ದಲಿತರೊಬ್ಬರು ರಾಜ್ಯದ ಸಿಎಂ ಆಗಬೇಕು:ಜಿಗಜಿಣಗಿ

ವಿಜಯಪುರ, : ದಲಿತರೊಬ್ಬರು ಈ ರಾಜ್ಯದ ಮುಖ್ಯಮಂತ್ರಿಯಾಗಬೇಕು ಎಂದು ಕೇಂದ್ರ ಕುಡಿಯುವ ನೀರು ಹಾಗೂ ನೈರ್ಮಲ್ಯ ಖಾತೆ ರಾಜ್ಯ ಸಚಿವ ರಮೇಶ ಜಿಗಜಿಣಗಿ ಗುರುವಾರ ಇಲ್ಲಿ ಪ್ರತಿಪಾದಿಸಿದರು.
ನಗರದ ಹೊಸ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಸಮಾನತೆಗಾಗಿ ಹೋರಾಡಿದ ಅಣ್ಣ ಬಸವಣ್ಣನ ಈ ನಾಡಿನಲ್ಲಿ ದಲಿತರಿಗೂ ಮುಖ್ಯಮಂತ್ರಿಯಾಗುವ ಅವಕಾಶ ದೊರೆಯಬೇಕು ಎಂದರು.
ರಾಜ್ಯದಲ್ಲಿ ಎಲ್ಲ ಜಾತಿಯವರು ಮುಖ್ಯಮಂತ್ರಿಯಾಗಿ ಹೋಗಿದ್ದಾರೆ. ದಲಿತ ವ್ಯಕ್ತಿಯೂ ಮುಖ್ಯಮಂತ್ರಿಯಾಗಬೇಕೆಂದು ಹೇಳಿದರೆ ತಪ್ಪೇನಿದೆ ಎಂದು ಅವರು ಪ್ರಶ್ನಿಸಿದರು.
ದಲಿತರು ಮುಖ್ಯಮಂತ್ರಿಯಾಗಬೇಕೆಂಬುದು ತಮ್ಮ ಅಬಿಪ್ರಾಯವಾಗಿದೆ. ದಲಿತ ಮುಖ್ಯಮಂತ್ರಿ ಯಾರಾಗÀಬೇಕೆಂಬುದನ್ನು ಹೇಳುವುದು ಈಗ ಸರಿ ಎನಿಸುವುದಿಲ್ಲ. ಸಂದರ್ಭ ಬಂದಾಗ ಅದನ್ನೂ ಹೇಳುತ್ತೇನೆ ಎಂದರು.
ನಾನು ಮುಖ್ಯಮಂತ್ರಿಯಾಗಬೇಕೆಂದು ಬಯಸಿದವನಲ್ಲ. ನಾನು ಯಾವತ್ತೂ ಅಧಿಕಾರದ ಬೆನ್ನು ಹತ್ತಿಲ್ಲ. ಅಧಿಕಾರ ಲಾಲಸೆಯೂ ನನಗಿಲ್ಲ ಎಂದು ಅವರು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮುಂಬರುವ 2018 ರ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಸರಕಾರವೇ ಅಧಿಕಾರಕ್ಕೆ ಬಂದರೆ ಆಗಲೂ ಸಹ ನಾನು ದಲಿತರೊಬ್ಬರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ಪ್ರತಿಪಾದಿಸುತ್ತೇನೆ. ದಲಿತರೊಬ್ಬರು ಈ ರಾಜ್ಯದ ಮುಖ್ಯಮಂತ್ರಿಯಾದರೆ ತಪ್ಪೇನಿಲ್ಲ ಎಂದರು.
ಕೇಂದ್ರದ ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಬಸನಗೌಡ ಪಾಟೀಲ (ಯತ್ನಾಳ) ಅವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಲು ನೀವೇ ಅಡ್ಡಗಾಲು ಹಾಕಿದ್ದೀರಿ ಎಂದು ಹೇಳಲಾಗುತ್ತಿದೆ. ಇದು ನಿಜವೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಅಡ್ಡಗಾಲು ಹಾಕುವ ಪ್ರಶ್ನೆಯೇ ಇಲ್ಲ. ಬಿಜೆಪಿಗೆ ಯಾರೂ ಬಂದರೂ ನಾನು ಸ್ವಾಗತಿಸುತ್ತೇನೆ. ಪಕ್ಷಕ್ಕೆ ಅವರನ್ನು ಸೇರಿಸಿಕೊಳ್ಳುವ ಕುರಿತು ಪಕ್ಷ ತೀರ್ಮಾನ ತೆಗೆದುಕೊಳ್ಳುತ್ತದೆ. ಅವರು ಬಿಜೆಪಿಗೆ ಸೇರಲು ನನ್ನ ವಿರೋಧವಂತೂ ಇಲ್ಲ ಎಂದು ಸ್ಪಷ್ಟಪಡಿಸಿದರು.

Leave a Comment