ದಲಿತರ ಸಮಸ್ಯೆಗಳಿಗೆ ಸಿಗದ ಸ್ಪಂದನೆ-ಆರೋಪ

ದಾವಣಗೆರೆ, ಸೆ. 13 – ಒಳಮೀಸಲಾತಿ ವರ್ಗೀಕರಣ ಜಾರಿಗೊಳಿಸುವಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಕಣ್ಣೊರೆಸುವ ಕೆಲಸ ಮಾಡುತ್ತಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಎಂ.ಸೋಮಶೇಖರ್ ಹೇಳಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಆಯೋಜಿಸಿದ್ದ ಒಳಮೀಸಲಾತಿ, ಬಡ್ತಿ ಮೀಸಲಾತಿ, ಬಾಧ್ಯತೆ ಮತ್ತು ಸಾಧ್ಯತೆಗಳು, ಪರಿಶಿಷ್ಟ ಜಾತಿ ಮತ್ತು ವರ್ಗ, ಸುಳ್ಳು ಜಾತಿ ಪ್ರಮಾಣ ಪತ್ರ, ಸಮಸ್ಯೆ ಮತ್ತು ಪರಿಹಾರ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ಪಕ್ಷಗಳು ಒಂದು ಜಾತಿಯ ಒಳಪಂಗಡಗಳ ಸಮಸ್ಯೆಗಳನ್ನು ಬಗೆಹರಿಸುವುದು ಸರ್ಕಾರಗಳ ಜವಾಬ್ದಾರಿಯಾಗಿದೆ. ಡಾ.ಅಂಬೇಡ್ಕರ್ ಅವರು, ಹಿಂದುಳಿದವರಿಗೆ ಸೌಲಭ್ಯಗಳನ್ನು ಪಡೆಯಬೇಕೆಂಬ ಉದ್ದೇಶದಿಂದ ಸಂವಿಧಾನವನ್ನು ನೀಡಿದ್ದಾರೆ. ಆದರೆ ಪಕ್ಷಗಳು ಓಟಿಗಾಗಿ ಚುನಾವಣೆ ನಡೆಸುತ್ತಿವೆ ಹೊರತು ದಲಿತರ ಸಮಸ್ಯೆಗಳ ಬಗ್ಗೆ ಸ್ಪಂದಿಸುತ್ತಿಲ್ಲ. ಆಂಧ್ರದಲ್ಲಿ ಒಳ ಮೀಸಲಾತಿ ವರ್ಗೀಕರಣ ವಿಚಾರವಾಗಿ ಕೊಲೆಗಳು ನಡೆಯುತ್ತಿವೆ. ಕರ್ನಾಟಕದಲ್ಲಿ ಇಂತಹ ಅಹಿಕರ ಘಟನೆಗಳನ್ನು ನಡೆಯದಂತೆ ಒಳಮೀಸಲಾತಿ ವರ್ಗೀಕರಣವನ್ನು ಜಾರಿಗೊಳಿಸಬೇಕು. ಪಕ್ಷಗಳು ಒಂದು ಜಾತಿಗಳನ್ನು ಗುಂಪುಗಳನ್ನಾಗಿ ಮಾಡಿ ದಲಿತ ಸಮುದಾಯವನ್ನು ರಾಜಕೀಯವಾಗಿ ಮುಂದೆ ಬರದಂತೆ ತಡೆಹಿಡಿಯುವ ಕೆಲಸ ಮಾಡುತ್ತಿದೆ. ಸುಪ್ರೀಂಕೋರ್ಟ್ ಹಿಂಬಡ್ತಿ ನೀಡಿದೆ. ಅದಕ್ಕೆ ರಾಜ್ಯ ಸರ್ಕಾರ ಸರಿಯಾದ ಮಾಹಿತಿ ನೀಡದೆ ಇರುವುದು ಕಾರಣ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡಲೇ ದಲಿತ ನೌಕರರಿಗೆ ಹಿಂಬಡ್ತಿಯಾಗದಂತೆ ನೋಡಿಕೊಳ್ಳಬೇಕು. ಇಲ್ಲವಾದರೆ ಮುಂದಿನ ಚುನಾವಣೆಯಲ್ಲಿ ಸೋಲಿಸುತ್ತೇವೆ ಎಂದು ಹೇಳಿದರು.
