು ಸಮತಾ ಸೈನಿಕ ದಳ ಆಯೋಜಿಸಿದ್ದ, ದಲಿತ ಪದ ಬಳಕೆ ವಿವಾದ- ಕುರಿತ ವಿಚಾರ ಸಂಕಿರಣ ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ದಲಿತ ಪದ ಬಳಕೆ ತಪ್ಪು ಎನ್ನುವ ನ್ಯಾಯಾಲಯದ ಅಭಿಪ್ರಾಯವನ್ನು ವಿರೋಧಿಸುತ್ತೇವೆ. ಈ ಪದ ಬಳಕೆ ಅವಮಾನವಲ್ಲ, ಅದು ಹೆಮ್ಮೆ.ಅಲ್ಲದೆ, ದಲಿತ ಪದ ಇಲ್ಲದೆ, ಯಾವುದೇ ಹೋರಾಟ ಇಲ್ಲ.ಈ ಹಿಂದೆಯೂ, ಹರಿಜನ ಪದದ ವಿರುದ್ಧ ಬಹುದೊಡ್ಡ ಹೋರಾಟ ನಡೆಸಲಾಗಿತ್ತು
ಎಂದರು.

ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಟ ಪಂಗಡ ಪದಗಳನ್ನು ಸರ್ಕಾರದ ದಾಖಲಾತಿಗಳನ್ನು ಬಳಕೆ ಮಾಡಲಾಗುತ್ತಿದೆ. ದಲಿತ ಪದ ಬಳಕೆ ಮಾಡಬೇಕೆಂಬುದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಸುಪ್ರೀಂಕೋರ್ಟ್ ಮೆಟ್ಟಿಲೇರಲಿದೆ ಎಂದು ಕೇಂದ್ರ ಸಚಿವ ರಾಮದಾಸ್ ಅಥವಾಲೆ ಈಗಾಗಲೇ ತಿಳಿಸಿದ್ದಾರೆ ಎಂದರು.

ಪಶುವೈದ್ಯ ವಿವಿಯ ಪ್ರಾಧ್ಯಾಪಕ ಡಾ.ಎಂ.ನಾರಾಯಣ ಸ್ವಾಮಿ ಮಾತನಾಡಿ, ದೇಶದ ಸಂವಿಧಾನದಲ್ಲಿ ಎಲ್ಲಿಯೂ ದಲಿತ ಎಂಬ ಪದ ಬಳಕೆಯಾಗಿಲ್ಲ. ಆದ ಕಾರಣ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಪದವನ್ನು ತಮ್ಮ ಪತ್ರ ವ್ಯವಹಾರಗಳಲ್ಲಿ ಬಳಸಕೂಡದು ಎಂದು ಮಧ್ಯ ಪ್ರದೇಶ ಹೈಕೋರ್ಟ್ ಹೇಳಿದೆ. ಅದೇ ರೀತಿ, ಮುಂಬೈ ಕೋರ್ಟ್, ಮಾಧ್ಯಮಗಳಲ್ಲಿ ದಲಿತ ಪದ ಬಳಕೆ ಮಾಡಬಾರದು ಎಂದಿದೆ.ಆದರೆ, ಈ ಪದ ಸಮಾಜದಲ್ಲಿ ದಟ್ಟವಾಗಿ ಬೆಳೆದಿದ್ದು, ಇದು ಜಾತಿ ಪದವಲ್ಲ, ಹೋರಾಟದ ಪ್ರತಿರೂಪವಾಗಿದೆ. ಅಷ್ಟೇ ಅಲ್ಲದೆ,ಜಾತಿ ನಿಂದನೆ ಬದಲಾಗಿ, ದಲಿತ ಪದ ಬಳಕೆ ಮಾಡಲಾಗುತ್ತಿದೆ. ಹೀಗಾಗಿ, ಇದನ್ನು ಕೈಬಿಡಲು ಸಾಧ್ಯವೇ ಇಲ್ಲ ಎಂದು ತಿಳಿಸಿದರು.

ಸಂವಾದದಲ್ಲಿ ಸಾಮಾಜಿಕ ನ್ಯಾಯ ವೇದಿಕೆ ಅಧ್ಯಕ್ಷ ಅನಂತರಾಯಪ್ಪ, ಬೆಂಗಳೂರು ವಿವಿಯ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕಿ ಡಾ.ಎಂ.ಸುಮಿತ್ರಾ, ದಲಿತ ಸಂಘರ್ಷ ಸಮಿತಿ ಮುಖಂಡ ತಿಮ್ಮಯ್ಯ, ಡಾ.ಎಚ್.ಆರ್.ಸುರೇಂದ್ರ, ಎಂ.ಶ್ರೀನಿವಾಸ್ ಸೇರಿದಂತೆ ಪ್ರಮುಖರಿದ್ದರು.

Leave a Comment