ದರೋಡೆಗೆ ಹೊಂಚು ಹಾಕುತ್ತಿದ್ದ ಇಬ್ಬರ ಸೆರೆ

ತಿಪಟೂರು, ಅ. ೧೨- ನಡುರಾತ್ರಿಯಲ್ಲಿ ದಾರಿಹೋಕರನ್ನು ತಡೆದು ದರೋಡೆ ಮಾಡಲು ಸಂಚು ರೂಪಿಸಿದ್ದ ಆರು ಜನ ದುಷ್ಕರ್ಮಿಗಳ ಮೇಲೆ ಪೊಲೀಸರು ದಾಳಿ ನಡೆಸಿದಾಗ, ಇಬ್ಬರು ಸಿಕ್ಕಿ ಬಿದ್ದಿದ್ದು, ಉಳಿದ ನಾಲ್ವರು ಪರಾರಿಯಾಗಿರುವ ಘಟನೆ ನಗರದಲ್ಲಿ ನಡೆದಿದೆ.

ಎಂ.ಎಸ್. ಕುಮಾರಸ್ವಾಮಿ ಅಲಿಯಾಸ್ ಮೀಸೆ ಕುಮಾರ (46), ಯತೀಶ ಅಲಿಯಾಸ್ ಇಡ್ಲಿ (29) ಎಂಬುವರೇ ಬಂಧಿತ ಆರೋಪಿಗಳು. ಪರಾರಿಯಾದವರು ದಯಾನಂದ, ನಾಗರಾಜು ಅಲಿಯಾಸ್ ಮಟ್ಟೆನಾಗ, ಜಯಪ್ಪ ಅಲಿಯಾಸ್ ಜಯರಾಜ ಹಾಗೂ ಕಲ್ಲೇಶ ಎಂದು ತಿಳಿದು ಬಂದಿದೆ. ಇವರು ನಗರದ ಸಿದ್ದರಾಮೇಶ್ವರ ರಸ್ತೆಯಲ್ಲಿ ದಾರಿಹೋಕರನ್ನು ಅಡ್ಡಗಟ್ಟಿ ದರೋಡೆ ಮಾಡಲು ಸಂಚು ರೂಪಿಸುತ್ತಿದ್ದರು. ಆ ವೇಳೆ ರಾತ್ರಿ ಗಸ್ತಿನಲ್ಲಿದ್ದ ಪೊಲೀಸರ ತಂಡ ಇದನ್ನು ಗಮನಿಸಿ ಅವರ ಮೇಲೆ ದಾಳಿ ನಡೆಸಿದೆ. ಆದರೆ ಇಬ್ಬರು ಮಾತ್ರ ಸೆರೆ ಸಿಕ್ಕಿದ್ದಾರೆ. ಉಳಿದ ನಾಲ್ವರು ಪರಾರಿಯಾಗಿದ್ದಾರೆ. ಸೆರೆ ಸಿಕ್ಕ ಆರೋಪಿಗಳ ಬಳಿ ಇದ್ದ ಕೊಡಲಿ ಹಾಗೂ ಚಾಕುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿ ಕುಮಾರಸ್ವಾಮಿ ತಿಪಟೂರು ನಗರ ಪೊಲೀಸ್ ಠಾಣೆಯ ರೌಡಿಶೀಟರ್ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಿಪಟೂರು ನಗರ ಪೊಲೀಸ್ ಠಾಣೆಯ ಎ‌ಎಸೈ ನರಸೇಗೌಡ ಹಾಗೂ ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಶ್ರಮಿಸಿದ್ದಾರೆ.

ಈ ಸಂಬಂಧ ತಿಪಟೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸುತ್ತಿದ್ದಾರೆ.

Leave a Comment