ತ್ಯಾಜ್ಯ ವಿಲೇವಾರಿ ಘಟಕದ ಅವ್ಯವಸ್ಥೆ: ಆಕ್ರೋಶ

ಮೂಡಬಿದಿರೆ, ಸೆ. ೯- ಕರಿಂಜೆ ಗ್ರಾಮದ ಮಾರಿಂಜ ಗುಡ್ಡೆಯಲ್ಲಿ ಇರುವ ಮೂಡುಬಿದಿರೆ ಪುರಸಭೆಯ ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ವಹಣೆಯಲ್ಲಿ ಅವ್ಯವಹಾರ ಮತ್ತು ಅಸಮರ್ಪಕ ನಿರ್ವಹಣೆಯ ಬಗ್ಗೆ ಸಾರ್ವಜನಿಕ ದೂರಿನ ಹಿನ್ನಲೆಯಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಪುರಸಭೆಯ ಮುಖ್ಯಾಧಿಕಾರಿ ಮತ್ತು ಪರಿಸರ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಶಾಸಕರು ಯಾರಿಗೂ ಮಾಹಿತಿ ನೀಡದೆ ಮಾಧ್ಯಮಗಳೊಂದಿಗೆ ಘಟಕಕ್ಕೆ ದಿಢೀರ್ ಭೇಟಿ ನೀಡಿದ ಸಂದರ್ಭದಲ್ಲಿ ಮಿಶ್ರಗೊಂಡಿರುವ ಮಾಂಸ ಮತ್ತು ತರಕಾರಿಯ ತ್ಯಾಜ್ಯವು ರಾಶಿ ಬಿದ್ದಿದ್ದು ವಾಸನೆ ಬೀರುತ್ತಿತ್ತು ಹಾಗೂ ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ಗಳ ರಾಶಿಯು ಓಪನ್ ಆಗಿ ರಾಶಿ ಬಿದ್ದಿದ್ದು ಈ ಅವ್ಯವಸ್ಥೆಯನ್ನು ಕಂಡು ಮುಖ್ಯಾಧಿಕಾರಿ ಶೀನ ನಾಯ್ಕ್ ಮತ್ತು ಪರಿಸರ ಅಧಿಕಾರಿ ಶಿಲ್ಪಾ ಅವರನ್ನು ಸ್ಥಳಕ್ಕೆ ಕರೆದರು. ಅವ್ಯವಸ್ಥೆಯ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕರಿಗೆ ಅಧಿಕಾರಿಗಳು ಕಾರ್ಮಿಕರ ಕೊರತೆಯ ಬಗ್ಗೆ ವಿವರಿಸಿದರು. ಕಾರ್ಮಿಕರ ಸಂಖ್ಯೆಯ ಬಗ್ಗೆ ಮುಖ್ಯಾಧಿಕಾರಿಗಳನ್ನು ಶಾಸಕರು ಪ್ರಶ್ನಿಸಿದ್ದು ಈ ಸಂದರ್ಭ ಮುಖ್ಯಾಧಿಕಾರಿ ಬಳಿ ಉತ್ತರವಿರಲಿಲ್ಲ. ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಕೋಟ್ಯಾನ್ ಎಲ್ಲವನ್ನು ಎಲ್ಲರಿಂದ ಸರಿ ಮಾಡಲು ಸಾಧ್ಯವಿಲ್ಲ ನಿಜ ಆದರೆ ತ್ಯಾಜ್ಯ ನಿರ್ವಹಣಾ ಘಟಕವೇ ಮಾರಕ ರೋಗಗಳನ್ನು ಹರಡುವ ಸ್ಥಿತಿಯಲ್ಲಿದೆ. ಕಾರ್ಮಿಕರ ಕೊರತೆಯಿಲ್ಲ. ಅಧಿಕಾರಿಗಳು ಅವರ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಇದರಿಂದಾಗಿ ಘಟಕದ ಆಸುಪಾಸಿನ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ. ಅಧಿಕಾರಿಗಳು ಎರಡು ದಿನಕ್ಕೊಮ್ಮೆ ಭೇಟಿ ನೀಡಿ ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು ಇನ್ನೊಮ್ಮೆ ದಿಢೀರ್ ಭೇಟಿ ನೀಡಲಾಗುವುದು ಎಂದು ಎಚ್ಚರಿಸಿದರು.

Leave a Comment