ದಯೆಯೇ ಧರ್ಮದ ಮೂಲ: ರಮಾನಾಥ ರೈ

ಉಜಿರೆ, ಫೆ.೧೧- ದಯೆಯೇ ಧರ್ಮದ ಮೂಲ. ಅಹಿಂಸೆಯೇ ಶ್ರೇಷ್ಠ ಧರ್ಮ ಎಂದು ಸಾರಿದ ಭಗವಾನ್ ಬಾಹುಬಲಿಯ ಸಂದೇಶ ಸಾರ್ವಕಾಲಿಕ ಮೌಲ್ಯ ಹೊಂದಿದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.

ಧರ್ಮಸ್ಥಳದಲ್ಲಿ ಬಾಹುಬಲಿ ಮಸ್ತಕಾಭಿಷೇಕದ ಅಂಗವಾಗಿ ಭಾನುವಾರ ಜನಮಂಗಲಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಿ ಅವರು ಮಾತನಾಡಿದರು.

ಹಿಂಸೆ ತಾಂಡವವಾಡುತ್ತಿರುವ ಇಂದಿನ ಕಾಲದಲ್ಲಿ ಅಹಿಂಸಾ ಧರ್ಮ ಪಾಲನೆ ಅಗತ್ಯವಾಗಿದೆ ಎಂದು ಅವರು ಹೇಳಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಅಶಕ್ತರಿಗೆ ಅಭಯ ನೀಡಿ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದವರಿಗೆ ಸಾಮಜಿಕ ನ್ಯಾಯ ಒದಗಿಸಲಾಗುತ್ತದೆ ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ ಅಸಹಾಯಕರಿಗೆ ಸಹಾಯ ನೀಡುವುದು ನಮ್ಮ ಧರ್ಮವಾಗಿದೆ. ಸಬಲೀಕರಣವೇ ಗ್ರಾಮಾಭಿವೃದ್ಧಿ ಯೋಜನೆಯ ಮಂತ್ರವಾಗಿದೆ. ಫಲಾನುಭವಿಗಳು ಪ್ರಗತಿಯ ಪಾಲುದಾರರು. ಪರಿವರ್ತನೆಯ ಹರಿಕಾರರು ಎಂದು ಅವರು ಹೇಳಿದರು.

ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಆಧ್ಯಾತ್ಮಿಕ ಶಕ್ತಿ ಮತ್ತು ಸಂಸ್ಕೃತಿಯಿಂದ ಭಾರತವು ಜಗತ್ತಿಗೆ ಉತ್ತಮ ಸಂದೇಶ ನೀಡುತ್ತಿದೆ. ಬಾಹುಬಲಿಯ ಅಹಿಂಸೆಯ ಸಂದೇಶ ಸಾರ್ವಕಾಲಿಕ ಮೌಲ್ಯ ಹೊಂದಿದೆ ಎಂದು ಹೇಳಿದರು.

ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿ, ತ್ಯಾಗದ ಮೂಲಕ ಅಮರತ್ವ ಸಾಧಿಸುವುದು ಭಾರತದ ದೊಡ್ಡ ಗುಣ. ಜೈನಧರ್ಮದ ಅಹಿಂಸೆ ಶ್ರೇಷ್ಠವಾದ ಧರ್ಮವಾಗಿದ್ದು ಅದು ಇತರ ಧರ್ಮಗಳ ಮೇಲೆ ಗಾಢ ಪ್ರಭಾವ ಬೀರಿದೆ ಎಂದರು.

ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ, ಎಸ್.ಡಿ. ಸಂಪತ್ ಸಾಮ್ರಾಜ್ಯ ಶಿರ್ತಾಡಿ, ಡಿ. ಸುರೇಂದ್ರ ಕುಮಾರ್ ಮತ್ತು ತಾಲ್ಲೂಕು ಪಂಚಾಯಿತಿ ಸದಸ್ಯೆ ಧನಲಕ್ಷ್ಮಿ ಜನಾರ್ದನ್ ಉಪಸ್ಥಿತರಿದ್ದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್. ಮಂಜುನಾಥ್ ಸ್ವಾಗತಿಸಿದರು. ಡಾ. ಜಯಕುಮಾರ್ ಶೆಟ್ಟಿ ಧನ್ಯವಾದವಿತ್ತರು. ಶ್ರೀನಿವಾಸರಾವ್ ಧರ್ಮಸ್ಥಳ ಕಾರ್ಯಕ್ರಮ ನಿರ್ವಹಿಸಿದರು.

