ದಕ್ಷತೆ, ಪ್ರಾಮಾಣಿಕ ಸೇವೆಯಿಂದ ಸಂಸ್ಥೆಯ ಉನ್ನತಿ ಸಾಧ್ಯ

ತುಮಕೂರು, ನ. ೨೦- ಒಂದು ಸಂಸ್ಥೆಯಲ್ಲಿ ವ್ಯಕ್ತಿಯು ದಕ್ಷತೆಯಿಂದ ಕಾರ್ಯನಿರ್ವಹಿಸಿದಾಗ ಅಂತಹ ಸಂಸ್ಥೆಯು ಉನ್ನತ ಹಂತಕ್ಕೆ ಬೆಳೆಯುತ್ತದೆ ಎಂದು ಪ್ರಾಚಾರ್ಯ ಕೃಷ್ಣಮೂರ್ತಿ ಹೇಳಿದರು.

ನಗರದ ರಾಜೀವ್ ಗಾಂಧಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಯಾವುದೇ ಒಂದು ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವವರು ಕೇವಲ ಅರ್ಹತೆ ಹೊಂದಿದ್ದರೆ ಸಾಲದು, ಸಮರ್ಪಕವಾಗಿ ಕಾರ್ಯನಿರ್ವಹಿಸುವ ದಕ್ಷತೆಯ ಗುಣ ಹೊಂದಿದಾಗ ಮಾತ್ರ ಅಂತಹ ವ್ಯಕ್ತಿ ನೈಪುಣ್ಯತೆಯಿಂದ ಕೆಲಸ ಮಾಡುವುದರೊಂದಿಗೆ ಸಂಸ್ಥೆಯನ್ನು ಮೇಲ್ಮಟ್ಟಕ್ಕೆ ಕೊಂಡೊಯ್ಯುತ್ತಾರೆ ಎಂದರು.

ವ್ಯಕ್ತಿಯಲ್ಲಿ ನಿಸ್ವಾರ್ಥತೆಯಿಂದ ಕೆಲಸ ಮಾಡಿದಾಗ ಇತರರಿಗೆ ಮಾದರಿ ಆಗುತ್ತಾನೆ. ಕೇವಲ ಹಣ ಗಳಿಸುವುದರಿಂದ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಸಾಧ್ಯವಿಲ್ಲ. ಇನ್ನೊಬ್ಬರು ನಮ್ಮ ವ್ಯಕ್ತಿತ್ವವನ್ನು ಅನುಸರಿಸಿಕೊಂಡು ಉತ್ತಮ ಜೀವನವನ್ನು ರೂಪಿಸಿಕೊಂಡರೆ ಮಾತ್ರ ನಾವು ಈ ಭೂಮಿಯ ಮೇಲೆ ಜನ್ಮ ಪಡೆದಿದ್ದಕ್ಕೆ ಸಾರ್ಥಕವಾಗುತ್ತದೆ ಎಂದರು.

ಇಂದು ಕೇವಲ ಅರ್ಹತೆ ಪಡೆಯುವವರ ಸಂಖ್ಯೆ ಹೆಚ್ಚುತ್ತಿದೆ. ಗುಣಾತ್ಮಕತೆಯುಳ್ಳ ಮಾನವ ಸಂಪನ್ಮೂಲ ರೂಪಿಸುವಲ್ಲಿ ಶಿಕ್ಷಣ ಸಂಸ್ಥೆಗಳು ಶ್ರಮಿಸಬೇಕಾಗುತ್ತದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಅರ್ಹತೆ ಪಡೆದುಕೊಂಡರೆ ಸಾಲದು, ಯಾವ ಕ್ಷೇತ್ರದಲ್ಲಿ ಬಿಟ್ಟರೂ ಸದೃಢವಾಗಿ ಕೆಲಸ ಮಾಡಬಲ್ಲೆ ಎನ್ನುವ ವ್ಯಕ್ತಿ ಎಲ್ಲಿ ಹೋದರೂ ಯಶಸ್ವಿಯಾಗುತ್ತಾನೆ ಎಂದರು.

ಕಾಲೇಜಿನ ಸೂರಿಯಾ ಬೇಗಂ ಮಾತನಾಡಿ, ನಾವು ಎಷ್ಟು ದಿನ ಯಾವ ಸಂಸ್ಥೆಯಲ್ಲಿ ಕೆಲಸ ಮಾಡಿದೆವು ಎನ್ನುವುದು ಮುಖ್ಯವಲ್ಲ. ಕೆಲಸ ಮಾಡಿರುವಷ್ಟು ದಿನ ಹೇಗೆ ಕೆಲಸ ಮಾಡಿದೆವು ಎನ್ನುವುದು ಮುಖ್ಯ. ಕೆಲಸ ಮಾಡುವ ಮನಸ್ಸುಗಳು ಹೆಚ್ಚಿನ ರೀತಿ ಇದ್ದಾಗ ಸಂಸ್ಥೆಯನ್ನು ಅಭಿವೃದ್ದಿಗೊಳಿಸುವುದು ದೊಡ್ಡ ಮಾತಲ್ಲ ಎಂದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಯಾಸ್ಮಿನ್, ಇದೊಂದು ಅಭೂತ ಪೂರ್ವ ಕ್ಷಣ. ಈ ದಿನವನ್ನು ಜೀವನದಲ್ಲಿ ಮರೆಯಲಾರೆ ಎಂದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ರಂಗನಾಥ ಕೆ.ಮರಡಿ, ಪುಟ್ಟತಿಮ್ಮಯ್ಯ, ಸುಧಾ, ಸವಿತಾ, ಪವಿತ್ರ, ಅನ್ನಪೂರ್ಣ ಮತ್ತಿತರರು ಉಪಸ್ಥಿತರಿದ್ದರು.

Leave a Comment