ದಬ್ಬಗುಂಟೆಯಲ್ಲಿ ಸರಣಿ ಕಳ್ಳತನ

ಹುಳಿಯಾರು, ಆ. ೬- ಮೂರು ಮನೆಯ ಬಾಗಿಲು ಒಡೆದು ಸರಣಿ ಕಳ್ಳತನ ನಡೆಸಿರುವ ಕಳ್ಳರು ಚಿನ್ನಾಭರಣ ಮತ್ತು ನಗದನ್ನು ದೋಚಿ ಪರಾರಿಯಾಗಿರುವ ಘಟನೆ ಹೋಬಳಿಯ ದಸೂಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದಬ್ಬಗುಂಟೆ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ರಶೀದ್‌ಸಾಬ್, ಶಾರದಮ್ಮ, ಕರಿಯಮ್ಮ ಅವರ ಮನೆಯಲ್ಲಿ ಈ ಕೃತ್ಯವೆಸಗಲಾಗಿದೆ. ಮನೆಗಳಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿರುವ ಕಳ್ಳರು ಮನೆಯ ಬಾಗಿಲು ಒಡೆದು ಒಳನುಗ್ಗಿ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಇನ್ನು ಮುದ್ದರಂಗಪ್ಪ ಹಾಗೂ ಕವಿತಾ ಅವರ ಮನೆಗೆ ನುಗ್ಗುವ ವಿಫಲ ಪ್ರಯತ್ನವನ್ನು ಕಳ್ಳರು ಮಾಡಿದ್ದಾರೆ.

ರಶೀದ್‌ಸಾಬ್ ಅವರ ಮನೆಗೆ ನುಗ್ಗಿದ ಕಳ್ಳರು ಬೀರುವಿನ ಬೀಗ ಹೊಡೆದು ಎರಡು ಜತೆ ಕಿವಿ ಸೆಟ್, ಒಂದು ಕಾಸಿನ ಸರ, ಒಂದು ನಕ್ಲೇಸ್, ಕಾಲು ಚೈನ್, 5 ಉಂಗುರಗಳನ್ನು ದೋಚಿ ಪರಾರಿಯಾಗಿದ್ದಾರೆ. ಶಾರದಮ್ಮ ಅವರ ಮನೆಯಲ್ಲಿ 50 ಸಾವಿರ ರೂ. ನಗದು, ಎರಡು ಜತೆ ಓಲೆ ದೋಚಿದ್ದಾರೆ.

ಕರಿಯಮ್ಮ ಅವರ ಮನೆಯಲ್ಲಿ ಪಾತ್ರೆ ಸಾಮಾನುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಆದರೆ ಮನೆಯವರೆಲ್ಲರೂ ಬೆಂಗಳೂರಿಗೆ ತೆರಳಿರುವುದರಿಂದ ಅವರು ಬಂದ ನಂತರವಷ್ಟೇ ಕಳವು ಆಗಿರುವ ವಸ್ತುಗಳ ಬಗ್ಗೆ ನಿಖರ ಮಾಹಿತಿ ಲಭ್ಯವಾಗಬೇಕಿದೆ.

ಮುದ್ದರಂಗಣ್ಣ ಮತ್ತು ಕವಿತಾ ಅವರ ಮನೆಗೆ ಪ್ರತ್ಯೇಕ ಎರಡು ತಂಡ ನುಗ್ಗುವ ವಿಫಲ ಪ್ರಯತ್ನವನ್ನು ಮಾಡಿದ್ದು, ಈ ಎರಡೂ ಮನೆಯವರು ಎಚ್ಚರಗೊಂಡು ಗಲಾಟೆ ಮಾಡಿದ ಪರಿಣಾಮ ಕಳ್ಳರು ಕಾರಿನಲ್ಲಿ ಪರಾರಿಯಾಗಿದ್ದಾರೆ. ಒಟ್ಟು ಆರು ಮಂದಿ ಕಳ್ಳತನಕ್ಕೆ ಬಂದಿದ್ದರೆಂದು ಹೇಳಲಾಗಿದೆ. ದೂರಿನನ್ವಯ ಪಟ್ಟಣದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಘಟನೆಯ ವಿವರ ಪಡೆದುಕೊಂಡಿದ್ದಾರೆ.

ಈ ಸಂಬಂಧ ಹುಳಿಯಾರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸುತ್ತಿದ್ದಾರೆ.

Leave a Comment