ದಂತವೈದ್ಯನಿಗೆ ಬ್ಲಾಕ್‌ಮೇಲ್ ಖತರ್ನಾಕ್ ತಂದೆ-ತಾಯಿ ಸೆರೆ

ಬೆಂಗಳೂರು,ಅ.೨೩-ಮಗಳ ಖಾಸಗಿ ವಿಡಿಯೋ ಇಟ್ಟುಕೊಂಡು ದಂತ ವೈದ್ಯನ ಪೋಷಕರಿಂದ ೪೫ ಲಕ್ಷ ಸುಲಿಗೆ ಮಾಡಿ ಇನ್ನೂ ಹೆಚ್ಚಿನ ಹಣಕ್ಕೆ ಬ್ಲಾಕ್‌ಮೇಲ್ ಮಾಡುತ್ತಿದ್ದ ಖತರ್ನಾಕ್ ತಂದೆ-ತಾಯಿ ಮಲ್ಲೇಶ್ವರಂ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

ಮಲ್ಲೇಶ್ವರಂನ ಲೀನಾ ಕವಿತಾ (೪೩) ಹಾಗೂ ಪ್ರಮೋದ್ ಕುಮಾರ್(೪೫)ಬಂಧಿತ ತಂದೆ-ತಾಯಿಯಾಗಿದ್ದಾರೆ.೨೧ ವರ್ಷ ಯುವತಿಯನ್ನು ಡೇಟಿಂಗ್ ಆಪ್ ಮೂಲಕ ಯುವ ದಂತ ವೈದ್ಯರೊಬ್ಬರು ಪರಿಚಯ ಮಾಡಿಕೊಂಡಿದ್ದರು.

ನಂತರ ಇಬ್ಬರ ನಡುವೆ ಸ್ನೇಹ ಬೆಳೆದು ಇಬ್ಬರು ಲಾಡ್ಜ್‌ಗೆ ಹೋಗಿದ್ದರು. ಇದನ್ನು ತಿಳಿದ ಯುವತಿಯ ತಂದೆ-ತಾಯಿ ಅಲ್ಲಿಗೆ ಹೋಗಿ ವೈದ್ಯನ ಪೋಷಕರ ಹೆಸರು ವಿಳಾಸ ಪಡೆದು ಇಬ್ಬರಿಗೂ ಬುದ್ಧಿ ಹೇಳುವ ನೆಪ ಮಾಡಿ ಹೊರಬಂದಿದ್ದಾರೆ.

ಬಳಿಕ ದಂಪತಿಯು ವೈದ್ಯನ ತಾಯಿ ಮಲ್ಲೇಶ್ವರಂನ ಎಂಇಎಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿರುವ ವಿಜಯನಗರದ ಆಶಾಲತಾ ಅವರಿಗೆ ಮೊಬೈಲ್ ಕರೆ ಮಾಡಿ ನಿಮ್ಮ ಮಗ ನಮ್ಮ ಮಗಳ ಜೊತೆ ಇರುವ ಖಾಸಗಿ ವಿಡಿಯೋಗಳಿವೆ ೧ ಕೋಟಿ ಹಣ ನೀಡುವಂತೆ ಬ್ಲಾಕ್ ಮೇಲ್ ಮಾಡಿದ್ದಾರೆ. ಹಣ ನೀಡದಿದ್ದರೆ ಫೋಟೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

ದಂಪತಿಯ ಬೆದರಿಕೆಗೆ ಹೆದರಿ ಅವರನ್ನು ಭೇಟಿ ಮಾಡಲು ಹೋಟೆಲ್‌ಗೆ ತೆರಳಿದ್ದರು. ಈ ವೇಳೆ ದಂಪತಿ ನಮ್ಮ ಮಗಳು ಈಗ ಗರ್ಭಿಣಿಯಾಗಿದ್ದಾಳೆ. ಅದಕ್ಕೆ ನಿಮ್ಮ ಪುತ್ರನೇ ಕಾರಣ. ಇದಕ್ಕೆ ಸಾಕ್ಷಿಯಾಗಿ ನಿಮ್ಮ ಮಗ ನಮ್ಮ ಮಗಳ ಜೊತೆ ಲಾಡ್ಜ್ ನಲ್ಲಿ ಇರುವ ವಿಡಿಯೋಗಳಿವೆ. ನಮ್ಮ ಮಗಳಿಗೆ ಆದ ಅನ್ಯಾಯದ ಬಗ್ಗೆ ಮಾಧ್ಯಮಗಳ ಬಳಿಕ ಹೋಗಿ ನ್ಯಾಯ ಕೇಳುತ್ತೇವೆ. ಮಾಧ್ಯಮಗಳ ಬಳಿ ಹೋಗಬಾರದು ಎಂದರೆ ನಮಗೆ ೧ ಕೋಟಿ ರೂ. ನೀಡಿ ಸುಮ್ಮನಾಗುತ್ತೆವೆ ಎಂದಿದ್ದಾರೆ.

ವೈದ್ಯನ ಪೋಷಕರು ಮರ್ಯಾದೆಗೆ ಅಂಜಿ ದಂಪತಿಗೆ ಮೊದಲು ೨೨ ಲಕ್ಷ ರೂ. ಚೆಕ್ ನೀಡಿದ್ದಾರೆ. ನಂತರ ಮರುದಿನ ದಂಪತಿ ಮತ್ತೆ ಕರೆ ಮಾಡಿ ಮಗಳಿಗೆ ಗರ್ಭಪಾತ ಮಾಡಿಸಲು ವೈದ್ಯರು ೨೦ ಲಕ್ಷ ರೂ. ಆಗುತ್ತೆ ಎಂದು ಹೇಳಿದ್ದಾರೆ. ಈಗ ನೀವು ೨೦ ಲಕ್ಷ ರೂ. ಕೊಡಿ ಎಂದು ದಂತ ವೈದ್ಯನಪೋಷಕರಿಗೆ ಒತ್ತಾಯಿಸಿದ್ದಾರೆ.

ಈ ವೇಳೆ ವೈದ್ಯನ ಪೋಷಕರು ಕವಿತಾ ಬ್ಯಾಂಕ್ ಖಾತೆಗೆ ಹಣ ವರ್ಗಾಹಿಸಿದ್ದಾರೆ. ದಂಪತಿ ಮತ್ತೆ ಹಣಕ್ಕೆ ಒತ್ತಾಯ ಮಾಡಿದ ವೇಳೆ ಬೇಸತ್ತಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.

ಯುವಕನ ಪೋಷಕರು ತಮ್ಮ ದೂರಿನಲ್ಲಿ ದಂಪತಿ ಬ್ಲಾಕ್‌ಮೇಲ್ ಮಾಡಿ ಐದು ತಿಂಗಳಲ್ಲಿ ಬರೋಬ್ಬರಿ ೪೨ ಲಕ್ಷ ರೂ. ಪಡೆದಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಈ ಬಗ್ಗೆ ಮಲ್ಲೇಶ್ವರಂ ಪೊಲೀಸರು ಪ್ರಕರಣ ದಾಖಲಿಸಿ ದಂಪತಿಯನ್ನು ಬಂಧಿಸಿ ಯುವತಿಯ ವಿಚಾರಣೆ ನಡೆಸಿದ್ದಾರೆ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.

Leave a Comment