ತ್ರಿಷ ಭರತನಾಟ್ಯ ರಂಗಾರೋಹಣ

ಲಾಸ್ಯವರ್ಧನ ನೃತ್ಯ ಶಾಲೆಯ ಮತ್ತೊಂದು ಹೆಮ್ಮೆಯ ಅರ್ಪಣೆಗೆ ವೇದಿಕೆ ಸಜ್ಜುಗೊಂಡಿದೆ. ಗುರು ಡಾ. ಮಾಲಿನಿ ರವಿಶಂಕರ್‌ರವರ   ಶಿಷ್ಯೆ ಕುಮಾರಿ ತ್ರಿಷಾ ರಘುರಾಂ  ಅವರ ವೈಶಿಷ್ಟ್ಯಪೂರ್ಣ  ಭರತನಾಟ್ಯ ರಂಗಾರೋಹಣ ಕಾರ್ಯಕ್ರಮ ನವೆಂಬರ್ ೨೪ ಭಾನುವಾರದಂದು ಬೆಂಗಳೂರಿನ ತೆಲುಗು ವಿಜ್ಞಾನ ಸಮಿತಿ ಆಡಿಟೋರಿಯಂನಲ್ಲಿ ನಡೆಯಲಿದೆ. ಇದು ಲಾಸ್ಯವರ್ಧನದ ಹತ್ತನೆಯ ರಂಗಾರೋಹಣವಾಗಿದ್ದು ವಿಭಿನ್ನ ರೀತಿಯಲ್ಲಿ ಮೂಡಿಬರಲಿದೆ. ಈ ಹಿಂದೆ ರಂಗಾರೋಹಣ ಮಾಡಿರುವ ಒಂಭತ್ತು ನರ್ತಕಿಯರು ನರ್ತಿಸುವ ಮೂಲಕ ಆರಂಭವಾಗುವ ಈ ಕಾರ್ಯಕ್ರಮದಲ್ಲಿ ದಶರಂಗಾರೋಹಣದ ನರ್ತಕಿ ಕುಮಾರಿ ತ್ರಿಷಾ ಅವರಿಗೆ  ಶುಭ ಹಾರೈಸಲಿದ್ದಾರೆ. ರಂಗಾರೋಹಣದ ಮೊದಲರ್ಧ ಭಾಗದಲ್ಲಿ ಶ್ರೀಕೃಷ್ಣನನ್ನು ಕುರಿತ ನೃತ್ಯಗಳನ್ನು ಪ್ರಸ್ತುತಪಡಿಸಿದರೆ  ಹಾಗೂ ಧ್ವಿತೀಯಾರ್ಧವು ಶಿವನಿಗೆ ಅರ್ಪಣೆಯಾಗಲಿದೆ.

    ಗುರು ಡಾ. ಮಾಲಿನಿ ರವಿಶಂಕರ್‌ರವರ ಶಿಷ್ಯೆಯಾದ ಕುಮಾರಿ ತ್ರಿಷಾ ರಘುರಾಂ, ಸಿಂಧಿ ಪ್ರೌಢಶಾಲೆಯಲ್ಲಿ  ೯ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದು ಭರತನಾಟ್ಯವನ್ನು ಕಲಿಯುತ್ತಿದ್ದಾಳೆ.  ಶಾಸ್ತ್ರೀಯ ಸಂಗೀತವನ್ನು ಗುರು ಲಲಿತಾ ಧ್ವಜನ್ ಅವರ ಬಳಿ ಅಭ್ಯಾಸ ಮಾಡುತ್ತಿದ್ದಾಳೆ. ೨೦೧೮ರಲ್ಲಿ ಭರತನಾಟ್ಯ ಜ್ಯೂನಿಯರ್ ಪರೀಕ್ಷೆಯಲ್ಲಿ ಶೆಕಡಾ ೯೫ ರಷ್ಟು ಅಂಕಗಳನ್ನು  ಗಳಿಸಿದ್ದು ಓದಿನಲ್ಲಿಯೂ  ತನ್ನನ್ನು ಗುರುತಿಸಿಕೊಂಡಿದ್ದಾಳೆ.  ಗಂಧರ್ವ ಮಹಾವಿದ್ಯಾಲಯ ನಡೆಸುವ ಪ್ರವೇಶಿಕಾ ಪ್ರಥಮ ಹಾಗೂ ಪೂರ್ಣ ಭರತನಾಟ್ಯ ಪರೀಕ್ಷೆಗಳಲ್ಲಿ  ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾಳೆ.  ಇಂಡೋ-ಚೈನಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಕರ್ನಾಟಕವನ್ನು ಪ್ರತಿನಿಧಿಸಿದ ಕೀರ್ತಿಗೆ ಪಾತ್ರಳಾಗಿದ್ದಾಳೆ.

       ಹಲವಾರು ಕಾರ್ಯಕ್ರಮಗಳಲ್ಲಿ ನೃತ್ಯ ಪ್ರದರ್ಶನ ನೀಡಿರುವ ಈಕೆ, ಲಾಸ್ಯವರ್ಧನ ನೃತ್ಯಶಾಲೆಯ ನೃತ್ಯರೂಪಕಗಳಾದ ಚೌತಿ ಚಂದ್ರ, ಕನಕ ವೈಭವ, ರಾಮಕೃಷ್ಣ ಭಜನೆ, ಮೂಷಿಕ ಕನ್ಯೆ, ಸಂಖ್ಯಾಸಮಾಗಮಗಳಲ್ಲಿ ಪ್ರಮುಖ ಪಾತ್ರವಹಿಸಿರುತ್ತಾಳೆ.

    ಕುಮಾರಿ ತ್ರಿಷಾ ರಘುರಾಂ ಭರತನಾಟ್ಯದಲ್ಲಿ ಸ್ವರ ಕೋಕಿಲಾ ಜಾಹ್ನವಿ ಮೆಮೋರಿಯಲ್  ಪ್ರಶಸ್ತಿ, ರಾಜ್ಯಮಟ್ಟದ ಕಲ ತರಂಗ ಚಿಗುರು ಪ್ರಶಸ್ತಿ, ಸನೂಪುರ ನೃತ್ಯೋತ್ಸವದಲ್ಲಿ ಬಹುಮಾನ. ಹೀಗೆ ಹಲವಾರು ರಾಜ್ಯಮಟ್ಟದ ಮತ್ತು ರಾಷ್ಟ್ರಮಟ್ಟದ ನೃತ್ಯ ಸ್ಪರ್ಧೆಗಳಲ್ಲಿ ಪ್ರಶಸ್ತಿ ಗಳಿಸಿ ವಿನೂತನ ಸಾಧನೆ ಮಾಡಿದ್ದಾಳೆ.

     ಐಸಿಸಿಆರ್‌ನ  ಪ್ರಾದೇಶಿಕ ನಿರ್ದೇಶಕರಾದ ಶ್ರೀ ವೇಣುಗೋಪಾಲ್ ಅವರು, ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಾದ ವಿದುಷಿ ಲಲಿತಾ ಜೆ ರಾವ್, ಭರತಾಂಜಲಿ ನೃತ್ಯ ಶಾಲೆಯ ಕಲಾ ನಿರ್ದೇಶಕಿ ಗುರು ಶ್ರೀಮತಿ ಸೀತಾ ಗುರುಪ್ರಸಾದ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

Leave a Comment