ತೋರಿಕೆ, ಆಡಂಬರದ ಬದುಕು ಬೇಡ

ತುಮಕೂರು, ಆ. ೧- ವಚನಗಳಂತೆ ಬದುಕುತ್ತಿರುವವರು ಇಲ್ಲವಾಗಿದ್ದಾರೆ. ಒಂದು ವೇಳೆ ಬದುಕಲು ಮುಂದಾದರೆ ಉಳಿಗಾಲವಿಲ್ಲ ಎಂಬಂತಾಗಿದೆ ಎಂದು ಹಿರಿಯ ವಕೀಲ ಹಾಗೂ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಉಪಾಧ್ಯಕ್ಷ ಎಸ್.ವಿ. ರವೀಂದ್ರನಾಥ ಠಾಗೂರ್ ಹೇಳಿದರು.

ನಗರದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್, ವೀರಶೈವ ಗುರುಕುಲ ವಿದ್ಯಾರ್ಥಿ ನಿಲಯ, ಜಗಜ್ಯೋತಿ ಬಸವೇಶ್ವರ ಟ್ರಸ್ಟ್, ಹೆಂಜೇಗೌಡ, ಹೆಂಜಮ್ಮ ಪ್ರೊ. ಸಿ.ಎಚ್. ಮರಿದೇವರು ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಶರಣರ ವೈಚಾರಿಕ ಸಂದೇಶ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ನಾವಿಂದು ಆಧುನಿಕ ಕಾಲಘಟ್ಟದಲ್ಲೂ ವಚನಗಳ ಆಚರಣೆಯಲ್ಲಿ ವಿಫಲರಾಗಿರುವುದು ವಿಷಾದಕರ ಸಂಗತಿ. ಇಂದು ತೋರಿಕೆಗಾಗಿ, ಆಡಂಬರಕ್ಕಾಗಿ ಬದುಕುವುದು ಹೆಚ್ಚಾಗಿದೆ. ಬರೀ ಹೇಳಿಕೆಯಲ್ಲೇ ಕಾಲ ಕಳೆದು, ಆಚರಣೆಯಲ್ಲಿ ವಿಫಲರಾಗಿರುವ ಇಂದಿನ ಸಮಾಜ ದುರಂತದತ್ತ ಸಾಗುತ್ತಿದೆ ಎಂದರು.

ಪ್ರಸ್ತುತ ಧರ್ಮ ಮಾರಾಟದ ಸರಕಾಗಿದೆ. ಪರಿಣಾಮ ವ್ಯವಸ್ಥೆ ಹದಗೆಟ್ಟಿದೆ. ಧರ್ಮ ಕೇವಲ ಮಾತಿಗೆ ಸೀಮಿತವಾಗಿದೆ. ವಾಸ್ತವಿಕ ಕಾಲಘಟ್ಟಕ್ಕೆ ಅನ್ವಯ ಮಾಡಿಕೊಳ್ಳಲು ಕಷ್ಟಕರವಾದ ಧರ್ಮಗಳು, ಧರ್ಮ ಹೇಗಾಗಲು ಸಾಧ್ಯ ಎಂದು ಪ್ರಶ್ನಿಸಿದ ಠಾಗೂರ್, ಈ ಕುರಿತು ವಿಚಾರ ಮಾಡುವ ಸಮಯ ಎಂದೂ ಕೂಡ ಇದ್ದೇ ಇದೆ ಎಂದರು.

ಸುಮಾರು 250 ವಚನಕಾರರಲ್ಲಿ 30 ಮಂದಿ ಸ್ತ್ರೀ ವಚನಕಾರ್ತಿಯರು ಇರುವುದು ಹೆಮ್ಮೆಪಡುವ ಸಂಗತಿಯೇ ಹೌದು. ಆದರೆ ಇಂದು ಆ ವಚನಕಾರರು, ವಚನಕಾರ್ತಿಯರ ಅನುಸರಣೆ ಎಲ್ಲಿದೆ, ಯಾರಲ್ಲಿದೆ ಎಂಬುದರ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಈ ಹಿನ್ನೆಲೆಯಲ್ಲಿ ಇಂತಹ ವಿಚಾರ ಸಂಕಿರಣಗಳು ಅರ್ಥ ಕಂಡುಕೊಳ್ಳಲು ಸಹಕಾರಿಯಾಗಬಲ್ಲವು ಎಂದು ಹೇಳಿದರು.