ಸ್ವಚ್ಛತೆಯ ಸಂದೇಶ ಸಾರುತ್ತಿರುವ ಮಹಾಮಸ್ತಕಾಭಿಷೇಕ

ದೇಹ ಕಲ್ಯಾಣದಿಂದ ದೇಶ ಕಲ್ಯಾಣ, ಇದು ಕಸ ಮುಕ್ತ ಪ್ರದೇಶ. ಇಲ್ಲಿ ಕಸ ಹಾಕಬೇಡಿ. ರಸ್ತೆಯ ಮೇಲೆ ಕಸ ಚೆಲ್ಲಬೇಡಿ. ಧರ್ಮಸ್ಥಳದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಸಂದೇಶ ಹೊತ್ತಿರುವ ಫಲಕಗಳು ಭಕ್ತರಲ್ಲಿ, ಪ್ರವಾಸಿಗರಲ್ಲಿ ಸ್ವಚ್ಛತೆ ಬಗ್ಯೆ ಅರಿವು, ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿವೆ.
ಸ್ವಚ್ಛತೆ ನಮ್ಮ ಸಂಸ್ಕೃತಿಯ ಪ್ರತೀಕ. ಪ್ರತಿಯೊಂದು ಮನೆಯಲ್ಲಿಯೂ, ಪ್ರತಿಯೊಬ್ಬರ ಮನದಲ್ಲಿಯೂ ಅಂತರಂಗ ಮತ್ತು ಬಹಿರಂಗ ಸ್ವಚ್ಛವಾಗಿರಬೇಕು ಎಂಬ ಸಂದೇಶ ಎಲ್ಲೆಡೆ ಪಸರಿಸಿದೆ.
ಮಸ್ತಕಾಭಿಷೇಕ ಸಂದರ್ಭದಲ್ಲಿ ಪ್ರತಿ ದಿನ ಸುಮಾರು ೫೦ ಮಂದಿ ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿದ್ದಾರೆ.ತ್ಯಾಗಿ ಭವನ, ಪಂಚಮಹಾ ವೈಭವ ವೇದಿಕೆ, ಅಮೃತವರ್ಷಿಣಿ ಸಭಾಭವನ, ರಥಬೀದಿ, ಶೌಚಾಲಯಗಳು – ಎಲ್ಲವೂ ಸ್ವಚ್ಛವಾಗಿವೆ. ಮೈಸೂರಿನ ಕೊಳ್ಳೇಗಾಲದಿಂದ ಇಪ್ಪತ್ತು ಮಂದಿಯನ್ನು ಸ್ವಚ್ಛತಾ ಕಾರ್ಯಕ್ಕಾಗಿ ನಿಯೋಜಿಸಲಾಗಿದೆ. ಪ್ರತಿ ದಿನ ಬೆಳಿಗ್ಯೆ ೫ ಗಂಟೆಯಿಂದ ೯ ರ ವರೆಗೆ ಹಾಗೂ ಸಂಜೆ ೩ ಗಂಟೆಯಿಂದ ೬ ರ ವರೆಗೆ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಮಸ್ತಕಾಭಿಷೇಕದ ವೈಭವದ ಜೊತೆಗೆ ಸ್ವಚ್ಛತಾ ಸಂದೇಶವನ್ನೂ ಬಿತ್ತರಿಸುತ್ತಿರುವುದು ಎಲ್ಲರ ಮುಕ್ತ ಪ್ರಶಂಸೆಗೆ ಪಾತ್ರವಾಗಿದೆ.
ಸಂಕ್ಷಿಪ್ತ ರಾಮಾಯಣ: ಯಕ್ಷಗಾನ ನೃತ್ಯ ರೂಪದಲ್ಲಿ
ಉಜಿರೆ: ಬಡಗುತಿಟ್ಟಿನ ಖ್ಯಾತ ಯಕ್ಷಗಾನ ಕಲಾವಿದ ಮಂಟಪ ಪ್ರಭಾಕರ ಉಪಾಧ್ಯರ ಮಾರ್ಗದರ್ಶನದಲ್ಲಿ ಮೂಡಬಿದ್ರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು ಧರ್ಮಸ್ಥಳದಲ್ಲಿ ಮಸ್ತಕಾಭಿಷೇಕ ಸಂದರ್ಭದಲ್ಲಿ ಸಂಕ್ಷಿಪ್ತ ರಾಮಾಯಣವನ್ನು ಯಕ್ಷಗಾನ ನೃತ್ಯ ರೂಪದಲ್ಲಿ ಪ್ರದರ್ಶನ ನೀಡಿ ಎಲ್ಲರ ಪ್ರಶಂಸೆಗೆ ಪಾತ್ರರಾದರೂ.
ರಾಮನ ಪಟ್ಟಾಭಿಷೇಕದ ವಿಷಯವಾಗಿ ಮಂಥರೆಯ ಕುತಂತ್ರದಿಂದ ಪ್ರಾರಂಭವಾದ ಕಥಾನಕ ಸೀತಾಪಹರಣ ಸಮೇತ ಸಮಗ್ರ ಪರಿಚಯ ನೀಡುವಲ್ಲಿ ಯಶಶ್ವಿಯಾಯಿತು. ವಿದ್ಯಾರ್ಥಿಗಳ ಕಲಾ ಪ್ರೌಢಿಮೆಗೆ ಅಭಿನಂದನೀಯವಾಗಿದೆ.
ಮುಖ್ಯಾಂಶಗಳು:
ಒಂದು ಕೋಟಿ ಇಪ್ಪತ್ತೈದು ಲಕ್ಷ ರೂ. ಮೌಲ್ಯದ ಸವಲತ್ತುಗಳ ವಿತರಣೆ
ವಿಕಲ ಚೇತನರಿಗೆ ೫೬೦ ವೀಲ್ ಚೆಯರ್, ೪೦೦ ವಾಕರ್ ಮತ್ತು ೧೧೦ ವಾಕಿಂಗ್ ಸ್ಟಿಕ್ ವಿತರಣೆ
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಫಲಾನುಭವಿಗಳು ಪ್ರಗತಿಯ ಹರಿಕಾರರು
ಅಹಿಂಸೆ ಶ್ರೇಷ್ಠ ಧರ್ಮ.

Leave a Comment