ತ್ರಿಶಂಕು ಸ್ಥಿತಿಯಲ್ಲಿ ಅನರ್ಹ ಶಾಸಕರು ತುರ್ತು ವಿಚಾರಣೆಗೆ ಸುಪ್ರೀಂ ನಕಾರ

ನವದೆಹಲಿ, ಸೆ. ೧೨- ತುರ್ತು ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳಲು ಮತ್ತೆ ನಿರಾಕರಿಸುವ ಮೂಲಕ ಅನರ್ಹ ಶಾಸಕರಿಗೆ ಮತ್ತೊಮ್ಮೆ ಸುಪ್ರೀಂಕೋರ್ಟ್ ಶಾಕ್ ನೀಡಿದೆ. ಇದರಿಂದಾಗಿ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಿದ 17 ಮಂದಿ ಅನರ್ಹ ಶಾಸಕರಿಗೆ ಕಾನೂನು ಸಮರದಲ್ಲಿ ಭಾರಿ ಹಿನ್ನೆಡೆಯಾಗಿದೆ.

ಅನರ್ಹ ಶಾಸಕರ ಪರ ವಾದ ಮಂಡಿಸುತ್ತಿರುವ ಹಿರಿಯ ವಕೀಲ ದ್ವಿವೇದಿ ಅವರು ತುರ್ತು ವಿಚಾರಣೆ ಕೈಗೆತ್ತಿಕೊಳ್ಳುವಂತೆ ಸತತ 4ನೇ ಬಾರಿ ಮನವಿ ಮಾಡಿದರು. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸಿದ್ದನ್ನು ಪ್ರಶ್ನಿಸಿ, 17 ಮಂದಿ ಶಾಸಕರು ಸುಪ್ರೀಂಕೋರ್ಟ್‌ಗೆ ಮೊರೆ ಹೋಗಿದ್ದರು. ಈ ಅರ್ಜಿಯ ತುರ್ತು ವಿಚಾರಣೆ ನ‌‌ಡೆಸುವಂತೆ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ ಎನ್.ವಿ. ರಮಣ ಅವರಿದ್ದ ನ್ಯಾಯಪೀಠದಲ್ಲಿಂದು ನಡೆಯಿತು.

ತುರ್ತು ವಿಚಾರಣೆ ಕೈಗೆತ್ತಿಕೊಳ್ಳಬೇಕೆಂಬ ವಕೀಲರ ಮನವಿಗೆ ಚಾಟಿ ಬೀಸಿದ ನ್ಯಾಯಮೂರ್ತಿ, ಈ ಅರ್ಜಿಯ ವಿಚಾರಣೆಯನ್ನು ತುರ್ತಾಗಿ ಕೈಗೆತ್ತಿಕೊಳ್ಳುವ ಅಗತ್ಯವೇನಿದೆ. ನ್ಯಾಯಾಲಯದಲ್ಲಿ ದಾಖಲಾಗಿರುವ ಸರದಿ ಪ್ರಕಾರವೇ ವಿಚಾರಣೆ ನಡೆಸುತ್ತೇವೆ. ನಿಮ್ಮ ಸರದಿ ಬರುವತನಕ ಕಾಯಬೇಕಾಗುತ್ತದೆ. ನೀವು ಹೇಳಿದ ತಕ್ಷಣ ತುರ್ತು ವಿಚಾರಣೆ ನಡೆಯಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಎನ್.ವಿ. ರಮಣ ಖಡಕ್ ಮಾತುಗಳಲ್ಲಿ ತಿಳಿಸಿದ್ದಾರೆ.

ಈ ಹಿಂದೆ ಅನರ್ಹ ಶಾಸಕರ ಅರ್ಜಿ ವಿಚಾರಣೆ ನಿಗದಿಯಾಗಿದ್ದ ದಿನಾಂಕವನ್ನು ರದ್ದು ಮಾಡಲಾಗಿತ್ತು. ರದ್ದು ಮಾಡಿದ ಸುಪ್ರೀಂಕೋರ್ಟ್ ಆದೇಶ ಪ್ರಶ್ನಿಸಿ 17 ಅನರ್ಹ ಶಾಸಕರು ಅರ್ಜಿಯನ್ನು ಪಟ್ಟಿಯಲ್ಲಿ ಕೈಬಿಡದಂತೆ ವಕೀಲ ರಾಕೇಶ್ ದ್ವಿವೇದಿ ನ್ಯಾಯಾಲಯಕ್ಕೆ ಮನವಿ ಮಾಡಿದರು. ಆದರೆ, ಅನರ್ಹ ಶಾಸಕರ ಪರ ವಕೀಲರ ಮನವಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿತ್ತು.

