ದಟ್ಟ ಕಥೆಯ ಕಾಡಿಲ್ಲದೆ ಚದುರಿದ ಹೆಬ್ಬುಲಿ

ಚಿತ್ರ : ಹೆಬ್ಬುಲಿ
ನಿರ್ಮಾಪಕರು : ರಘುನಾಥ್, ಉಮಾಪತಿ ಶ್ರೀನಿವಾಸ್
ನಿರ್ದೇಶನ : ಕೃಷ್ಣ
ತಾರಾಗಣ : ಸುದೀಪ್, ರವಿಚಂದ್ರನ್, ಅಮಲಾ ಪೌಲ್, ಚಿಕ್ಕಣ್ಣ, ಅವಿನಾಶ್ ಮುಂತಾದವರು

‘ದೇಶದ ಜನರ ಪ್ರಾಣ ರಕ್ಷಣೆಗಾಗಿ ಗಡಿಯಲ್ಲಿ ಹೋರಾಡುವ ಯೋಧ ತನ್ನ ಕುಟುಂಬಕ್ಕೆ ಯಾರಾದರೂ ಕೈ ಹಾಕಿದರೆ ಬಿಡ್ತಾನಾ?’ ಇದು ಹೆಬ್ಬುಲಿಯಾಗಿ ಸುದೀಪ್ ಪಂಚಿಂಗ್ ಡೈಲಾಗ್ಸ್‌ಗಳಲ್ಲಿ ಒಂದು. ಈ ಕಾರಣಕ್ಕಾಗಿಯೇ ಹೆಬ್ಬುಲಿ ಇಡೀ ಚಿತ್ರ ನಡೆಯುತ್ತದೆ.
ಪಾಕಿಸ್ತಾನದ ಗಡಿಯೊಳಗೇ ನುಗ್ಗಿ ಉಗ್ರರನ್ನು ಅವರ ನೆಲೆಯಲ್ಲಿಯೇ ಧ್ವಂಸ ಮಾಡುವ ಕ್ಯಾಪ್ಟನ್ ರಾಮ್ (ಸುದೀಪ್) ಕಾರ್ಯಚರಣೆ ರೋಚಕವಾಗಿವೆ. ಇದು ಚಿತ್ರದ ಆರಂಭದಲ್ಲಿ ಕೆಲ ನಿಮಿಷಗಳು ಬರುವ ಆಕ್ಷನ್ ದೃಶ್ಯಗಳಾಗಿವೆ. ಅಷ್ಟು ಮಾತ್ರವೇ ಹೆಬ್ಬುಲಿ ಚಿತ್ರವನ್ನು ಇದುವರೆಗೆ ಹೆಚ್ಚು ಪ್ರಚಾರ ಮಾಡಿರುವಂತೆ ಚಿತ್ರಿತವಾಗಿದೆ.
ಕಾಶ್ಮೀರದ ಗಡಿಯಲ್ಲಿದ್ದ ರಾಮ್ ತನ್ನನ್ನು ಸಾಕಿಸಲಹಿದ ಅಣ್ಣನ ಸಾವಿನಿಂದಾಗಿ ಬೆಂಗಳೂರಿಗೆ ಮರಳುತ್ತಾನೆ. ಭೂಹಗರಣಕ್ಕೆ ಸಂಬಂಧಿಸಿದಂತೆ ನಗರಪಾಲಿಕೆಯ ಸದಸ್ಯನನ್ನು ಕೊಲೆ ಮಾಡಿ ಜಿಲ್ಲಾಧಿಕಾರಿ ಅಧಿಕಾರವನ್ನು ಕಳೆದುಕೊಂಡ ಅವನ ಅಣ್ಣ ಆತಹತ್ಯೆ ಮಾಡಿಕೊಂಡಿದ್ದಾನೆಂದು ಬಿಂಬಿಸಲಾಗಿರುತ್ತದೆ. ಆದರೆ ಅದು ಕೊಲೆಯಾಗಿರುತ್ತದೆ. ಕೊಲೆಯ ರಹಸ್ಯವನ್ನುs ಭೇದಿಸುತ್ತಾ ಹೋಗುತ್ತಾನೆ ಇದರ ಜೊತೆಗೆ ಅವನ ಅಣ್ಣ, ಅತ್ತಿಗೆ ಮತ್ತು ಅವರ ಪುಟ್ಟ ಮಗಳ ಬಾಂಧವ್ಯ, ನಾಯಕಿಯ ಪ್ರೇಮ, ರಾಜಕಾರಣಿ ಮತ್ತು ಭೂಗತರ ಕ್ರೌರ್ಯ, ಅಣ್ಣನ ಕೊಲೆಗೆ ನಿಜವಾದ ಕಾರಣ ಇವುಗಳು ತೆರೆದುಕೊಳ್ಳುತ್ತಾ ಹೋಗುತ್ತವೆ. ಸುದೀಪ್ ಹೀರೋಯಿಸಂನ ಮುಖ್ಯವಾಗಿಟ್ಟುಕೊಂಡೆ ಪ್ರತಿ ಸನ್ನಿವೇಶಗಳು ನಡೆಯುತ್ತವೆ.
