ದಕ್ಷಿಣ ಕಾಶಿ ಕಾಳಗಿಯಲ್ಲಿ ನೀಲಕಂಠ ಕಾಳೇಶ್ವರ ಜಾತ್ರೆ ಕಲರವ

ಕಾಳಗಿ: ಹೈದ್ರಾಬಾದ್ ಕರ್ನಾಟಕ ಭಾಗದ ಪವಿತ್ರ ಪುಣ್ಯ ಕ್ಷೇತ್ರಗಳಲ್ಲಿ ಶತಮಾನಗಳಷ್ಟು ಇತಿಹಾಸಯುಳ್ಳ ಹಾಗೂ ಧಾರ್ಮಿಕ ಪುರಾಣಗಳಿಗೆ ಪ್ರಸಿದ್ಧಿ ಪಡೆದು ದಕ್ಷಿಣ ಕಾಶಿ ಎಂದೇ ಪ್ರಖ್ಯಾತಿ ಪಡೆದಿರುವ ಕಲಬುರಗಿ ಜಿಲ್ಲೆಯ ಕಾಳಗಿಯ ಶ್ರೀ ನೀಲಕಂಠ ಕಾಳೇಶ್ವರ ದೇವಸ್ಥಾನವು ಈ ಭಾಗದ ಜನರರಿಗೆ ಪವಿತ್ರ ಪುಣ್ಯಕ್ಷೇತ್ರ ಕಾಶಿ ಕ್ಷೇತ್ರದಂತೆ ವರದಾನವಾಗಿದೆ.

ನೀಲಕಂಠ ಕಾಳೇಶ್ವರ ದೇವಸ್ಥಾನದಲ್ಲಿ ಯುಗ-ಯುಗಗಳಿಂದಲೂ ಐತಿಹಾಸಿಕ ನೆಲೆಯನ್ನು ಹೊಂದಿರುವ, ನಾಲ್ಕು ಯುಗಗಳಿಂದ ಒಂದೊಂದು ಐತಿಹಾಸಿಕ ಭವ್ಯ ಪರಂಪರೆಯುಳ್ಳ ಈ ದೇವಸ್ಥಾನವನ್ನು ಸಂಸ್ಕøತದಲ್ಲಿ

`ಕೃತೇ ಜ್ಯೋತೇಶ್ವರ ಲಿಂಗಂ ತೃತೇಯ ಸೋಮೇಶ್ವರ ತಥ//

ದ್ವಾಪಾರೇ ನೀಲಕಂಠೇಶ್ವರ ಕಲೌ ಕಾಲೇಶ್ವರ ಸೃರ್ಥೆಂ//

ಎಂದು ವರ್ಣಿಸಲಾಗಿದೆ. ಅಂದರೆ, ಕೃತಯುಗದಲ್ಲಿ ಶ್ರೀ ಜೋತೇಶ್ವರ ಲಿಂಗವೆಂದೂ, ತ್ರೇತಾಯುಗದಲ್ಲಿ ಶ್ರೀ ಸೋಮೇಶ್ವರ ಲಿಂಗವೆಂದೂ, ದ್ವಾಪಾರ ಯುಗದಲ್ಲಿ ಶ್ರಿ ನೀಲಕಂಠ ಕಾಳೇಶ್ವರನೆಂದೂ ಹಾಗೂ ಕಲಿಯುಗದಲ್ಲಿ ಶ್ರೀ ಕಾಳೇಶ್ವರನೆಂದೂ ಐತಿಹ್ಯವಿದೆ. ಈ ಲಿಂಗಗಳು ಈಗಲೂ ಕೂಡ ಕಾಣಬಹುದಾಗಿದೆ.

ಕಲಬುರಗಿ ಜಿಲ್ಲೆಯಿಂದ 40ಕಿ.ಮೀ ದೂರದಲ್ಲಿನ ಕಾಳಗಿಯಲ್ಲಿರುವ ಶ್ರೀ ನೀಲಕಂಠ ಕಾಳೇಶ್ವರ ದೇವಸ್ಥಾನವು ಹೈದ್ರಾಬಾದ ಕರ್ನಾಟಕ ಭಾಗದಲ್ಲಿ ಪವಿತ್ರ ಪುಣ್ಯಕ್ಷೇತ್ರವಾಗಿ ಪ್ರಸಿದ್ಧಿಯನ್ನು ಪಡೆದುಕೊಂಡಿದೆ.

ಕ್ರಿ.ಶ. 2ನೇ ಶತಮಾನದಲ್ಲಿ ಈ ದೇವಸ್ಥಾನ ನಿರ್ಮಾಣಗೊಂಡಿತ್ತೆಂದು ಪುರಾತನ ದಾಖಲೆಗಳಿಂದ ತಿಳಿಯುತ್ತದೆ. ಈ ಕಾಳೇಶ್ವರ ದೇವಾಲಯವು ಶಾಸನೋಕ್ತ ಸಯಂಭು ಕಾಳೇಶ್ವರ ದೇವಾಲಯವಾಗಿದ್ದು, ಇದರ ಮೊದಲ ಉಲ್ಲೇಖ 1103ರ ಶಾಸನದಲ್ಲಿ ಲಭಿಸುತ್ತದೆ. ಇದೊಂದು ದೇಗುಲ ಸಂಕೀರ್ಣವಾಗಿದ್ದು, ಇಲ್ಲಿ ಪೂರ್ವಾಭಿಮುಖವಾಗಿರುವ ನೀಲಕಂಠ ಕಾಳೇಶ್ವರ(ಸ್ವಯಂಭು ಕಾಳೇಶ್ವರ), ರೇವಣಸಿದ್ದೇಶ್ವರ ಹಾಗೂ ಈಶ್ವರ ಗುಡಿ, ಉತ್ತರಾಭಿಮುಖವಾಗಿರುವ ಸೋಮೇಶ್ವರ ಹಾಗೂ ವೀರಭದ್ರೇಶ್ವರ ದೇವಾಲಯಗಳಿದ್ದು, ಇವುಗಳಿಗೆಲ್ಲ ಸೇರಿದಂತೆ ವಿಶಾಲವಾದ ತೆರೆದ ಸಭಾಮಂಟಪವಿದೆ, ಇದರ ಬದಿಯಲ್ಲೇ ಪುಷ್ಕರಣಿ, ಅದರ ಪಕ್ಕದಲ್ಲೇ ವರ್ಷಪೂರ್ತಿ ಸುಂದರವಾಗಿ ತುಂಬಿ ಹರಿಯುತ್ತಿರುವ ರೌದ್ರಾವತಿ ನದಿ ಇದೆ ಇದು ದೇವಸ್ಥಾನದ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುತ್ತಿದೆ.

Leave a Comment