ತೊಕ್ಕೊಟ್ಟು ಫ್ಲೈ ಓವರ್ ಅವ್ಯವಸ್ಥೆ ಸರಿಪಡಿಸಲು ಡಿವೈಎಫ್‍ಐ ಒತ್ತಾಯ

ಮಂಗಳೂರು, ಜೂ 13 – ಹಲವು ವರ್ಷಗಳ ನಿಧಾನಗತಿಯ ಕಾಮಗಾರಿಯ ನಂತರ ತೊಕೊಟ್ಟು ಫ್ಲೈ ಓವರ್ ಕೆಲಸ ಪೂರ್ಣಗೊಂಡಿದ್ದು, ಇಂದಿನಿಂದ ಅದರಲ್ಲಿ ವಾಹನ ಸಂಚಾರ ಆರಂಭವಾಗಿದ್ದರೂ ಮಂಗಳೂರಿನಿಂದ ಉಳ್ಳಾಲಕ್ಕೆ ಹೋಗುವ ವಾಹನಗಳಿಗೆ ತಿರುವು ಕೊಡುವ ಬಗ್ಗೆ ಸಮರ್ಪಕ ವ್ಯವಸ್ಥೆ ಮಾಡದಿರುವ ಕಾರಣ ಅಪಘಾತದ ಸಾಧ್ಯತೆಗಳು ಹೆಚ್ಚಿವೆ. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೂಡಲೇ ಗಮನಹರಿಸಿ ತೊಕ್ಕೊಟ್ಟುವಿನಿಂದ ಉಳ್ಳಾಲಕ್ಕೆ ಹೋಗಲು ಸಮರ್ಪಕ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂದು ಉಳ್ಳಾಲ ವಲಯ ಡಿವೈಎಫ್‍ಐ ಒತ್ತಾಯಿಸಿದೆ

ಈ ಭಾಗದ ವಾಹನ ಸವಾರರ ಬಹುದಿನಗಳ ಬೇಡಿಕೆಯಾದ ತೊಕ್ಕೊಟ್ಟು ಫ್ಲೈ ಓವರ್ ಕಾಮಗಾರಿ ಪೂರ್ಣಗೊಳಿಸುವಂತೆ ಡಿವೈಎಫ್‍ಐ ಸಂಘಟನೆ ಹಲವು ಹೋರಾಟಗಳನ್ನು ನಡೆಸಿತ್ತು. ಈ ಹೋರಾಟದಲ್ಲಿ ಪಾಲ್ಗೊಂಡ ಎಲ್ಲಾ ನಾಗರೀಕರಿಗೂ ಸಂಘಟನೆ ಅಭಿನಂದನೆ ಸಲ್ಲಿಸುತ್ತದೆ. ಫ್ಲೈ ಓವರ್ ಪೂರ್ಣಗೊಂಡಿದ್ದರೂ ಅವೈಜ್ಞಾನಿಕ ರೀತಿಯ ಕಾಮಗಾರಿಗಾಗಿ ಫ್ಲೈ ಓವರ್ ನಿರ್ಮಿಸಿದ ನವಯುಗ ಸಂಸ್ಥೆ , ಯೋಜನೆಯ ಬಗ್ಗೆ ಅರಿವಿದ್ದರೂ ಇದರ ಅವೈಜ್ಞಾನಿಕ ನೀಲನಕ್ಷೆಯ ಬಗ್ಗೆ ಚಕಾರ ಎತ್ತದ ಸಂಸದರು ಹಾಗೂ ಈ ಭಾಗದ ಶಾಸಕರು ನೇರ ಹೊಣೆಯಾಗಿದ್ದಾರೆ. ಈಗ ಕಾಮಗಾರಿ ಪೂರ್ಣಗೊಂಡ ನಂತರ ಇಲ್ಲಿನ ಶಾಸಕರು , ಸಚಿವರೂ ಆದ ಯು.ಟಿ ಖಾದರ್ ಈ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ಹೇಳಿಕೆ ನೀಡುತ್ತಿರುವುದು ಕೇವಲ ಒಂದು ರಾಜಕೀಯ ಗಿಮಿಕ್ ಆಗಿದ್ದು ಪ್ರತಿ ದಿನ ತಾವು ಓಡಾಡುವ ರಸ್ತೆಯ ಮಧ್ಯದಲ್ಲೆ ಈ ಕಾಮಗಾರಿ ನಡೆಯುತ್ತಿದ್ದರೂ ಇಷ್ಟು ದಿನ ಸುಮ್ಮನೇ ಇದ್ದು ಈಗ ಏಕಾಏಕಿ ಇಂತಹ ಹೇಳಿಕೆ ಕೊಟ್ಟು ರಾಜಕೀಯ ಲಾಭ ಪಡೆಯುವ ಬದಲು ಈ ಅವ್ಯವಸ್ಥೆಯನ್ನು ಸರಿಪಡಿಸಲು ಮುಂದಾಗಬೇಕೆಂದು ಡಿವೈಎಫ್‍ಐ ಉಳ್ಳಾಲ ವಲಯ ಕಾರ್ಯದರ್ಶಿ ರಝಾಕ್ ಮೊಂಟೆಪದವು ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ

Leave a Comment