ಈ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆ ನಡೆಯುವವರೆಗೂ ಯಾವ ತೀರ್ಪು ಬರಲಿದೆ ಎನ್ನುವುದು ಕಾದು ನೋಡಬೇಕಾದ ಪರಿಸ್ಥಿತಿಯುಂಟಾಗಿದೆ. ಹೀಗಾಗಿ, ಅನರ್ಹ ಶಾಸಕರು ಅಡಕತ್ತರಿಯಲ್ಲಿ ಸಿಕ್ಕಿ ಹಾಕಿಕೊಂಡು ತಮ್ಮ ಮುಂದಿನ ರಾಜಕೀಯ ಭವಿಷ್ಯದ ಬಗ್ಗೆ ಚಿಂತಾಕ್ರಾಂತರಾಗಿದ್ದಾರೆ.

ಸಮ್ಮಿಶ್ರ ಸರ್ಕಾರ ಪತನಗೊಳಿಸಿ, ಬಿಜೆಪಿ ಸರ್ಕಾರ ರಚನೆಗೆ ದಾರಿ ಮಾಡಿಕೊಟ್ಟಿದ್ದ ಈ ಅನರ್ಹ ಶಾಸಕರಿಗೆ ದಿಕ್ಕೇ ತೋಚದಂತಾಗಿದೆ. ಬಿಜೆಪಿ ನೀಡಿದ ಭರವಸೆ ನಂಬಿಕೊಂಡು ಕಾಂಗ್ರೆಸ್-ಜೆಡಿಎಸ್ ಪಕ್ಷವನ್ನು ತೊರೆದು ಅನರ್ಹ ಶಾಸಕರಾಗಿದ್ದು, ಈ ಪ್ರಕರಣ ಸದ್ಯದ ಮಟ್ಟಿಗೆ ಇತ್ಯರ್ಥವಾಗದೆ ಈ ಮುಖಂಡರು ತ್ರಿಶಂಕು ಸ್ಥಿತಿ ಅನುಭವಿಸುವಂತಾಗಿದೆ.

ಈ ಮಧ್ಯೆ ಅನರ್ಹ ಶಾಸಕರ ಪರ ವಕೀಲ ಮುಕುಲ್ ರೋಹಟಗಿ, ಸುಪ್ರೀಂಕೋರ್ಟ್‌ನಲ್ಲಿ ಈ ಪ್ರಕರಣವನ್ನು ಪ್ರಸ್ತಾಪಿಸದಿರಲು ನಿರ್ಧರಿಸಿದ್ದಾರೆ. ಕೇಂದ್ರ ಸರ್ಕಾರದ ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಅನರ್ಹ ಶಾಸಕರ ಪರವಾಗಿ ಸುಪ್ರೀಂಕೋರ್ಟ್‌ನಲ್ಲಿ ವಾದ ಮಂಡಿಸಲು ಒಪ್ಪಿಕೊಂಡಿದ್ದಾರೆ. ಆದರೆ, ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ದ್ವಿಸದಸ್ಯ ಪೀಠದ ಮುಂದೆ ಅರ್ಜಿ ವಿಚಾರಣೆ ನಡೆಸುವಂತೆ ಮನವಿ ಮಾಡಲು ರೋಹಟಗಿ ಹಿಂದೇಟು ಹಾಕಿದ್ದರು ಎಂದು ಮೂಲಗಳು ತಿಳಿಸಿವೆ.

ಅನರ್ಹ ಶಾಸಕರ ಒತ್ತಡಕ್ಕೆ ಮಣಿದು ಇಂದು ಪ್ರಕರಣ ದಾಖಲು ಮಾಡಲು ಒಪ್ಪಿಕೊಂಡಿದ್ದರು. ಅವರ ಪರ ಕಿರಿಯ ವಕೀಲರು ಎಲ್ಲ ಸಿದ್ಥತೆ ಮಾಡಿಕೊಂಡಿದ್ದರು ಎನ್ನಲಾಗಿದೆ. ಆದರೆ, ಕಡೇ ಗಳಿಗೆಯಲ್ಲಿ ಮುಕುಲ್ ರೋಹಟಗಿ, ತಮ್ಮ ಕಿರಿಯ ವಕೀಲರಿಗೆ ಈ ಪ್ರಕರಣ ದಾಖಲಿಸುವುದು ಬೇಡ ಎಂದು ಸೂಚಿಸಿದ್ದಾರೆಂದು ಹೇಳಲಾಗಿದೆ.
ಈ ಹಿಂದೆ ಅನರ್ಹ ಶಾಸಕರ ಪ್ರಕರಣವನ್ನು ತುರ್ತು ವಿಚಾರಣೆಗೊಳಪಡಿಸುವಂತೆ ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ನ್ಯಾಯಪೀಠದ ಮುಂದೆ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿತ್ತು. ಈ ಎಲ್ಲ ವಿದ್ಯಮಾನಗಳ ಹಿನ್ನೆಲೆಯಲ್ಲಿ ಅನರ್ಹ ಶಾಸಕರ ಭವಿಷ್ಯ ಡೋಲಾಯಮಾನವಾಗಿದೆ.

Leave a Comment