ದಡ್ಡ ವಡ್ಡ ಎಂಬ ಈಶ್ವರಪ್ಪ ಹೇಳಿಕೆಗೆ ಡಿಬಿ ಖಂಡನೆ

ದಡ್ಡ ವಡ್ಡ ಎಂಬ ಈಶ್ವರಪ್ಪ ಹೇಳಿಕೆಗೆ ಡಿಬಿ ಖಂಡನೆ
ದಾವಣಗೆರೆ.ಸೆ.22; ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾದ ಸಿದ್ದರಾಮಯ್ಯನವರನ್ನು ಟೀಕಿಸುವ ಭರದಲ್ಲಿ ದಡ್ಡ ವಡ್ಡ ಎಂದು ಅವಹೇಳನಕಾರಿಯಾಗಿ ನಿಂದಿಸಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಕೆ.ಎಸ್. ಈಶ್ವರಪ್ಪನವರ ಹೇಳಿಕೆಗೆ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ ಮಾಜಿ ಅಧ್ಯಕ್ಷರು ಹಾಗೂ ಭೋವಿ ಸಮಾಜದ ಮುಖಂಡರಾದ ಡಿ. ಬಸವರಾಜ್ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆ.ಎಸ್. ಈಶ್ವರಪ್ಪ ತಕ್ಷಣವೇ ಭೋವಿಸಮಾಜಕ್ಕೆ ಬಹಿರಂಗ ಕ್ಷಮೆ ಕೇಳಬೇಕೆಂದು  ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು ಭೋವಿಸಮಾಜದವರು ಬಡವರಿರಬಹುದು ಆದರೆ ಶ್ರಮಜೀವಿಗಳು, ಕಷ್ಟಪಟ್ಟು ಕಾಯಕಮಾಡಿ ಸ್ವಾಭಿಮಾನದಿಂದ ಬದುಕುತ್ತಿದ್ದೇವೆ. ಬಂಡೆ ಹೊಡೆದು ಬದುಕುತ್ತೇವೆ ಯಾರ ತಲೆಯನ್ನು ಹೊಡೆದು ಬದುಕುವುದಿಲ್ಲ. ರಾಷ್ಟ್ರಕ್ಕೆ ತನ್ನದೇ ಅದ ಕೊಡುಗೆಯನ್ನು ನೀಡಿದೆ. ಕೆರೆ ಕಟ್ಟೆ, ಆಣೆಕಟ್ಟುಗಳು, ಸುಂದರವಾದ ದೇವಸ್ಥಾನ ಮತ್ತು ಭವ್ಯ ಕಟ್ಟಡಗಳನ್ನು ಕಟ್ಟಿ ರಾಷ್ಟ್ರದ ಮುಖ್ಯವಾಹಿನಿಗೆ ತಮ್ಮದೇ ಆದ ಕೊಡುಗೆಯನ್ನು ಭೋವಿಸಮಾಜ ನೀಡುತ್ತಿದೆ. ರಾಷ್ಟ್ರದ ಅಭಿವೃದ್ಧಿಯಲ್ಲಿ ಶಿಲ್ಪಿಗಳಾಗಿ ಕೆಲಸ ಮಾಡುತ್ತಿದ್ದೇವೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಭೋವಿ ಸಮಾಜಕ್ಕೆ ಎಂದು ಮರೆಯದ ಕೊಡುಗೆಯನ್ನು ನೀಡಿದ್ದಾರೆ. ಭೋವಿ ಅಭಿವೃದ್ಧಿ ನಿಗಮವನ್ನು ಸ್ಥಾಪನೆ ಮಾಡಿ ಭೋವಿ ಸಮಾಜಕ್ಕೆ ಆರ್ಥಿಕ ಶಕ್ತಿ ತುಂಬಿದರು. ಶ್ರೀ ಗುರುಸಿದ್ದರಾಮೇಶ್ವರ ದೇವರ ಜಯಂತಿಯನ್ನು