ದತ್ತಾತ್ರೇಯ ಪಾಟೀಲಗೆ ಸಚಿವಸ್ಥಾನ ನೀಡಲು ಆಗ್ರಹ

 

ಕಲಬುರಗಿ ನ 13: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕರಾದ ದತ್ತಾತ್ರೇಯ  ಸಿ ಪಾಟೀಲ ರೇವೂರರಿಗೆ ಸಂಪುಟದರ್ಜೆ ಸಚಿವಸ್ಥಾನ ಮತ್ತು ವಿಧಾನಪರಿಷತ್ತು ಸದಸ್ಯ ಬಿ.ಜಿ ಪಾಟೀಲರಿಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃಧ್ಧಿ ಮಂಡಳಿಯ ಅಧ್ಯಕ್ಷ ಸ್ಥಾನ ನೀಡುವಂತೆ ಮಾದಿಗ ಸಂಘಟನೆಗಳ ಸಮನ್ವಯ ಸಮಿತಿ ಆಗ್ರಹಿಸಿದೆ.

ಕಲ್ಯಾಣ ಕರ್ನಾಟಕದ ವಿಭಾಗೀಯ ಕೇಂದ್ರವಾದ ಕಲಬುರಗಿಗೆ ಯಾವುದೇ ಸರ್ಕಾರವಿದ್ದರೂ, ಒಂದು ಎರಡು ಸಚಿವಸ್ಥಾನ ನೀಡುತ್ತ ಬರಲಾಗಿದೆ.ಆದರೆ ಇದೇ ಮೊದಲ ಬಾರಿಗೆ ಕಲಬುರಗಿ ಜಿಲ್ಲೆಗೆ ಯಾವುದೇ ಸಚಿವ ಸ್ಥಾನ ನೀಡದೇ ಇರುವದು ಇಲ್ಲಿನ ಜನರಿಗೆ ತೀವ್ರ ನಿರಾಶೆಯಾಗಿದೆ ಎಂದು ಸಮಿತಿಯ ಮುಖಂಡರಾದ  ನಾಗರಾಜ ಗುಂಡಗುರ್ತಿ ಮತ್ತು ದಶರಥ ಕಲಗುರ್ತಿ ಅವರು ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಲಬುರಗಿ ಜಿಲ್ಲೆಯಲ್ಲಿ ಬಿಜೆಪಿಯನ್ನು ಗಟ್ಟಿಯಾಗಿ ಬೆಳೆಸಿದ ನಾಯಕರನ್ನೇ ಕಡೆಗಣಿಸುತ್ತಿರುವದು ಸಹಿಸಲು ಸಾಧ್ಯವಿಲ್ಲ.ಪಕ್ಷವು ನಮ್ಮ ಸಮಾಜಕ್ಕೆ ಸೂಕ್ತ ಆದ್ಯತೆ ನೀಡಿರುವದರಿಂದ, ಕಲಬುರಗಿ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯ ಶಾಸಕರು ಆಯ್ಕೆಯಾಗಿದ್ದು ಪಕ್ಷದ ವರಿಷ್ಠರಿಗೆ ಗೊತ್ತಿರುವ ಸಂಗತಿಯೇ ಆಗಿದೆ.

ಆದ್ದರಿಂದ ದತ್ತಾತ್ರೇಯಪಾಟೀಲ ಅವರಿಗೆ ಸಂಪುಟದರ್ಜೆ ಸಚಿವಸ್ಥಾನ ಮತ್ತು ವಿಧಾನಪರಿಷತ್ತು ಸದಸ್ಯ ಬಿ.ಜಿ ಪಾಟೀಲರಿಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃಧ್ಧಿ ಮಂಡಳಿಯ ಅಧ್ಯಕ್ಷ ಸ್ಥಾನ ನೀಡುವಂತೆ ಆಗ್ರಹಿಸಿ ಉಪಚುನಾವಣೆಯ ನಂತರ ಬೆಂಗಳೂರಿಗೆ ಸಮಿತಿಯ ನಿಯೋಗ ಕೊಂಡೊಯ್ಯಲಾಗುವದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ರುಕ್ಕಪ್ಪ ಕಾಂಬಳೆ, ವಿಜಯಕುಮಾರ,ನಾಗಪ್ಪ ಟೈಗರ್ ,ಸುನೀಲ ಸಲಗರ, ಚಂದ್ರಕಾಂತ ಕಟ್ಟಿಮನಿ,  ಉದಯಕುಮಾರ ವಾಲೀಕರ್ ಸೇರಿದಂತೆ ಹಲವರಿದ್ದರು..

Leave a Comment