ದಲಿತರ ಹತ್ಯೆಯ ಬಗ್ಗೆ  ದನಿಯೆತ್ತಲು  ಬಿಡುತ್ತಿಲ್ಲ: ಜಿಗ್ನೇಶ್ ಮೇವಾನಿ ಆರೋಪ

ಗಾಂಧಿನಗರ್, ಜು.12: ಗುಜರಾತ್ ವಿಧಾನಸಭೆಯಲ್ಲಿ ತಮ್ಮ ದನಿ ಕೇಳಿಸಲು ಇನ್ನಿಲ್ಲದ ಪ್ರಯತ್ನ ಪಡುತ್ತಿರುವ ದಲಿತ ನಾಯಕ ಹಾಗೂ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಜಿಗ್ನೇಶ್ ಮೇವಾನಿ, ಆಡಳಿತ ಬಿಜೆಪಿ ತನ್ನ ಬಲ ಪ್ರಯೋಗಿಸಿ ವಿಧಾನಸಭೆಯಲ್ಲಿ ಮಾತನಾಡುವ ತನ್ನ ಯತ್ನವನ್ನು ವಿಫಲಗೊಳಿಸುತ್ತಿದೆ ಎಂದಿದ್ದಾರೆ.

ಗುಜರಾತ್ ನಲ್ಲಿ ಇತ್ತೀಚೆಗೆ ನಡೆದ ದಲಿತರ ಹತ್ಯೆ ಪ್ರಕರಣಗಳ ವಿಚಾರವನ್ನು ಸದನದಲ್ಲಿ ಎತ್ತಲು ವಿಫಲರಾಗಿ ಅಸಮಾಧಾನ ಹೊಂದಿರುವ ಮೇವಾನಿ ‘ಆಡಳಿತ ಬಿಜೆಪಿ ಹಾಗೂ ಆ ಪಕ್ಷ ನೇಮಿಸಿದ ಸ್ಪೀಕರ್ ನನ್ನನ್ನು ಮಾತನಾಡಲು ಬಿಡುತ್ತಿಲ್ಲ” ಎಂದು ದೂರಿದ್ದಾರೆ.

‘ಒಬ್ಬ ಶಾಸಕನಾಗಿ ಹಾಗೂ ನನ್ನ ಕ್ಷೇತ್ರದ ಜನ ಪ್ರತಿನಿಧಿಯಾಗಿ ಅವರ ಸಮಸ್ಯೆಗಳ ಬಗ್ಗೆ ದನಿಯೆತ್ತುವುದು ನನ್ನ ಹಕ್ಕು ಹಾಗೂ ಕರ್ತವ್ಯವಾಗಿದೆ, ಆದರೆ ಸ್ಪೀಕರ್ ನನಗೆ ಮಾತನಾಡಲು ಆಸ್ಪದ ನೀಡುತ್ತಿಲ್ಲ” ಎಂದು ಮೇವಾನಿ ದೂರಿದರು. ‘ಉನಾದಲ್ಲಿ ಗೋಹತ್ಯೆಯ ನೆಪದಲ್ಲಿ ದಲಿತ ಯುವಕರ ಮೇಲೆ ಅಮಾನುಷ ಹಲ್ಲೆ ನಡೆದು ಮೂರು ವರ್ಷಗಳಾಗಿವೆ. ಆ ಪ್ರಕರಣದ ಸ್ಥಿತಿಗತಿಯ ಬಗ್ಗೆ ಸದನಕ್ಕೆ ಹೇಳಬೇಕೆಂದಿದ್ದೆ. ಇತರ ಜಾತಿ ತಾರತಮ್ಯ ಪ್ರಕರಣಗಳ ಹಾಗೂ ರಾಜ್ಯದಲ್ಲಿ ನಡೆದ ದ್ವೇಷದ ಅಪರಾಧ ಪ್ರಕರಣಗಳ ಬಗ್ಗೆಯೂ ಮಾತನಾಡಬೇಕೆಂದಿದ್ದೆ’ ಎಂದಿರುವ ಮೇವಾನಿ, ಆಡಳಿತ ಬಿಜೆಪಿ ಉದ್ದೇಶಪೂರ್ವಕವಾಗಿ ನನ್ನನ್ನು ತಡೆಯುತ್ತಿದೆ ಎಂದರು.

‘ವಿಪಕ್ಷ ನಾಯಕ ಪರೇಶ್ ಧನಾನಿ ಕೂಡ ಕಾಂಗ್ರೆಸ್ ಪಕ್ಷಕ್ಕೆ ನೀಡಲಾದ ಅವಧಿ ವೇಳೆ ನನಗೆ ಮಾತನಾಡಲು ಅನುಮತಿಸುವಂತೆ ಸ್ಪೀಕರ್ ಅವರಲ್ಲಿ ಕೇಳಿಕೊಂಡರೂ ನಿರಾಕರಿಸಲಾಗಿದೆ” ಎಂದು ವಡ್ಗಮ್ ಕ್ಷೇತ್ರದ ಶಾಸಕರಾಗಿರುವ ಮೇವಾನಿ ಆರೋಪಿಸಿದ್ಧಾರೆ.

“ಸೋಮವಾರ ವರ್ಮೋರ್ ಗ್ರಾಮದಲ್ಲಿ ಮೇಲ್ಜಾತಿಯ ಯುವತಿಯನ್ನು ವಿವಾಹವಾಗಿದ್ದಾನೆಂಬ ಕಾರಣಕ್ಕೆ ದಲಿತ ಯುವಕನ ಹತ್ಯೆ ಪ್ರಕರಣದ ಕುರಿತಂತೆ ಮಾತನಾಡಲು ನಾನು ನಿಯಮ 116 ಅನ್ವಯ ನೀಡಿದ ನೋಟಿಸನ್ನೂ ತಿರಸ್ಕರಿಸಲಾಗಿದೆ” ಎಂದು ಮೇವಾನಿ ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ.

Leave a Comment