ಪ್ರತಿವರ್ಷ ಕರ್ನಾಟಕ ಸರ್ಕಾರದಿಂದಲೇ ಆಚರಿಸಲು ಆದೇಶ ನೀಡಿದ್ದಾರೆ. ಈಶ್ವರಪ್ಪ ಹಿರಿಯ ರಾಜಕಾರಣಿ ಅವರು ಬಳಸುವ ಶಬ್ದಗಳು ತೀರಾ ಕೆಳಮಟ್ಟದಿಂದ ಕೂಡಿರುತ್ತವೆ. ಅವರ ನಾಲಿಗೆ ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಟೀಕಿಸಲು  ಭೋವಿ ಸಮಾಜದ ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದು ಅಕ್ಷಮ ಅಪಾರಾಧವಾಗಿದೆ, ದಡ್ಡ-ವಡ್ಡ ಎಂಬ ಪದವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ದೌರ್ಜನ್ಯ ಕಾಯ್ದೆ ಅಡಿ ಬರುತ್ತದೆ ಇದರಿಂದ ಈಶ್ವರಪ್ಪನವರು ಜಾತಿ ನಿಂದನೆ ಮಾಡಿದಂತಾಗಿದ್ದು, ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯವರು ಕೂಡಲೇ ಸ್ವಯಂಪ್ರೇರಿತರಾಗಿ ಜಾತಿ ನಿಂದನೆ ಮೊಕದ್ದಮೆ ದಾಖಲಿಸಲಿ ಎಂದು ಅವರು ಅಗ್ರಹಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಆಟೋತಿಮ್ಮಣ್ಣ,ಹನುಮಂತಪ್ಪ,ಹದಡಿ ವೆಂಕಟೇಶ್,ತಿರುಮಲಪ್ಪ,ಡಿ.ಶಿವಕುಮಾರ್,ಲಿಯಾಖತ್ ಅಲಿ,ಅಯಾಜ್ ಇದ್ದರು.
ಬಾಕ್ಸ್
ಅನರ್ಹ ಶಾಸಕರ ಸಮಾಧಿ
ಬಿಜೆಪಿ ಅಧಿಕಾರದ ಆಸೆಗಾಗಿ ಅನರ್ಹ ಶಾಸಕರನ್ನು ಬಲಿನೀಡಿದೆ. ಅವರ ಸಮಾಧಿಯ ಮೇಲೆ ರಾಜ್ಯದ ಆಡಳಿತ ನಡೆಸುತ್ತಿದೆ.ರಾಜಕೀಯವಾಗಿ ಅವರನ್ನು ನಿರ್ನಾಮ ಮಾಡಲಾಗಿದೆ.ಅನರ್ಹ ಶಾಸಕರು ಚುನಾವಣೆಯಲ್ಲಿ ಸ್ಪರ್ಧಿಸದಂತೆ ಮಾಡಲಾಗಿದೆ.ಇದೆಲ್ಲಾ ಕುತಂತ್ರವಾಗಿದೆ. ಅದಕ್ಕಾಗಿಯೇ ತೀರ್ಪು ಬರುವ ಮುನ್ನವೇ ಚುನಾವಣೆ ಘೋಷಣೆ ಮಾಡಲಾಗಿದ್ದು ಕೇವಲ ಬಿಜೆಪಿಯ ಅಭ್ಯರ್ಥಿಗಳು ಸ್ಪರ್ಧಿಸಲು ಅವಕಾಶ ಕಲ್ಪಿಸಲು ಈ ರೀತಿ ಮಾಡಲಾಗಿದೆ.ಒಟ್ಟಿನಲ್ಲಿ ಬಿಜೆಪಿ ಅಧಿಕಾರ ಹಿಡಿಯಲು ಸಹಾಯ ಮಾಡಿದವರನ್ನೇ ರಾಜಕೀಯವಾಗಿ ಮುಗಿಸಲು ಮುಂದಾಗಿರುವುದು ದುರಂತ.
ಡಿ.ಬಸವರಾಜ್
ಕಾಂಗ್ರೆಸ್ ಮುಖಂಡರು.

Leave a Comment