ಥೆರಮೋಸ್ಕ್ಯಾನ್ ವಿಶೇಷ ಯಂತ್ರಕ್ಕೆ ಚಾಲನೆ

ಬೀದರ್,ಆ.10-ನಗರದ ಗುಂಪಾ ರಸ್ತೆಯಲ್ಲಿರುವ ಡಾ.ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಥೆರಮೋಸ್ಕ್ಯಾನ್ ವಿಶೇಷ ಯಂತ್ರಕ್ಕೆ ಚಾಲನೆ ನೀಡಲಾಯಿತು.

ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಅವರು ಪೂಜೆ ಸಲ್ಲಿಸುವುದರ ಮೂಲಕ ಯಂತ್ರಕ್ಕೆ ಚಾಲನೆ ನೀಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಆಸ್ಪತ್ರೆಯ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಮಾತನಾಡಿ ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ 16.5 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ವಿಶೇಷ ಯಂತ್ರವನ್ನು ಖರೀದಿಸಲಾಗಿದ್ದು, ಇದು ಮನುಷ್ಯನ ಸಕ್ಕರೆ ಕಾಯಿಲೆಯ ಪ್ರಮಾಣವನ್ನು ಸ್ಕ್ಯಾನ್ ಮಾಡುವ ಮೂಲಕ ಗುರುತಿಸುತ್ತದೆ. ಹೆಣ್ಣು ಮಕ್ಕಳಲ್ಲಿ ಕಂಡು ಬರುವ ಸ್ತನ ಕ್ಯಾನ್ಸರ್, ಕೀಲು ನೋವು ಗುರುತಿಸುತ್ತದೆ ಎಂದು ತಿಳಿಸಿದರು.

ಬಿಪಿಎಲ್ ಮತ್ತು ಯಶಸ್ವಿನಿ ಕಾರ್ಡ್ ಹೊಂದಿದ ರೋಗಿಗಳಿಗೆ 500 ರೂಪಾಯಿ ರಿಯಾಯಿತಿ ದರದಲ್ಲಿ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿದರು.

ಆಂಧ್ರ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ವಿ.ವಿದ್ಯಾಸಾಗರ, ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಕೃಷ್ಣಾರೆಡ್ಡಿ, ಹಿರಿಯ ವೈದ್ಯರಾದ ಡಾ.ಬಿ.ಎಸ್.ಪ್ರಭಾ, ಡಾ.ಮಲ್ಲಿಕಾರ್ಜುನ ಸ್ವಾಮಿ, ಡಾ.ವೈಜನಾಥ ತುಗಾವೆ, ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಚಿನ್ನಮ್ಮ, ಡಾ.ಲಕ್ಷ್ಮಿ ಜಾಬಶೆಟ್ಟಿ, ಡಾ.ರಘುನಾಥ ಮತ್ತು ಹರೀತ್ ಪಾಟೀಲ ಇದ್ದರು.

Leave a Comment