ಮೇಲ್ವರ್ಗದವರು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದುಕೊಂಡು ಉನ್ನತ ನೌಕರಿ ಪಡೆದುಕೊಂಡಿದ್ದಾರೆ. ಅಂತವರ ವಿರುದ್ದ ಕ್ರಮ ತೆಗೆದುಕೊಳ್ಳಬೇಕು. ಸುಳ್ಳು ಜಾತಿ ಪ್ರಮಾಣ ತೆಗೆದುಕೊಂಡವರ ಮೇಲೆ ಸುಪ್ರೀಂಕೋರ್ಟ್ ಏಕೆ ಕ್ರಮ ತೆಗೆದುಕೊಂಡಿಲ್ಲವೆಂದು ಪ್ರಶ್ನಿಸಿದರು. ಡಾ.ಅಂಬೇಡ್ಕರ್ ಅವರು ಕಂಡಂತ ಕನಸನ್ನು ಈಡೇರಿಸುವ ಕೆಲಸವಾಗಬೇಕಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ದಲಿತರನ್ನು ಕಣ್ಣೊರೆಸುವ ಕೆಲಸ ಮಾಡುತ್ತಿದೆ ವಿನಹ ಯಾವುದೇ ಜನಪರ ಕೆಲಸ ಮಾಡುತ್ತಿಲ್ಲ. ಕೇಂದ್ರ ಸರ್ಕಾರ ನೋಟು ರದ್ದತಿಯಿಂದ ಹಾಗೂ ಜಿಎಸ್ ಟಿಯಿಂದ ಜನರು ತತ್ತರಿಸಿದ್ದಾರೆ. ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರಿಗೆ ಅಮಾನುಷವಾಗಿ ಗುಂಡಿಟ್ಟು ಕೊಲೆ ಮಾಡಲಾಗಿದೆ. ಹೋರಾಟಗಾರನ್ನು ರಕ್ಷಣೆ ಮಾಡಲಾಗದಂತ ಕಾಂಗ್ರೆಸ್ ಸರ್ಕಾರ ಸಿದ್ದರಾಮಯ್ಯನವರು ಕೂಡಲೇ ರಾಜೀನಾಮೆ ನೀಡಬೇಕು ಎಂದರು.
ತಾಲ್ಲೂಕು ಪಂಚಾಯಿತಿ ಸದಸ್ಯ ಆಲೂರು ನಿಂಗರಾಜ್ ಮಾತನಾಡಿ, ಒಳಮೀಸಲಾತಿ ಹಿಂಬಡ್ತಿಗೆ ದಲಿತ ನೌಕರರ ಸಹಕಾರವೇ ಸಿಗುತ್ತಿಲ್ಲದಿರುವುದೇ ಕಾರಣವಾಗಿದೆ. ದಲಿತ ಮುಖಂಡರುಗಳು ಕೆಲ ಪಕ್ಷಗಳಿಗೆ ಗುಲಾಮರಾಗಿದ್ದಾರೆ. ದಲಿತ ಸಚಿವರ ಮುಂದಾಳತ್ವದಲ್ಲಿ ಚಳುವಳಿಗಳು ಹೊಡೆಯುವ ಹುನ್ನಾರ ನಡೆಸಲಾಗುತ್ತಿದೆ. ದಲಿತ ಸಚಿವರುಗಳೇ ಇದ್ದರು ಸಹ ಚಳುವಳಿಗಳು ಹಾಗೂ ಹಿಂಬಡ್ತಿ ಹಾಗೂ ದಲಿತರ ಸಮಸ್ಯೆಗಳ ಬಗ್ಗೆ ಏಕೆ ಚರ್ಚೆ ನಡೆಸುತ್ತಿಲ್ಲ. ಸಮಾಜ ಕಲ್ಯಾಣ ಸಚಿವರು 20 ಸಾವಿರ ಕೋಟಿ ಬಜೆಟ್ ನಲ್ಲಿ ಮಂಡಿಸಿದ್ದಾರೆ. ಯಾವ ಜಿಲ್ಲೆಗೆ ಎಷ್ಟು ಅನುದಾನ ಸಿಕ್ಕಿದೆ ಎಂಬುದರ ಬಗ್ಗೆ ಗಂಭೀರ ಚಿಂತನೆ ನಡೆಸಬೇಕು. ದಲಿತರಿಗೆ ನ್ಯಾಯ ಸಿಗುತ್ತಿದೆ ಎಂಬ ಉದ್ದೇಶದಿಂದ ಕಾಂಗ್ರೆಸ್ ಪಕ್ಷವನ್ನು ಆರಿಸಿ ಕಳುಹಿದ್ದೇವೆ. ಆದರೆ ದಲಿತರಿಗೆ ಇಂದು ಅನ್ಯಾಯವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಇಂದು ಚಳುವಳಿಗಳು ಅನೇಕ ಗುಂಪುಗಳಾಗಿವೆ. ಅವೆಲ್ಲವು ಒಂದು ಕಡೆಯಾಗಿ ಸೇರಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಬಹುಜನ ಸಮಾಜ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಎಂ.ಕೃಷ್ಣಮೂರ್ತಿ, ಡಾ.ಅಂಬೇಡ್ಕರ್ ವಿಚಾರವಾದಿ ಶ್ರೀಧರ್, ಕಲಿವೀರ್, ಸಿಂಡಿಕೇಟ್ ಸದಸ್ಯ ಡಾ.ಹೆಚ್.ವಿಶ್ವನಾಥ್, ದಲಿತ ನೌಕರರ ಒಕ್ಕೂಟದ ಜಿಲ್ಲಾ ಸಂಚಾಲಕ ಪಿ.ನಾಗರಾಜ್, ಜಿಲ್ಲಾ ಸಂಚಾಲಕ ಹೆಗ್ಗೆರೆ ರಂಗಪ್ಪ, ಕಬ್ಬಳ್ಳಿ ಮೈಲಪ್ಪ, ವೆಂಕಟಗಿರಿಯಯ್ಯ, ಎಂ.ದೇವದಾಸ್ ಭಾಗ್ಯಮ್ಮ ನಾರಾಯಣಸ್ವಾಮಿ, ಕವಾಲಿ ವೆಂಕಟರಮಣಪ್ಪ, ನಾಗಲಿಂಗಪ್ಪ ಸೇರಿದಂತೆ ಮತ್ತಿತರರಿದ್ದರು.

Leave a Comment