ದಯಾಮರಣ” ಕೋರಿ ಮೋದಿಗೆ ಮನವಿ ಸಲ್ಲಿಸಿರುವ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕಿ ನಳಿನಿ

ಚೆನ್ನೈ, ಡಿ 30- ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ತಪ್ಪಿತಸ್ಥರಾಗಿ ಜೈಲು ಶಿಕ್ಷೆ ಅನುಭವಿಸುತ್ತಿರುವ ನಳಿನಿ ಶ್ರೀಹರನ್ ಹಾಗೂ ಅವರ ಪತಿ ಮುರುಗನ್ ಸಂಚಲನಾತ್ಮಕ ನಿರ್ಣಯ ಕೈಗೊಂಡಿದ್ದಾರೆ.
ತಾವು ದಯಾಮರಣ ಹೊಂದಲು ಅನುಮತಿ ಕೋರಿ ಅವರು ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಈ ಸಂಬಂಧ ಕಳೆದ ತಿಂಗಳ 27 ರಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಮರೇಶ್ವರ ಪ್ರತಾಪ್ ಅವರಿಗೆ ನಳಿನಿ ಪತ್ರ ಬರೆದಿದ್ದಾರೆ.
ಜೈಲು ಅಧಿಕಾರಿಗಳ ತೀವ್ರ ಒತ್ತಡದಿಂದಾಗಿ ನಳಿನಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಆಕೆಯ ಪರ ವಕೀಲ ಪುಗಳೇಂದಿ ಹೇಳಿದ್ದಾರೆ. ಜೈಲಿನ ಕೆಲ ಅಧಿಕಾರಿಗಳ ನೆರವಿನಿಂದ ನಳಿನಿ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ ಎಂದು ಹೇಳಿದರು.
ಬಿಡುಗಡೆಯಾಗಲಿದ್ದೇವೆ ಎಂದು ನಾವು 26 ವರ್ಷಗಳಿಂದ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದೇವೆ. ಆದರೆ ಈಗ ಆ ಭರವಸೆಗಳೆಲ್ಲವೂ ಕರಗಿ ಹೋಗಿವೆ. ಜೈಲು ಅಧಿಕಾರಿಗಳು ತಮ್ಮ ಪತಿ ಮುರುಗನ್ ಅವರಿಗೆ ವಿಪರೀತ ಕಿರುಕುಳ ನೀಡುತ್ತಿದ್ದಾರೆ. ಪತಿ ಅನುಭವಿಸುತ್ತಿರುವ ಯಾತನೆಯನ್ನು ನನ್ನಿಂದ ನೋಡಲು ಸಾಧ್ಯವಾಗುತ್ತಿಲ್ಲ, ಹಾಗಾಗಿ ತಮಗೆ ದಯಾ ಮರಣಕ್ಕೆ ಅನುಮತಿ ನೀಡಬೇಕೆಂದು ಪ್ರಧಾನಿಗೆ ಬರೆದಿರುವ ಪತ್ರದಲ್ಲಿ ಕೋರಿದ್ದಾರೆ ಎಂದು ವಕೀಲರು ತಿಳಿಸಿದ್ದಾರೆ.
ತಮ್ಮನ್ನು ವೆಲ್ಲೂರು ಕಾರಾಗೃಹದಿಂದ ಪುಝಲ್ ಜೈಲಿಗೆ ವರ್ಗಾಯಿಸುವಂತೆಯೂ, ನಳಿನಿ ತಮಿಳುನಾಡು ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದ್ದು, ವೆಲ್ಲೂರು ಜೈಲಿನ ಅಧಿಕಾರಿಗಳು ತಮಗೆ ತೊಂದರೆ ಉಂಟುಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ವೆಲ್ಲೂರು ಜೈಲಿನಲ್ಲಿ ಮುರುಗನ್ ಬಳಿ ಸೆಲ್‌ಫೋನ್ ಪತ್ತೆಯಾಗುತ್ತಿದ್ದಂತೆಯೇ ಅಧಿಕಾರಿಗಳು ಆತನನ್ನು “ಏಕಾಂತವಾಸ” ದಲ್ಲಿ ಇರಿಸಿದ್ದಾರೆ. ಇದನ್ನು ಪ್ರತಿಭಟಿಸಿ, ನಳಿನಿ ಮತ್ತು ಮುರುಗನ್ ಕಳೆದ ಹತ್ತು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ನಳಿನಿ ಅವರನ್ನು ಪ್ರಸ್ತುತ ವೆಲ್ಲೂರಿನ ವಿಶೇಷ ಮಹಿಳಾ ಜೈಲಿನಲ್ಲಿ ಇರಿಸಲಾಗಿದೆ. ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಎಲ್ಲಾ ಏಳು ಕೈದಿಗಳನ್ನು ಬಿಡುಗಡೆ ಮಾಡುವ ತಮಿಳುನಾಡು ರಾಜ್ಯ ಸರ್ಕಾರದ ನಿರ್ಧಾರ ಪ್ರಸ್ತುತ ರಾಜ್ಯಪಾಲ ಭನ್ವರಿಲಾಲ್ ಪುರೋಹಿತ್ ಅವರ ಮುಂದೆ ಬಾಕಿ ಉಳಿದುಕೊಂಡಿದೆ.

Leave a Comment