ಅರಿವು ಮಾತ್ರ ಅನಂತ ಆನಂದ ನೀಡಬಲ್ಲದೇ ಹೊರತು ಹಣವಲ್ಲ. ಹಣ ಕೇವಲ ಇಂದಿನ ಸಮಾಜದಲ್ಲಿ ಹೊಟ್ಟೆಪಾಡಿಗಾಗಿ ಆಯ್ಕೆ ಮಾಡಿಕೊಂಡಿರುವ
ಸಾಧನ ಅಷ್ಟೆ. ಈ ಕುರಿತು ನಾವು ಒಳಮನಸ್ಸಿನಿಂದ ತಿಳಿಯಾಗಿ, ಶಾಂತಸ್ಥಿತಿಯಲ್ಲಿ ನಮ್ಮೊಳಗೇ ನಾವೇ ಕಂಡುಕೊಳ್ಳುವ ಪ್ರಯತ್ನ ಮಾಡಿದಾಗ ಮಾತ್ರ ವಿಶ್ವವನ್ನು ಅರಿಯಬಹುದು ಎಂದರು.

ಶರಣರ ವೈಚಾರಿಕ ಸಂದೇಶ ಕುರಿತು ಉಪನ್ಯಾಸ ನೀಡಿದ ಜಿಲ್ಲಾ ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಲೋಕೇಶ್ವರಿ ಪ್ರಭು, ಶೂದ್ರ ದೇವನಾಗಲಾರ, ದೈವತ್ವಕ್ಕೆ ಏರಲಾರ ಎನ್ನುವ ಸ್ಥಿತಿಯಲ್ಲಿದ್ದ ವೇಳೆಯಲ್ಲಿ ಶರಣರು ಹೊಸ ಸಮಾಜ ನಿರ್ಮಾಣಕ್ಕೆ ಮುಂದಾದರು. ಅವರ ವಚನಗಳು ನವ ಸಮಾಜ ನಿರ್ಮಾಣಕ್ಕೆ ಬುನಾದಿಯಾದವು ಎಂದರು.

ಸತ್ಯ, ಶುದ್ದ , ನೇರ, ನಡೆ-ನುಡಿಯ ವಚನಗಳಲ್ಲಿ ಜನತೆಯ ಹಿತವೇ ಮುಖ್ಯವಾಗಿದ್ದು, ಬೇರಾವುದು ಇಲ್ಲಿಲ್ಲ. ವಚನಗಳು ಜಡ ಸಮಾಜದಲ್ಲಿ ಚಲನಶೀಲತೆ ತಂದವು. ವಚನಗಳು ವರ್ಗರಹಿತ ಸಮಾಜದಿಂದ ಸಮಾಜದ ಉನ್ನತಿ ಸಾಧ್ಯ ಎಂದು ಸಾರಿದವು. ದೇವರನ್ನು ಮುಂದು ಮಾಡಿ ಶೋಷಿಸುವ ಸ್ಥಿತಿಯಿಂದ ಹೊರತರಲು ಇಡೀ ಶರಣ ಸಮೂಹ ಯತ್ನಿಸಿತು ಎಂದ ಲೋಕೇಶ್ವರಿ ಪ್ರಭು, ಒಣಗಿದ ಮರವ, ಬತ್ತಿದ ಜಲವ ಪೂಜಿಸದೆ ಅರಿತು ನಡೆಯಿರಿ ಎಂದು ಶರಣರು ವೈಚಾರಿಕ ಪ್ರಜ್ಞೆ ಮೂಡಿಸಿದರು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿ.ಎನ್. ಬಸವರಾಜಪ್ಪ ವಹಿಸಿದ್ದರು. ಪ್ರೊ. ವೀರಭದ್ರಯ್ಯ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಜಿತ್, ಉದಯಭಾನು ಪ್ರಾರ್ಥಿಸಿದರು. ರೇಣುಕಾರಾಧ್ಯ ಸ್ವಾಗತಿಸಿದರು.

Leave a Comment