ತ್ರಿವಳಿ ಕೊಲೆ

=

ಸೇಡಂನ ಮೇದಕ್ ನಲ್ಲಿ ರಕ್ತದೋಕುಳಿ

ಕಲಬುರಗಿ,ಜೂ.12-ಹುಟ್ಟುತ್ತ ಅಣ್ಣತಮ್ಮಂದಿರು, ಬೆಳೆಯುತ್ತ ದಾಯಾದಿಗಳು ಎಂಬ ಮಾತಿದೆ. ಸೇಡಂ ತಾಲ್ಲೂಕಿನ ಮೇದಕ್ ಗ್ರಾಮದಲ್ಲಿ ದಾಯಾದಿಗಳ ನಡುವೆ ನಡೆದ ಕಲಹ ತ್ರಿವಳಿ ಕೊಲೆಯಲ್ಲಿ ಅಂತ್ಯವಾದ ಘಟನೆ ಇಂದು ಬೆಳಿಗ್ಗೆ ನಡೆದಿದೆ.

ಮೇದಕ್ ಗ್ರಾಮದ ಹೊಲವೊಂದರಲ್ಲಿ ಮೂರು ಜನರನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಲಾಗಿದ್ದು, ತಂದೆ ಮತ್ತು ಮಗ ಸ್ಥಳದಲ್ಲೇ ಮೃತಪಟ್ಟಿದ್ದು, ತೀವ್ರವಾಗಿ ಗಾಯಗೊಂಡ ಮತ್ತೊರ್ವ ಮಗ ಸೇಡಂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.

ಕೊಲೆಯಾದವರನ್ನು ಮಲ್ಕಪ್ಪ ಚಿನ್ನಯ್ಯ (60), ಶಂಕ್ರಪ್ಪ ಮಲ್ಕಪ್ಪ (26) ಮತ್ತು ಚಿನ್ನಪ್ಪ ಮಲ್ಕಪ್ಪ (27) ಎಂದು ಗುರುತಿಸಲಾಗಿದೆ. ಕೊಲೆಗೆ ನಿಖರ ಮಾಹಿತಿ ತಿಳಿದುಬಂದಿಲ್ಲವಾದರೂ ಜಮೀನು ವಿವಾದದ ಹಿನ್ನೆಲೆಯಲ್ಲಿ ನಡೆದ ದಾಯಾದಿಗಳ ಕಲಹವೇ ಕೊಲೆಗೆ ಕಾರಣ ಎನ್ನಲಾಗಿದೆ.

ದಾಯಾದಿಗಳಾದ ಆಶಪ್ಪ ಚಿನ್ನಯ್ಯ, ರಾಮಪ್ಪ ಚಿನ್ನಯ್ಯ, ಚಿನ್ನಪ್ಪ ಚಿನ್ನಯ್ಯ, ಲಾಲಪ್ಪ ಚಿನ್ನಯ್ಯ, ಹಣಮಂತ ಆಳಪ್ಪ, ಶರಣಪ್ಪ ಚನ್ನಪ್ಪ, ಬಸಪ್ಪ ಚನ್ನಪ್ಪ, ಸೀನು ರಾಮಪ್ಪ ಸೇರಿದಂತೆ ಒಟ್ಟು ಎಂಟು ಜನ ಸೇರಿ ಮಲ್ಕಪ್ಪ ಚಿನ್ನಯ್ಯ, ಶಂಕ್ರಪ್ಪ ಮಲ್ಕಪ್ಪ ಮತ್ತು ಚಿನ್ನಪ್ಪ ಮಲ್ಕಪ್ಪ ಅವರನ್ನು  ಕೊಲೆ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸ್ಥಳಕ್ಕೆ ಸಿಪಿಐ ತಮ್ಮಾರಾಯ ಪಾಟೀಲ ಭೇಟಿ ನೀಡಿದ್ದು, ಘಟನೆಯ ಮಾಹಿತಿ ಕಲೆ ಹಾಕುತ್ತಿದ್ದಾರೆ.  ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment