ತೊಗರಿಗೆ 7500 ರೂ ಬೆಲೆ ನಿಗದಿಗೆ ಮಾನ್ಪಡೆ ಆಗ್ರಹ

ಕಲಬುರಗಿ ಡಿ 7: ಕೇಂದ್ರ ಸರ್ಕಾರ ತೊಗರಿಗೆ ನಿಗದಿಪಡಿಸಿದ 5675 ಬೆಂಬಲಬೆಲೆಯೊಂದಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಲಾ 1 ಸಾವಿರ ರೂ ಪ್ರೋತ್ಸಾಹಧನ ಸೇರಿಸಿ,ಕ್ಚಿಂಟಾಲ್ ತೊಗರಿಗೆ  ಒಟ್ಟು 7500 ರೂ  ಬೆಲೆ ನೀಡುವಂತೆ ಕರ್ನಾಟಕ ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಮಾರುತಿ ಮಾನ್ಪಡೆ ಸುದ್ದಿಗೋಷ್ಠಿಯಲ್ಲಿ ಇಂದು ಆಗ್ರಹಿಸಿದರು.

ಈ ಸಲ ಕಲಬುರಗಿ ಜಿಲ್ಲೆಯಲ್ಲಿ ಸುಮಾರು 13 ಲಕ್ಷ ಎಕರೆ ಪ್ರದೇಶದಲ್ಲಿ ತೊಗರಿಬೆಳೆಯಲಾಗಿದ್ದು, ಮಳೆಯ ಅಭಾವದಿಂದ ಸುಮಾರು ಶೇ 40 ರಷ್ಟು ಬೆಳೆ ಮಾತ್ರ ಕೈಗೆ ಬರುವ ಅಂದಾಜಿದೆ. ಚಿಂಚೋಳಿ ಸೇಡಂ ಚಿತಾಪುರ ಮತ್ತು ಸ್ವಲ್ಪಮಟ್ಟಿಗೆ ಅಳಂದ ತಾಲೂಕು ಹೊರತುಪಡಿಸಿ ಉಳಿದ ತಾಲೂಕುಗಳಲ್ಲಿ ತೊಗರಿ ಬೆಳೆ ಸೊರಗಿಹೋಗಿದೆ.ಸಂಕಷ್ಟದಲ್ಲಿರುವ ರೈತರನ್ನು ರಕ್ಷಿಸಲು ಗ್ರಾಮಪಂಚಾಯತಿ, ಸಹಕಾರ ಸಂಘ ಮತ್ತು ಆಹಾರ ಉತ್ಪಾದಕರ ಸಂಘಗಳ ಮೂಲಕ ತೊಗರಿ ಖರೀದಿಗೆ ಮುಂದಾಗುವಂತೆ ಸರ್ಕಾರವನ್ನು ಕೋರಿದ್ದೇವೆ.ಈ ಕುರಿತು ಮುಖ್ಯಮಂತ್ರಿಗಳು ಸಹಕಾರ ಸಚಿವರ ಜತೆ ಮಾತುಕತೆ ನಡೆಸಿದ್ದು,ನಫೇಡ್ ಅನುಮತಿ ನೀಡಿದರೆ ಖರೀದಿ ಕೇಂದ್ರ ಶೀಘ್ರದಲ್ಲಿ ಆರಂಭಿಸುವದಾಗಿ ಹೇಳಿದ್ದಾರೆ ಎಂದರು.

ಬೇಳೆಕಾಳು ಆಮದು ನಿಲ್ಲಲಿ:

ಕೇಂದ್ರವು  ಮೊಜಾಂಬಿಕ್ ಕೀನ್ಯಾ ಮೊದಲಾದ ದೇಶದೊಂದಿಗೆ ಬೇಳೆ ಕಾಳು  ಖರೀದಿ ಆಮದು ಒಪ್ಪಂದ ಮಾಡಿಕೊಂಡಿದ್ದು ಈ ಸಾಲಿನಲ್ಲಿ 25 ಲಕ್ಷ ಟನ್ ಆಮದು ಮಾಡಿಕೊಳ್ಳಲಾಗಿದೆ. ಇದು ತೊಗರಿ ಬೆಲೆ ಕುಸಿಯಲು ಪ್ರಮುಖ ಕಾರಣವಾಗಿದೆ.  ಆಮದಿಗೆ ಶೇ 35 ಆಮದು ಸುಂಕ ವಿಧಿಸಿ ರೈತರಿಗೆ ಸಂಬಂಧಿಸಿದ ಆರ್ಥಿಕತೆ ಉಳಿಸಲು ಸರ್ಕಾರ ಮುಂದಾಗಬೇಕು ಎಂದರು.ದೆಹಲಿಯಲ್ಲಿ ರೈತರು ನಡೆಸಿದ ಮಹಾರ್ಯಾಲಿಯ ಬಗ್ಗೆ  ಕೇಂದ್ರ ಸರ್ಕಾರ ಉದಾಸೀನಭಾವ ತಾಳಿತು. ಮುಂದಿನ ಲೋಕಸಭೆ ಚುನಾವಣೆಯ ಕೇಂದ್ರ ವಿಷಯ ಕೃಷಿ ಬಿಕ್ಕಟ್ಟು ಕುರಿತದ್ದಾಗಿರುವದು ಖಂಡಿತ ಎಂದರು

ರೈತ ಸಮಾವೇಶ 12 ರಂದು :

ವಿಭಾಗಮಟ್ಟದ ರೈತ ಸಮಾವೇಶ ಡಿಸೆಂಬರ್ 12 ರಂದು  ಮಧ್ಯಾಹ್ನ 12 ಗಂಟೆಗೆ ನಗರದ ಜಗತ್ ವೃತ್ತದ ಬಳಿ ನಡೆಯಲಿದೆ. ಅಖಿಲ ಭಾರತ ಕಿಸಾನ್ ಸಭಾ  ಅಧ್ಯಕ್ಷ ಡಾ.ಅಶೋಕ ಧಾವಲೆ ಆಗಮಿಸುವರು. ರೈತರ ಜ್ವಲಂತ ಸಮಸ್ಯೆಗಳ ಕುರಿತು ಸಮಾವೇಶದಲ್ಲಿ ಚರ್ಚೆ ನಡೆಯಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಶರಣಬಸಪ್ಪ ಮಮಶೆಟ್ಟಿ, ಅಶೋಕ ಮ್ಯಾಗೇರಿ, ಅಲ್ತಾಫ್ ಇನಾಂದಾರ, ಶಾಂತಪ್ಪ ಪಾಟೀಲ ಉಪಸ್ಥಿತರಿದ್ದರು….

Leave a Comment