ಖಳನಾಯಕರಿಂದ ಸತ್ತೇ ಹೋಗುವಂಥ ಹೊಡೆತಗಳು ಬಿದ್ದರೂ ಸುದೀಪ್ ಹತ್ತು ಕ್ಷಣಗಳಲ್ಲಿ ಹತ್ತಾರು ಬಲಾಢ್ಯರನ್ನು ಹೊಡೆದುರುಳಿಸಿ ಅವರುಗಳ ಮೇಲೇ ಕುಳಿತು ವಿಜೃಂಭಿಸುವಂಥ ಹೀರೋಯಿಸಂ ಇದೆ. ಈ ದೃಷ್ಟಿಯಿಂದ, ಪಂಚಿಂಗ್ ಡೈಲಾಗ್, ಫೈಟ್ಸ್, ವಿಭಿನ್ನ ಸ್ಟೈಲಿಶ್ ಲುಕ್‌ನಿಂದ ಸುದೀಪ್ ತಮ್ಮ ಅಭಿಮಾನಿಗಳನ್ನು ಸಾಕಷ್ಟು ರಂಜಿಸುತ್ತಾರೆ. ಅವರ ನಟನೆ ಮತ್ತು ದ್ವನಿಯಿಂದಲೂ ಖುಷಿ ಕೊಡುತ್ತಾರೆ.
ನಿರ್ದೆಶಕ ಕೃಷ್ಣ ತಾಂತ್ರಿಕವಾಗಿ ಮತ್ತು ಸುದೀಪ್ ಡೈಲಾಗ್‌ನಿಂದ ಮಾತ್ರವೇ ಹೇಳಿಸಿರುವಂಥ ದೇಶಪೇಮವನ್ನೇ ಕಥೆಯಾಗಿಸಿದ್ದರೂ ಚಿತ್ರ ವಿಭಿನ್ನವಾಗಿರುತ್ತಿತ್ತು. ಅಣ್ಣ ಮತ್ತು ತಮ್ಮನ ಹೃದಯ ಸ್ಪರ್ಶಿ ಬಾಂಧವ್ಯ, ಕಾನ್ಸರ್ ರೋಗದಿಂದಾಗಿ ಕರ್ಚು ಭರಿಸಲಾಗದೆ ಜನರು ಸಾಯುವುದನ್ನು ತಡೆಯಲು ಅಣ್ಣ ಶೋಧಿಸುವ ಔಷಧ ಮತ್ತು ಅದನ್ನು ಜನರಿಗಾಗಿ ಉಳಿಸುವುದಕ್ಕಾಗಿಯೇ ಬಲಿಯಾಗುವುದು ಇಂಥ ಕಾಡುವ ಅಂಶಗಳು, ಪ್ರೇಮದ ಎಳೆಯೂ ಇದ್ದು ಕಥೆ ಮನಮುಟ್ಟುವುದಿಲ್ಲ.
ನಿರ್ದೇಶಕ ಕೃಷ್ಣ ಹೆಬ್ಬುಲಿಯನ್ನು ತಾಂತ್ರಿಕವಾಗಿ ಶ್ರೀಮಂತವಾಗಿಸಿ ಮತ್ತು ಸುದೀಪ್ ಅವರನ್ನು ವಿಜೃಂಭಿಸುವುದರಲ್ಲೇ ಕೇಂದ್ರೀಕರಿಸಿಕೊಂಡಿರುವುದರಿಂದ ಚಿತ್ರ ದಟ್ಟವಾದ ಅನುಭವ ಕೊಡದೆ ಚದುರಿಹೋಗಿದೆ.
ಹಾಡುಗಳಷ್ಟೆ ಅಮಲ ಪೌಲ್ ಅಂದ ಖುಷಿಕೊಡುತ್ತದೆ. ನಿರ್ದೆಶಕರಿಗಿಂತ ಛಾಯಾಗ್ರಹಕ ಕರುಣಾಕರ್ ಕೆಲಸ ಪರಿಣಾಮಕಾರಿಯಾಗಿದೆ. ಚಿಕ್ಕಣ್ಣ, ಅವಿನಾಶ್, ರವಿಶಂಕರ್, ರವಿಕಿಶನ್, ಕಬೀರ್ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ಮಾಸ್ತಿ ಗುಡಿ ಚಿತ್ರದ ಸಾಹಸ ದೃಶ್ಯ ಚಿತ್ರೀಕರಣದ ಸಮಯದಲ್ಲಿ ದುರಂತ ಸಾವನಪ್ಪಿದ ಅನಿಲ್ ಮತ್ತು ಅವರ ಪಾತ್ರ ಗಮನ ಸೆಳೆಯುತ್ತದೆ. ರವಿಚಂದ್ರನ್ ಹೆಬ್ಬುಲಿ ಚಿತ್ರ ಮಾಣಿಕ್ಯವನ್ನು ಮೀರಿಸುತ್ತದೆ ಎಂದು ಹೇಳಿಕೊಂಡಿದ್ದರು, ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ಆದರೆ ಮಾಣಿಕ್ಯ ಚಿತ್ರಕ್ಕೆ ಹೋಲಿಸಿ ಹೆಬ್ಬುಲಿಯನ್ನು ನೋಡುವುದು ತಪ್ಪಾಗುತ್ತದೆ.
-ಕೆ.ಬಿ. ಪಂಕಜ

Leave a Comment